Badami Constituency: ಈ ಬಾರಿ ಬಾದಾಮಿ ಬನಶಂಕರಿ ದೇವಿ ಕೃಪೆ ಯಾರಿಗೆ?
ಈ ಬಾರಿ ಬಾದಾಮಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ನೇರ ಪೈಪೋಟಿ ಇದೆ. ಕಾಂಗ್ರೆಸ್ ಬಿಜೆಪಿ ಸೆಣಸಲಿವೆ. ಇದಕ್ಕೆ ಸಂಬಂಧಿಸಿದ ವರದಿ, ವಿಶ್ಲೇಷಣೆ ಓದಿ.
ಬಾದಾಮಿ ಎಂದೊಡನೆ ಕರ್ನಾಟಕವನ್ನಾಳಿದ ಹೆಮ್ಮೆಯ ಚಾಲುಕ್ಯ ರಾಜರು ಮತ್ತು ವಂಶಸ್ಥರು ನೆನಪಾಗುತ್ತಾರೆ. ಚಾಲುಕ್ಯ ಮಹಾಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದ ಇತಿಹಾಸ ಪ್ರಸಿದ್ದ ಕ್ಷೇತ್ರವೇ ಬಾದಾಮಿ. ಅಂದಿನ ಚಾಲುಕ್ಯರ ರಾಜಧಾನಿ ಇಂದು ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕಾಗಿದ್ದು, ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
ಐತಿಹಾಸಿಕತೆಯನ್ನು ನೆನಪಿಸುವ ಚಾಲುಕ್ಯರ ಕಾಲದ ದೇವಾಲಯ ಹಾಗೂ ಕಟ್ಟಡಗಳನ್ನು ಇಲ್ಲಿ ಕಾಣಬಹುದು. ಗುಡ್ಡದ ಬದಿಯನ್ನು ಸುಂದರವಾಗಿ ಕೊರೆದ ಬಾದಾಮಿಯ ಗುಹಾಲಯಗಳು ವಿಶ್ವವಿಖ್ಯಾತವಾಗಿದೆ. ಬಾದಾಮಿ ಗುಹಾಲಯ, ಅಗಸ್ತ್ಯ ಸರೋವರ, ಬಾದಾಮಿ ಕೋಟೆ, ಭೂತನಾಥ ದೇವಾಲಯ, ಬಾದಾಮಿ ಬನಶಂಕರಿ ದೇವಿ ದೇವಿಸ್ಥಾನ, ಬಾದಾಮಿ ವಸ್ತು ಸಂಗ್ರಹಾಲಯವನ್ನು ಹೊಂದಿದೆ. ಈ ಸುಂದರವಾದ ಗುಹಾಲಯವನ್ನು ಹಾಗೂ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳನ್ನು ಕಣ್ಣಾರೆ ಕಂಡು ಆನಂದಿಸಲು ಅನೇಕ ರಾಜ್ಯಗಳಿಂದ ಬಾದಾಮಿಗೆ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.
ಬಾದಾಮಿ ಶಿವ ಹಾಗೂ ವಿಷ್ಣುವಿನ ದೇವಾಲಯಗಳ ತವರು. ಗುಹಾಂತರ ದೇವಾಲಯಗಳ ನಾಡು. ಸುಂದರ ಹಾಗೂ ಕಲಾತ್ಮಕ ಕೆತ್ತನೆ ಕೆಲಸಗಳು ಇಲ್ಲಿನ ಎಲ್ಲ ಮನೆಮನೆಗಳಲ್ಲೂ ರಾರಾಜಿಸುತ್ತವೆ. ಬಾದಾಮಿಯು ಸುಂದರ ಪುಷ್ಕರಣೆ ಹಾಗೂ ಮಣ್ಣಿನ ಬಣ್ಣದ ಬಳಪದ ಕಲ್ಲಿನ ಗುಡ್ಡಗಳ ನಡುವೆ ಇರುವ ಸುಂದರ ತಾಣ. ಇಲ್ಲಿ ನಡೆಯುವ ನಾಟಕ, ನೃತ್ಯ, ಸಂಗೀತೋತ್ಸವಗಳು ಉತ್ತರ ಕರ್ನಾಟಕದ ಕಲಾ ಶ್ರೀಮಂತಿಕೆಯನ್ನು ಬಿಂಬಿಸುತ್ತವೆ.
