ಸತೀಶ್ ಜಾರಕಿಹೊಳಿ ಪರ ಬ್ಯಾಟ್ ಬೀಸಿದ ಸಿದ್ದರಾಮಯ್ಯ, ಏನು ಒಳಮರ್ಮ?
Recommended Video

ಬೆಳಗಾವಿ, ಡಿಸೆಂಬರ್ 20: 'ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಬಾರದಾ? ಆತನಿಗೆ ಅರ್ಹತೆ ಇಲ್ವಾ?' ಎಂದು ಏಕಾಏಕಿ ಸಿದ್ದರಾಮಯ್ಯ ಅವರು ಸತೀಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿ ಆಶ್ಚರ್ಯ ಹುಟ್ಟಿಸಿದ್ದಾರೆ.
ಬಾದಾಮಿಯಲ್ಲಿ ನಿನ್ನೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, ಸಿಎಂ ಕುರ್ಚಿಗೆ ಯಾರೋ ಒಬ್ಬರು ಗೂಟ ಹೊಡೆದ ಕೂತುಕೊಳ್ಳುವುದಕ್ಕೆ ನನ್ನ ವಿರೋಧವಿದೆ' ಎಂದರು.
ನಾನು ಸಮಾಜವಾದದಲ್ಲಿ ನಂಬಿಕೆ ಇಟ್ಟವನು, ಸತೀಶನೂ (ಸತೀಶ್ ಜಾರಕಿಹೊಳಿ) ಕೂಡ ಒಂದು ಬಾರಿ ಸಿಎಂ ಆಗಬೇಕು, ಅವನಿಗೆ ಅರ್ಹತೆ ಇದೆ ಎಂದು ಸಿದ್ದರಾಮಯ್ಯ ಹೇಳಿದರು.
ಎಲ್ಲ ಸಮಾಜದವರಿಗೂ ಅವಕಾಶ ಕೊಡಲಾಗುವುದು, ಅದು ಬರುವವರೆಗೂ ಕಾಯಬೇಕು, ನಾವು ಕಾದುನೋಡುವ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಪಕ್ಷದ ವಿರುದ್ಧ ಬಂಡಾಯದ ಸೂಚನೆ ನೀಡಿರುವ ಸತೀಶ್ ಜಾರಕಿಹೊಳಿ ಪರವಹಿಸಿ ಸಿದ್ದರಾಮಯ್ಯ ಮಾತನಾಡಿರುವುದು ಆಶ್ಚರ್ಯ ಮೂಡಿಸಿದೆ.

'ಉತ್ತರ ಕರ್ನಾಟಕ ಅಭಿವೃದ್ಧಿ ಸಚಿವ ಸ್ಥಾನವೇ ಬೇಕೆಂದಿಲ್ಲ'
ಮುಂದುವರೆದು ಉತ್ತರ ಕರ್ನಾಟಕದ ವಿಷಯದ ಬಗ್ಗೆ ಮಾತನಾಡಿದ ಅವರು, ಸಚಿವ ಸ್ಥಾನ ಸಿಕ್ಕರೆ ಮಾತ್ರವೇ ಉತ್ತರ ಕರ್ನಾಟಕ ಅಭವೃದ್ಧಿ ಮಾಡಬೇಕು ಎಂಬುದು ಸುಳ್ಳು, ಶಾಸಕರಾಗಿದ್ದುಕೊಂಡು ಸಹ ಅಭಿವೃದ್ಧಿ ಮಾಡಬಹುದು ಎಂದು ಹೇಳಿದರು.

'ರಮೇಶ್ ಜಾರಕಿಹೊಳಿ ವಿಷಯ ಗೊತ್ತಿಲ್ಲ'
ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕಿತ್ತೊಗೆಯಲಾಗುತ್ತದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆ ವಿಷಯ ನನಗೆ ತಿಳಿದಿಲ್ಲ ಎಂದು ಜಾರಿಕೊಂಡರು. ಅವರ ಈ ಜಾರಿಕೆ ಉತ್ತರ ಹೆಚ್ಚಿನ ಅನುಮಾನಗಳಿಗೆ ಕಾರಣವಾಗುತ್ತಿದೆ.

ಪಕ್ಷದ ಮೇಲೆ ಮುನಿಸಿಕೊಂಡಿರುವ ಸತೀಶ್
ಸಚಿವ ಸ್ಥಾನ ಸಿಗದೆ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದ ಮೇಲೆ ಬೇಸರ ಮಾಡಿಕೊಂಡಿದ್ದಾರೆ. ಸರ್ಕಾರದ ವಿರುದ್ಧವೂ ಮಾತನಾಡಿದ್ದಾರೆ. ಬಂಡಾಯ ಏಳುವ ಮುನ್ಸೂಚನೆಯನ್ನೂ ನೀಡಿದ್ದರು ಆದರೂ ಸಹ ಸಿದ್ದರಾಮಯ್ಯ ಅವರು ಸತೀಶ್ ಜಾರಕಿಹೊಳಿ ಅವರಿಗೆ ಬೆಂಬಲ ನೀಡಿರುವುದು ಆಶ್ಚರ್ಯ ಮೂಡಿಸಿದೆ.

ಸಂಪುಟದಲ್ಲಿ ಅವಕಾಶ ಸಿಗುತ್ತಾ?
ಡಿಸೆಂಬರ್ 22 ರಂದು ಸಚಿವ ಸಂಪುಟ ವಿಸ್ತರಣೆ ನಡೆಯಲಿದ್ದು, ಅಂದು ಸತೀಶ್ ಜಾರಕಿಹೊಳಿಗೆ ಅವಕಾಶ ನೀಡಲಾಗುತ್ತದೆಯೋ ಇಲ್ಲವೋ ಅನುಮಾನ ಇದೆ. ಸತೀಶ್ ಜಾರಕಿಹೊಳಿ ಸಹೋದರ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಸಹ ಹೆಚ್ಚಿದೆ.












Click it and Unblock the Notifications