ಕುಮಾರಸ್ವಾಮಿ ಬರೆದಿಟ್ಟುಕೊಳ್ಳಿ, ಸರ್ಕಾರ ಬೀಳುತ್ತೆ: ಶೆಟ್ಟರ್ ಸವಾಲು
ಜಮಖಂಡಿ, ಅಕ್ಟೋಬರ್ 30: ಮುಖ್ಯಮಂತ್ರಿ ಕುಮಾರಸ್ವಾಮಿಗಳೇ ಬರೆದಿಟ್ಟುಕೊಳ್ಳಿ, ಬಿಜೆಪಿ ಮ್ಯಾಜಿಕ್ ನಂಬರ್ ತಲುಪುತ್ತೆ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗುತ್ತೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇರ ಸವಾಲು ಹಾಕಿದ್ದಾರೆ.
ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು ನಿನ್ನೆಯಷ್ಟೇ ಜಗದೀಶ್ ಶೆಟ್ಟರ್ ಭವಿಷ್ಯ ಹೇಳಲು ಆರಂಭಿಸಿದ್ದಾರೆ ಎನ್ನುವ ಟೀಕೆಗೆ ಪ್ರತ್ಯುತ್ತರ ನೀಡಿದ ಶೆಟ್ಟರ್, ನಾನು ಭವಿಷ್ಯ ಹೇಳುತ್ತಿದ್ದೇನೆ ಆದರೆ ಇದು ರಾಜಕೀಯ ಅನುಭವದ ಮೇಲೆ ಹೇಳುತ್ತಿರುವ ಭವಿಷ್ಯ, ಈಗಾಗಲೇ ನಾನು ಹೇಳಿರುವ ಭವಿಷ್ಯ ನಿಜವಾಗಿದೆ ಮುಂದೆಯೂ ಸಮ್ಮಿಶ್ರ ಸರ್ಕಾರ ಪತನಗೊಳ್ಳುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದು ಮತ್ತೊಮ್ಮೆ ನನ್ನ ಭವಿಷ್ಯ ನಿಜವಾಗುತ್ತದೆ ಎಂದು ಸಮರ್ಥಿಸಿಕೊಂಡರು.
ಈ ಹಿಂದೆಯೇ ನಾನು ಲೋಕಸಭಾ ಚುನಾವಣೆ ಮುಗಿಯುವ ತನಕ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವುದಿಲ್ಲ ಎಂದು ಹೇಳಿದ್ದೆ,ಅದು ನಿಜವಾಗಿದೆ. ಕುಮಾರಸ್ವಾಮಿ ಈ ಬಗ್ಗೆ ಉತ್ತರ ನೀಡಲಿ, ಮುಂದೆಯೂ ನನ್ನ ಭವಿಷ್ಯ ನಿಜವಾಗುತ್ತದೆ. ಆದರೆ ನಾನು ಜ್ಯೋತಿಷಿಗಳು ಹೇಳುವ ಭವಿಷ್ಯ ಹೇಳುವುದಿಲ್ಲ. ರಾಜಕೀಯ ಅನುಭವದ ಆಧಾರದ ಮೇಲೆ ಹೇಳುತ್ತೇನೆ ಕುಮಾರಸ್ವಾಮಿಯವರು ಇದನ್ನು ಅರಿತುಕೊಳ್ಳಲಿ ಎಂದು ಹೇಳಿದರು.

ಜಮಖಂಡಿ ಮಾತ್ರವಲ್ಲ ರಾಜ್ಯದ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಪರವಾದ ಅಲೆ ಇದೆ, ಸಮ್ಮಿಶ್ರ ಸರ್ಕಾರವನ್ನು ಉಪ ಚುನಾವಣೆಯಲ್ಲಿ ರಾಜ್ಯದ ಜನರು ತಿರಸ್ಕರಿಸಲಿದ್ದಾರೆ. ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಬಿಜೆಪಿ ಬಲ ಹೆಚ್ಚಾಗಲಿದೆ. ಅಷ್ಟೇ ಅಲ್ಲ ಉಪ ಚುನಾವಣೆ ಫಲಿತಾಂಶದ ಬಳಿಕ ಸಮ್ಮಿಶ್ರ ಸರ್ಕಾರ ಕೊನೆಗಾಣುತ್ತದೆ ಎಂದು ಹೇಳಿದರು.











Click it and Unblock the Notifications