ಹೀಗೆ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿರುವ ನಮ್ಮ ಹೆಮ್ಮೆಯಾಗಿರುವ ಬಾದಾಮಿ ಈ ಬಾರಿ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿದೆ. ಮುಂಬರುವ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಬಾದಾಮಿ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದಾಗಿದೆ. 2018ರ ಕಳೆದ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿದ್ದರಾಮಯ್ಯ ಜಯ ಗಳಿಸಿದ್ದರು. ಭಾರತೀಯ ಜನತಾ ಪಾರ್ಟಿಯ ಬಿ ಶ್ರೀರಾಮುಲು 1,696 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಬಾದಾಮಿ ಕ್ಷೇತ್ರದ ಚುನಾವಣಾ ಇತಿಹಾಸ, ಈಗಿನ ಬೆಳವಣಿಗೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಾದಾಮಿಯಿಂದ ಸಿದ್ದರಾಮಯ್ಯ ಸ್ಪರ್ಧಿಸುವರೇ?
ಈ ಬಾರಿ ಬಾದಾಮಿ ಕ್ಷೇತ್ರದಲ್ಲಿ ಪ್ರಬಲ ಮೂರು ಪಕ್ಷದಿಂದ ಯಾರು ಸ್ಪರ್ಧಿಸಲಿದ್ದಾರೆನ್ನುವ ಕುತೂಹಲ ಮೂಡಿದೆ. ಕಳೆದ ಬಾರಿ ಬಾದಾಮಿಯಿಮದ ಸ್ಪರ್ಧಿಸಿದ ಜಯ ಸಾಧಿಸಿದ್ದ ಸಿದ್ದರಾಮಯ್ಯ ಈ ಬಾರಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವದು ರಾಜ್ಯಾದ್ಯಂತ ಬಿಸಿ ಬಿಸಿ ಚರ್ಚೆ ಆಗುತ್ತಿದೆ. ಸಿದ್ದರಾಮಯ್ಯ ಮಾತ್ರ ತಾವು ಬಾದಾಮಿಯಿಂದ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.
ಆದರೆ ಸಿದ್ದರಾಮಯ್ಯ ಅವರಿಗೆ ಸೇಫ್ ಇರುವುದು ಬಾದಾಮಿ ಮತಕ್ಷೇತ್ರ ಮಾತ್ರ ಎಂಬ ಸ್ಥಳೀಯ ವಿಶ್ಲೇಷಣೆಯೂ ಹೊರಬಿದ್ದೆ. ಆಕಸ್ಮಾತ್ ಆಗಿ ಸಿದ್ದರಾಮಯ್ಯ ಬಾದಾಮಿ ಬಿಟ್ಟಿದ್ದಾದರೆ, ಜೆಡಿಎಸ್ ಪಕ್ಷಕ್ಕೆ ಈ ಬಾರಿ ಲಾಭ ಆಗಲಿದೆ ಎನ್ನುವುದನ್ನು ಹೊಸ ಸಮೀಕ್ಷೆಗಳು ಹೇಳುತ್ತಿವೆ.

ಬಾದಾಮಿಯಲ್ಲಿ ಜೆಡಿಎಸ್ ಅಭ್ಯರ್ಥಿ ಯಾರು?
ಹಿಂದಿನ ಚುನಾವಣೆಯಲ್ಲಿ 25,000 ಮತ ಪಡೆದು ಸೋಲು ಕಂಡಿದ್ದ ಜೆಡಿಎಸ್ ಪಕ್ಷದ ಅಭ್ಯರ್ಥಿ ಹನಮಂತ ಮಾವಿನಮರದ ನಂತರ ಸುಮ್ಮನೆ ಕೂಡದೆ ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರನ್ನು ಸಂಘಟಿಸುವಲ್ಲಿ ನಿರಂತರ ಕೆಲಸ ಮಾಡುತ್ತಾ ಬಂದಿದ್ದಾರೆ. ಈ ಕ್ಷೇತ್ರದಲ್ಲಿ ಸಂಚಾರ ಮಾಡುತ್ತ, ಸಾಮಾನ್ಯರ ಮತದಾರರಿಗೆ ಭೇಟಿ ಆಗುವ ಕೆಲಸ ಮಾಡಿದ್ದಾರೆ. ಹನಮಂತ ಮಾವಿನಮತ ಪಂಚಮಸಾಲಿ ಲಿಂಗಾಯತ ಸಮುದಾಯದವರು.
ಜೊತೆಗೆ ಎಲ್ಲ ಸಮುದಾಯದೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಆದರೆ, ಒಂದು ವೇಳೆ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಕ್ಷೇತ್ರಕ್ಕೆ ಬಾರದೇ ಇದ್ದಲ್ಲಿ ಜೆಡಿಎಸ್ ಗೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಗಳು ಕಾಣುತ್ತಿವೆ. ಈ ಹಿಂದೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಆಡಳಿತ ನೋಡಿದ ಬಾದಾಮಿ ಕ್ಷೇತ್ರದ ಜನತೆ ಈ ಯುವ ನಾಯಕನ ಮೇಲೆ ಹೆಚ್ಚು ಭರವಸೆಗಳನ್ನು ಇಟ್ಟುಕೊಂಡಿದ್ದಾರೆ.
