ದಲಿತರ ಬಗ್ಗೆ ಸಂಸದ ತೇಜಸ್ವಿ ಸೂರ್ಯಗೆ ಅಸಡ್ಡೆ, ಈ ರೀತಿ ಮಾತನಾಡುವ ಚಟ: ತಿಮ್ಮಾಪುರ್
ಬಾಗಲಕೋಟೆ, ಏಪ್ರಿಲ್ 30: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ದಲಿತರನ್ನು ಕಂಡರೆ ಅಸಡ್ಡೆ ಇದೆ. ಅವರು ಹಿಂದಿನಿಂದಲೂ ಹೀಗೆ ಮಾತನಾಡಿಕೊಂಡು ಬಂದಿದ್ದಾರೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ದೂರಿದರು. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಉಗ್ರರು ದಾಳಿ ಮಾಡುವಾಗ ಧರ್ಮ ನೋಡಿ ಹತ್ಯೆಗೈದಿಲ್ಲ ಎಂಬ ವಿಚಾರದಲ್ಲಿ ಸಂಸದರಿಗೂ, ಸಚಿವರಿಗೂ ವಾಕ್ಸಮರ ಶುರುವಾಗಿದೆ. ನಿಮ್ಮನ್ನು ಚಡ್ಡಿ ಬಿಚ್ಚಿ ಚೆಕ್ ಮಾಡಿದ್ದರೆ ಏನು ಮಾಡುತ್ತಿದ್ರಿ ಎಂದು ಸಂಸದರು ವಾಗ್ದಾಳಿ ನಡೆಸಿದ್ದರು.
ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಸುದ್ದಿಗಾರರ ಮುಂದೆ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ತಿರುಗೇಟು ಕೊಟ್ಟರು. ಸಂಸದರಿಗೆ ದಲಿತರನ್ನು ಕಂಡರೆ ಅಸಡ್ಡೆ ಭಾವನೆ ಇದೆ. ದಲಿತರನ್ನು ಕಂಡರೆ ಆ ರೀತಿ ಮಾತನಾಡುವ ಚಟವಿದೆ. ನಮ್ಮ ಸಮುದಾಯ ಬಗ್ಗೆ ಸಂವಿಧಾನದ ಬಗ್ಗೆ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿ ಕಾರಿದರು.

ದಲಿತರು ಬಗ್ಗೆ ಮಾತನಾಡುವ ಸಂಸ್ಕೃತಿ ಸಂಸದರಲ್ಲಿ ಏಕೆ ಬಂದಿದಿಯೋ ಗೊತ್ತಿಲ್ಲ. ನಿಮ್ಮ ನಾಲಿಗೆ ಹತೋಟಿಲ್ಲಿ ಇರಬೇಕಿತ್ತು. ಆದರೆ ಹತೋಟಿಯಲ್ಲಿ ಇಟ್ಟುಕೊಳ್ಳದೇ ಹರಿಬಿಡುವ ಸಂಸ್ಕೃತಿ ತೇಜಸ್ವಿ ಸೂರ್ಯ ಅವರಲ್ಲಿದೆ. ಅಂತಹ ಸಂಸ್ಕೃತಿ ನಮ್ಮಲ್ಲಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಹಿಂದಿನಿಂದಲೂ ದಲಿತ ವಿರೋಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ಹೇಳಿಕೆಗಳು ಅವರಿಗೆ ಒಳ್ಳೆಯದಲ್ಲ. ಅವರ ಹೇಳಿಕೆಗಳನ್ನು ನಾನು ಖಂಡಿಸುತ್ತೇನೆ ಎಂದರು.