ಜೊತೆಗೆ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಈ ಬಾರಿ ಬಾದಾಮಿ ಕ್ಷೇತ್ರದ ಗುಳೇದಗುಡ್ಡ ಪಟ್ಟಣದಲ್ಲಿ ಪಂಚರತ್ನ ರಥಯಾತ್ರೆಗೆ ಅಧಿಕ ಜನ ಬೆಂಬಲ ನೀಡಿರುವುದು ಕಂಡುಬಂತು.

ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರ ಒಲವು
ಬಾದಾಮಿ ಮತಕ್ಷೇತ್ರದ ಕುರುಬ ಸಮುದಾಯ, ಅಲ್ಪ ಸಂಖ್ಯಾತ ವಾಲ್ಮೀಕಿ ಹಾಗೂ ಲಿಂಗಾಯತ ಸಮುದಾಯದವರು ನಿರ್ಣಾಯಕ ಮತದಾರರು ಇದ್ದಾರೆ. ಹಿಂದಿನ ಸಲ ಸಿದ್ದರಾಮಯ್ಯ ಬಾದಾಮಿ ಮತಕ್ಷೇತ್ರಕ್ಕೆ ಸ್ಪರ್ಧಿಸಿದಾಗ ಕ್ಷೇತ್ರದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಯಾವುದೇ ಕೆಲಸ ಸಹ ಮಾಡಿದ್ದಿಲ್ಲ.
ಈಗ ಸುಮಾರು ಮೂರು ಸಾವಿರ ಕೋಟಿಗೂ ಅಧಿಕ ಹಣ ತಂದು, ನಾನಾ ಅಭಿವೃದ್ಧಿ ಕೆಲಸ ಕಾರ್ಯಗಳನ್ನೂ ಮಾಡಿದ್ದಾರೆ. ಈ ಕ್ಷೇತ್ರದಿಂದ ಮುಂದಿನ ಮುಖ್ಯಮಂತ್ರಿ ಆಗುವ ಬಗ್ಗೆ ಪ್ರಚಾರ ಮಾಡಲು ಕಾರ್ಯಕರ್ತರೆಲ್ಲ ಸಿದ್ದರಾಗಿದ್ದಾರೆ. ಹಿಂದಿನ ಸಲ ಬಿಜೆಪಿ ಪಕ್ಷದಿಂದ ಶ್ರೀರಾಮು ಪ್ರತಿಸ್ಪರ್ಧಿಯಾಗಿದ್ದರಿಂದ ವಾಲ್ಮೀಕಿ ಸಮುದಾಯ ಮತಗಳು ಕಾಂಗ್ರೆಸ್‌ಗೆ ಅತಿ ಕಡಿಮೆ ಬಂದಿದ್ದವು. ವಾಲ್ಮೀಕಿ ಸಮುದಾಯ ಮತ್ತೆ ಕಾಂಗ್ರೆಸ್ ನತ್ತ ವಾಲುವ ಸಾಧ್ಯತೆ ಹೆಚ್ಚಿದೆ. ಇದರ ಮಧ್ಯೆ ಇಡೀ ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಪರ ಒಲವು ಜಾಸ್ತಿ ಇದೆ.

ಭೀಮಸೇನೆ ಚಿಮ್ಮನಕಟ್ಟಿ ಹೇಳುವುದೇನು?
ಒಂದು ವೇಳೆ ಸಿದ್ದರಾಮಯ್ಯ ಅವರು ಮುಂಬರುವ ವಿಧಾನಸಭೆ ಚುನಾವಣೆಗೆ ಬಾದಾಮಿಯಿಂದ ಸ್ಪರ್ಧೆ ಮಾಡದೇ ಹೋದಲ್ಲಿ ಮುಂದೆ ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಪ್ರಶ್ನೆ ಕೂಡ ಈಗ ಎದುರಾಗಿದೆ. ಮಾತ್ರವಲ್ಲ, ಸಾರ್ವಜನಿಕ ವಲಯದಲ್ಲಿಯೂ ಸಂಚಲನ ಮೂಡಿಸಿದೆ. ಜೊತೆಗೆ ವಿಪಕ್ಷವಾದ ಬಿಜೆಪಿಯಿಂದ ಯಾರು ಸ್ಪರ್ಧಿಸಲಿದ್ದಾರೆ ಎಂಬ ಪ್ರಶ್ನೆ ಕೂಡ ಎದುರಾಗಿದೆ. ಕಳೆದ ಬಾರಿ ಬಿಜೆಪಿಯಿಂದ ಶ್ರೀರಾಮುಲು ಸ್ಪರ್ಧಿಸಿದ್ದರು. ಈ ಬಾರಿ ಯಾರಿಗೆ ಒಲಿಯಲಿದೆ ಬಿಜೆಪಿ ಟಿಕೆಟ್ ಎಂಬ ಕುತೂಹಲ ಕೂಡ ಎದುರಾಗಿದೆ.
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ನಂತರದ ಸ್ಥಾನದಲ್ಲಿ ಮಾಜಿ ಸಚಿವ ಬಿ.ಬಿ ಚಿಮ್ಮನಕಟ್ಟಿ ಅವರ ಹೆಸರು ಹೆಚ್ಚು ಪ್ರಚಲಿತದಲ್ಲಿದೆ. ಆದರೆ ಅವರ ಅನಾರೋಗ್ಯ ಕಾರಣದಿಂದ ಅವರ ಪುತ್ರ ಭೀಮಸೇನೆ ಚಿಮ್ನಕಟ್ಟಿ ಅವರ ಹೆಸರು ಕೂಡ ಕೇಳಿಬರುತ್ತಿದೆ. ಇದರ ನಡುವೆ ಕುರುಬ ಸಮುದಾಯದ ಮಹೇಶ ಹೊಸಗೌಡರು ಕೂಡ ಈಗಾಗಲೇ ಅರ್ಜಿ ಹಾಕಿದ್ದು, ರೇಸ್‌ನಲ್ಲಿರುವುದಾಗಿ ಹೇಳಿದ್ದಾರೆ.
ಆದರೆ, ಸ್ಪರ್ಧಾ ಕಣದಲ್ಲಿರುವ ವ್ಯಕ್ತಿಯ ಮೇಲೆಯೂ ಈ ಸಮುದಾಯದ ಮತಗಳು ನಿರ್ಣಾಯಕವಾಗುತ್ತವೆ ಎಂಬುವುದರಲ್ಲಿ ಎರಡು ಮಾತಿಲ್ಲ. ಜೊತೆಗೆ ಸಿದ್ದರಾಮಯ್ಯ ಅವರು ಒಮ್ಮತದ ಅಭ್ಯರ್ಥಿಯಾಗಿ ಯಾರನ್ನು ಸೂಚಿಸುತ್ತಾರೆಯೋ ಅಂತಹ ವ್ಯಕ್ತಿ ಕೂಡ ಇಲ್ಲಿ ಅಚ್ಚರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದನ್ನು ಅಲ್ಲಗೆಳೆಯುವಂತಿಲ್ಲ. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಚಿಮ್ಮನಕಟ್ಟಿ ಅವರ ಕುಟುಂಬಕ್ಕೆ ಟಿಕೆಟ್ ಕೋಡುವ ಆಲೋಚನೆಯಲ್ಲಿದ್ದರೂ ಕೊನೆ ಕ್ಷಣದಲ್ಲಿ ಸಿದ್ದರಾಮಯ್ಯ ಅವರ ಸ್ಪರ್ಧೆ ನಿರ್ಧಾರವಾದರೆ ಚಿಮ್ಮನಕಟ್ಟಿ ಅವರು ಈ ಬಾರಿಯೂ ಕ್ಷೇತ್ರತ್ಯಾಗ ಮಾಡಿದರೂ ಅಚ್ಚರಿಯಿಲ್ಲ.
'ಕಳೆದ ಐದು ವರ್ಷದಗಳಲ್ಲಿ ಬಾದಾಮಿ ಮತಕ್ಷೇತ್ರ ಸಾಕಷ್ಟು ಅಭಿವೃದ್ಧಯಾಗಿದೆ. ಮತ್ತೆ ಸಿದ್ದರಾಮಯ್ಯ ಅವರು ಈ ಕ್ಷೇತ್ರಕ್ಕೆ ಬಂದರೆ ನಾನು ಮತ್ತು ನಮ್ಮ ಕುಟುಂಬ ನಮ್ಮ ಕಾರ್ಯಕರ್ತರು ಹೃದಯಪೂರ್ವಕವಾಗಿ ಅವರನ್ನು ಸ್ವಾಗಿಸುತ್ತೇವೆ. ಸಿದ್ದರಾಮಯ್ಯನವರು ಯಾವುದೇ ಸಂದರ್ಭದಲ್ಲಿ ಕರೆದರೂ ಹೋಗುತ್ತೇನೆ. ಅವರು ಹೇಳಿದ ಹಾಗೆ ನಡೆದುಕೊಳ್ಳುತ್ತೇನೆ. ನಮ್ಮ ಬಾದಾಮಿ ಅಭಿವೃದ್ಧ ನನ್ನ ಮತ್ತು ನಮ್ಮ ತಂದೆಯವರ ಕನಸಾಗಿದೆ. ಅದು ನನಸಾಗುವುದಾದರೆ ನಾವು ಸಿದ್ದರಾಮಯ್ಯ ಅವರಿಗೆ ಕ್ಷೇತ್ರವನ್ನು ಬಿಟ್ಟು ಕೊಡಲು ಸದಾ ಸನ್ನದ್ಧರಾಗಿದ್ದೇನೆ' ಅಂತ ಕಾಂಗ್ರೆಸ್ ಯುವ ಮುಖಂಡ ಭೀಮಸೇನೆ ಚಿಮ್ಮನಕಟ್ಟಿ ತಿಳಿಸಿದ್ದಾರೆ.