ವೇದಿಕೆ ಮೇಲೆ ಮಾತನಾಡುವಾಗ ಮುಖ್ಯಮಂತ್ರಿಗಳು ಸರಿ ಅಂತೇಳಿ ಕೈ ಮಾಡಿದ್ದಾರೋ ಅಥವಾ ಅವರ ಮೇಲೆ ಕೈ ಮಾಡಿದ್ದಾರೋ ಎಂಬುದು ಗೊತ್ತಿಲ್ಲ ಎಂದು ಬೆಳಗಾವಿ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿ ಮೇಲೆ ಸಿಎಂ 'ಕೈ' ಎತ್ತಿದ ವಿಚಾರಕ್ಕೆ ಸಚಿವರು ಪ್ರತಿಕ್ರಿಯಿಸಿದರು.
ಬಿಜೆಪಿ 18 ಶಾಸಕರ ಅಮಾನತು ರದ್ದು ಮಾಡುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಹಾಗೂ ಮುಖ್ಯಮಂತ್ರಿಗಳಿಗೆ ನಾಯಕರು ಪತ್ರೆ ಬಎದಿದ್ದಾರೆ. ಇದೆಲ್ಲವನ್ನು ರಾಜ್ಯಪಾಲರು ನೋಡಿಕೊಳ್ಳುತ್ತಾರೆ. ತೀರ್ಮಾನ ಅವರಿಗೆ ಬಿಟ್ಟದ್ದು ಎಂದು ಹೇಳಿದರು.
ಏನಿದು ಸಚಿವ ಸಂಸದರ ನಡುವಿನ ವಾಕ್ಸಸಮರ?
ಪಹಲ್ಗಾಮ್ ದಾಳಿ ಬಳಿಕ ಆರ್.ಬಿ.ತಿಮ್ಮಾಪುರ ಅವರು ಉಗ್ರರು ಧರ್ಮ ನೋಡಿ ಕೊಂದಿಲ್ಲ. ಈ ಬಗ್ಗೆ ಮೃತರ ಪತ್ನಿ ಹೇಳಿಕೆ ನೀವು ಗಮನಿಸಿ. ಮುಸ್ಲಿಮರನ್ನು ಕೊಂದಿಲ್ಲವೇ. ಹಿಂದೂ ಧರ್ಮದವರನ್ನು ಹುಡುಕಿ ಹುಡುಕಿ ಕೊಂದರು ಎಂದು ಹೇಳುವುದು ಸರಿಯಲ್ಲ. ಘಟನೆ ಬಳಿಕ ಮೃತರ ಕುಟುಂಬಸ್ಥರು ಆಘಾತದಲ್ಲಿ ಹೀಗೆ ಧರ್ಮ ಕೇಳಿ ಕೊಂದರ ಎಂದಿರಬಹುದು ಎಂದು ಉಗ್ರರ ದಾಳಿಗೆ ಸಚಿವ ಸಮಜಾಯಿತು ನೀಡಿದ್ದರು.
ಸಚಿವರ ಈ ಹೇಳಿಕೆಯನ್ನು ಖಂಡಿಸಿದ್ದ ಸಂಸದ ತೇಜಸ್ವಿ ಸೂರ್ಯ ಅವರು, ಉಗ್ರರು ನಿಮ್ಮ ಹಿಂದೂ ಧರ್ಮವೇ ಎಂದು ಬಾಯಿ ಮಾತಿನಿಂದ ಮಾತ್ರ ಕೇಳಲಿಲ್ಲ. ಅಲ್ಲಿಯವರ ಚಡ್ಡಿ ಬಿಚ್ಚಿಸಿ ಚೆಕ್ ಮಾಡಿ ಪಾಯಿಂಟ್ ಬ್ಲಾಂಕ್ ರೇಂಜಿನಲ್ಲಿ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ನಿಮ್ಮ ಚಡ್ಡಿ ಬಿಚ್ಚಿ ಚೆಕ್ ಮಾಡಿದ್ರೆ ನೀವ್ ಏನು ಮಾಡುತ್ತಿದ್ರಿ. ಈ ರೀತಿ ಹೇಳಿಕೆ ಸರಿಯಲ್ಲ ಎಂದು ಅವರು ಹೇಳಿದ್ದರು.












Click it and Unblock the Notifications