ಯಾರಿಗೆ ಒಲಿಯಲಿದೆ ಬಿಜೆಪಿ ಟಿಕೆಟ್?
ಡಿಡೆಎಸ್‌ನಿಂದ ಹನಮಂತ ಮಾವಿನಮರ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿಕೋಮಡಿದ್ದಾರೆ. ಇನ್ನು ಬಿಜೆಪಿಯಿಂದ ಮಹಾಂತೇಶ್ ಮಮದಾಪುರ ಹಾಗೂ ಎಂ.ಕೆ.ಪಟ್ಟಣಶೆಟ್ಟ ಅವರ ನಡುವೆ ಪೈಪೋಟಿ ಇದೆ. ಇನ್ನೊಂದೆಡೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ ಮಾಜಿ ಶಾಸಕ ರಾಜಶೇಖರ ಶಿಲವಂತ ಅವರು ಈ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲರಾಗಿ ಇರುವುದು ಕಂಡುಬರುತ್ತಿಲ್ಲ.
ಸಿದ್ದರಾಮಯ್ಯ ಅವರು 2018ರಲ್ಲಿ ರಕ್ಷಣಾ ಕ್ಷೇತ್ರವಾಗಿ ಬಾದಾಮಿಯನ್ನು ಕೊನೆಕ್ಷಣದಲ್ಲಿ ಆಯ್ಕೆ ಮಾಡಿಕೊಂಡಿದ್ದರು. ಅವರ ನಿರೀಕ್ಷೆಯಂತೆ ಚಾಮುಂಡೇಶ್ವರಿ ಕೈಬಿಟ್ಟರೂ ಬಾದಾಮಿ ಬನಶಂಕರಿ ದೇವಿ ಕೈಹಿಡಿದಳು.

ಸಿದ್ದರಾಮಯ್ಯ ಅಭಿಮಾನಿಗಳ ಸಾಮೂಹಿಕ ರಾಜೀನಾಮೆ ಬೆದರಿಕೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಗೊಂದಲ, ಸಮಸ್ಯೆ ಮುಂದುವರಿದಿದೆ. ಕೋಲಾರದಲ್ಲಿ ಸ್ಪರ್ಧಿಸುತ್ತೇನೆ ಎಂದು ಸ್ವತ: ಸಿದ್ದರಾಮಯ್ಯನವರೇ ಈ ಹಿಂದೆ ಘೋಷಣೆ ಮಾಡಿದ್ದಾರೆ. ಆದರೆ ಬಾದಾಮಿ, ವರುಣಾ ಕ್ಷೇತ್ರದ ಜನತೆ, ಅಭಿಮಾನಿಗಳ ಬೇಡಿಕೆ ಹೆಚ್ಚಾಗುತ್ತಲೇ ಇದೆ.
ಸಿದ್ದರಾಮಯ್ಯ ಅವರು ಬಾದಾಮಿಯಿಂದಲೇ ಸ್ಪರ್ಧಿಸಬೇಕು ಎಂಬ ಮನವಿಯನ್ನು ಮಾಡಿದ್ದಾರೆ. ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಮತ್ತು ಕ್ಷೇತ್ರದ ಜನತೆ 300 ಕ್ಕೂ ಕ್ರೂಸರ್ ವಾಹನಗಳಲ್ಲಿ ಬೆಂಗಳೂರಿಗೆ ಬಂದು 'ನೀವು ಕೋಲಾರಕ್ಕೆ ಶಿಫ್ಟ್ ಆಗುವ ಹಾಗಿಲ್ಲ' ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕು, ಯಾವುದೇ ಕಾರಣಕ್ಕೂ ನಿಮ್ಮನ್ನು ನಾವು ಬಿಡುವುದಿಲ್ಲ ಎಂದು ಪಟ್ಟುಬಿಡದೆ ಧರಣಿ ಪ್ರತಿಭಟನೆ ನಡೆಸಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ಅವರು ಬಾದಾಮಿಯಿಂದ ಸ್ಪರ್ಧಿಸದೇ ಇದ್ದರೆ ಕಾಂಗ್ರೆಸ್‌ಗೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಹೈಕಮಾಂಡ್ ನಿರ್ಧಾರವೇ ಅಂತಿಮ ನಿರ್ಧಾರ ಎಂದ ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರು ಪುನ: ಬಾದಾಮಿಯಿಂದ ಸ್ಪರ್ಧೆ ಮಾಡುವ ವಿಷಯದಲ್ಲಿ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದಾರೆ. ಅವರು ಕೋಲಾರಕ್ಕೆ ಹೋದರೆ ಅವರ ಉತ್ತರಾಧಿಕಾರಿಯಾಗಲು ಕಾಂಗ್ರೆಸ್‌ನಲ್ಲಿ ಹಲವರ ಪೈಪೋಟಿ ಒಂದೆಡೆ ನಡೆದಿದೆ. ಆದರೆ, ಅವರ ಆಪ್ತ ಅಭಿಮಾನಿಗಳು ಮಾತ್ರ ಮತ್ತೊಮ್ಮೆ ಸಿದ್ದರಾಮಯ್ಯ ಅವರೇ ಸ್ಪರ್ಧಿಸಬೇಕೆಂಬ ಪಟ್ಟು ಹಿಡಿದಿದ್ದಾರೆ. ಬಾದಾಮಿಯಲ್ಲಿ ಕಾಂಗ್ರೆಸ್‌ನ ಗುಂಪುಗಾರಿಕೆ ಶುರುವಾಗಿದೆ. ಇದರ ಪರ-ವಿರುದ್ಧವಾಗಿಯೂ ಇವೆ.
ಸಿದ್ದರಾಮಯ್ಯ ಬರಬೇಕೆಂಬ ಒತ್ತಡ ಒಂದೆಡೆ ಇದ್ದರೆ, ಅವರು ಬರುವುದು ಬೇಡ ಎಂಬುದು ಕೆಲವರ ನಿಲುವು. ಹೀಗಾಗಿ ಪಕ್ಷದಲ್ಲಿನ ಗುಂಪುಗಾರಿಕೆ, ತಮ್ಮ ಚುನಾವಣೆ ಫಲಿತಾಂಶದ ಮೇಲೆ ಬೀಳದಿರಲಿ ಎಂಬ ಎಚ್ಚರಿಕೆಯ ಹೆಜ್ಜೆ ಸಿದ್ದರಾಮಯ್ಯ ಇಡುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಒಟ್ಟಾರೆ ಕ್ಷೇತ್ರ ದೂರ ಆಗುತ್ತದೆ ಎಂಬ ಪ್ರಮುಖ ಅಂಶದೊಂದಿಗೆ ಸಿದ್ದರಾಮಯ್ಯ ಈ ಬಾರಿ ಬಾದಾಮಿ ಕ್ಷೇತ್ರದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಇದ್ಯಾಗ್ಯೂ ಕೊನೆ ಗಳಿಗೆಯಲ್ಲಿ ಪುನ: ನಮ್ಮಲ್ಲೂ ಸ್ಪರ್ಧೆ ಮಾಡಲಿ ಎಂಬ ಒತ್ತಾಸೆ ಅವರ ಅಭಿಮಾನಿಗಳದ್ದು.

ಕಾಂಗ್ರೆಸ್‌ಗೆ ಕುರುಬ, ಮುಸ್ಲಿಂ ಮತಗಳು
2018ರ ಚುನಾವಣೆಯಲ್ಲಿ ಬಾದಾಮಿ ಸಿದ್ದರಾಮಯ್ಯ ಅವರ ಆಯ್ಕೆ ಆಗಿರಲಿಲ್ಲ. ಜಿಲ್ಲೆಯ ಎಲ್ಲ ಹಿರಿಯ ಕೈ ಮುಖಂಡರ ಒತ್ತಾಸೆ ಮತ್ತು ಮಾಜಿ ಸಚಿವ ಬಿಬಿ ಚಿಮ್ಮನಕಟ್ಟಿ ಅವರ ಅನಾರೋಗ್ಯ ಕಾರಣ ಹಾಗೂ ಕುರುಬ ಸಮಾಜ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಬಾದಾಮಿ ಕ್ಷೇತ್ರವನ್ನು ಸಿದ್ದರಾಮಯ್ಯ ಆಯ್ಕೆ ಮಾಡಿಕೊಂಡರು. ಸಿದ್ದರಾಮಯ್ಯ ಅವರನ್ನು ಬಾದಾಮಿ ಕ್ಷೇತ್ರಕ್ಕೆ ಕರೆ ತರುವಲ್ಲಿ ಮಾಜಿ ಸಚಿವ ಎಸ್.ಆರ್ ಪಾಟೀಲ ಸಹಿತ ಹಲವರ ಪಾತ್ರವಿದೆ.
ಆಗ ಬಾದಾಮಿಗೆ ಟಿಕೆಟ್ ಫೋಷಣೆಯಾಗಿದ್ದ ವೈದ್ಯ ಡಾ. ದೇವರಾಜ ಪಾಟೀಲ ಪ್ರಚಾರದಲ್ಲಿ ತೋಗಿದ್ದರೂ ತಮ್ಮದೇ ನಾಯಕರು ಬಾದಾಮಿಗೆ ಬಂದ ಖುಷಿಯಲ್ಲಿ ಎರಡು ಬಾರಿ ಟಿಕೆಟ್ ಘೋಷಣೆಯಾಗಿದ್ದರೂ, ಸ್ಪರ್ಧೆಯಿಂದ ಹಿಂದೆ ಸರಿಯಬೇಕಾದ ಅನಿವಾರ್ಯತೆ ಎದುರಾದರೂ ಅವರು ಸಿದ್ದರಾಮಯ್ಯ ಗೆಲುವಿಗೆ ಶ್ರಮಸಿದ್ದರು. ಇವರೊಂದಿಗೆ ಹಾಲಿ ಶಾಸಕರಾಗಿದ್ದ ಬಿಬಿ ಚಿಮ್ಮನಕಟ್ಟಿ ಕೂಡ ಸಿದ್ದು ಗೆಲುವಿಗೆ ಒಂದಷ್ಟು ಕೆಲಸ ಮಾಡಿದ್ದರು.
ಆದರೆ ಯಾವಾಗ ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ಶ್ರೀರಾಮುಲು ಸ್ಪರ್ಧಿಸಿದರೋ ಜಿಲ್ಲೆಯಲ್ಲಿನ ವಾಲ್ಮೀಕಿ ಸಮುದಾಯದ ಮತಗಳು ಬಿಜೆಪಿ ಪರವಾಗಿ ವಾಲಿದ್ದವು. ಇದು ಜಿಲ್ಲೆಯ ಬಹುತೇಕ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಪರಿಣಾಮ ಬೀರಿತ್ತು. ಆದರೆ ಕಾಂಗ್ರೆಸ್‌ಗೆ ಕುರುಬ, ಮುಸ್ಲಿಂ ಮತ್ತು ಇತರೆ ಹಿಂದುಳಿದ ವರ್ಗಗಳ ಮತಗಳು ಗಟ್ಟಿಯಾಗಿವೆ.

ಬಿಜೆಪಿ ಕಾಂಗ್ರೆಸ್ ಲೆಕ್ಕಾಚಾರವೇನು?
ಬಾದಾಮಿ ಕ್ಷೇತ್ರದಲ್ಲಿ ಪುರುಷ ಮತದಾರರ ಸಂಖ್ಯೆ 107074 ಇದ್ದು ಮಹಿಳಾ ಮತದಾರರ ಸಂಖ್ಯೆ 105098 ಇದೆ. ಒಟ್ಟು ಬಾದಾಮಿಯಲ್ಲಿ ಕ್ಷೇತ್ರದಲ್ಲಿ 212187 ಮತದಾರರಿದ್ದಾರೆ. ಕುರುಬ-49,600, ಲಿಂಗಾಯತ-32000, ಎಸ್‍ಸಿ-29,900, ವಾಲ್ಮೀಕಿ-19,500, ಮುಸ್ಲಿಂ-19,000, ದೇವಾಂಗ(ನೇಕಾರ)-15,500, ಗಾಣಿಗ-10,500, ಕ್ಷತ್ರೀಯ ಮರಾಠ-5,700, ವಿಶ್ವಕರ್ಮ-4,600, ರೆಡ್ಡಿ-3,800, ಉಪ್ಪಾರ-2,700, ಕಬ್ಬಲಿಗ-2,650, ಗೊಲ್ಲ-2,250, ಕ್ರಿಶ್ಚಿಯನ್-1450 ಮತ್ತು ಇತರೆ-27,000.
ಕುರುಬ ಸಮುದಾಯದ ಅತಿ ಹೆಚ್ಚು ಮತಗಳನ್ನು ಹೊಂದಿರುವ ಬದಾಮಿ ಕ್ಷೇತ್ರದಲ್ಲಿ ಸರಳವಾಗಿ ಜಯ ಸಾಧಿಸಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರ. ಇದೇ ಆಧಾರದ ಮೇಲೆಯೇ ಕಳೆದ ಬಾರಿ ಬಿಜೆಪಿ ಸಹ ದಲಿತ ನಾಯಕ, ಸಂಸದ ಶ್ರೀರಾಮುಲು ಅವರನ್ನು ಕಣಕ್ಕಿಳಿಸಿತ್ತು. ಎಸ್‍ಸಿ, ಲಿಂಗಾಯತ ಮತ್ತು ವಾಲ್ಮೀಕಿ ಸಮುದಾಯದ ಮತಗಳ ಕ್ರೂಡಿಕರಣವಾದ್ರೆ ಶ್ರೀರಾಮುಲು ಸರಳ ಬಹುಮತದಿಂದ ಗೆಲುವು ಸಾಧಿಸ್ತಾರೆ ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಸಿದ್ದರಾಮಯ್ಯ ಅವರೇ ಜಯ ಸಾಧಿಸಿದರು.
2013ರ ಚುನಾವಣೆಯಲ್ಲಿ ಬಿಬಿ ಚಿಮ್ಮನಕಟ್ಟಿ 15,113 ಮತಗಳ ಅಂತರದಿಂದ ಜಯಗಳಿಸಿದ್ದರು. ಚಿಮ್ಮನಕಟ್ಟಿ 57,446(41.3%) ಮತಗಳನ್ನು ಪಡೆದಿದ್ದರೆ ಜೆಡಿಎಸ್ ನ ಮಹಾಂತೇಶ್ ಗುರುಪಾದಪ್ಪ ಅವರು 42,333(30.4%) ಮತಗಳನ್ನು ಪಡೆದಿದ್ದರು. ಕಲ್ಲಪ್ಪ ಪಟ್ಟಣಶೆಟ್ಟಿ ಅವರು 30,310(21.8%) ಮತಗಳನ್ನು ಗಳಿಸಿದ್ದರು.

ಮತದಾರರ ನಿರೀಕ್ಷೆಗಳೇನು?
ಬಾದಾಮಿ ವಿಧಾನಸಭೆ ಕ್ಷೇತ್ರದ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಅಭಾವವಿದೆ. ಸಿದ್ದರಾಮಯ್ಯ, ಬಾದಾಮಿ ವಿಧಾನಸಭೆ ಕ್ಷೇತ್ರದಲ್ಲಿ ಮಲಪ್ರಭಾ ಅಚ್ಚುಕಟ್ಟು ಭಾಗದ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ತೀವ್ರವಾಗಿದೆ. ಹೀಗಾಗಿ ಮಲಪ್ರಭಾ ನದಿಗೆ ನೀರು ಬಿಡುಗಡೆ ಮಾಡುವುದರಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಆಗುವುದರ ಜೊತೆಗೆ ರೈತರ ಬೆಳೆಗಳಿಗೂ ನೀರು ದೊರೆಯುತ್ತದೆ ಎಂಬ ಬೇಡಿಕೆ ಇದೆ.
ಬಾದಾಮಿ ತಾಲ್ಲೂಕಿನ ಒಟ್ಟು 183 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು ಅದರಲ್ಲಿ 63 ಘಟಕಗಳು ದುರಸ್ತಿಯಾಗದೆ. ಇದರಿಂದಾಗಿ ಜನ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇನ್ನೂ ನಿರುದ್ಯೋಗ ಸಮಸ್ಯೆ ಕೂಡ ಈ ಭಾಗದಲ್ಲಿ ಹೆಚ್ಚಾಗಿದೆ. ರಸ್ತೆ ವ್ಯವಸ್ಥೆ, ಬೆಳೆಗೆ ನೀರಿನ ವ್ಯವಸ್ಥೆ, ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿ ಇತರ ಬೇಡಿಕೆಗಳು ಬಾದಾಮಿ ಮತದಾರರಲ್ಲಿವೆ.
ಬಾದಾಮಿ ತಾಲೂಕಿನ ಹಲಕುರ್ಕಿಯಲ್ಲಿ ವಿಮಾನ ನಿಲ್ದಾಣ, ಗ್ಲಾಸ್ ಫ್ಯಾಕ್ಟರಿ ಸ್ಥಾಪನೆಗಾಗಿ 2 ಸಾವಿರ ಎಕರೆ ಭೂಮಿ ಸ್ವಾಧೀನಕ್ಕೆ ರೈತರ ವಿರೋಧ ಎದುರಾಗಿದೆ. ಎಕರೆಗೆ 18 ಲಕ್ಷ ರೂ. ಪರಿಹಾರ ನೀಡುವುದಾಗಿ ಸಚಿವರು ಘೋಷಿಸಿದ್ದು, ಕೆಲವರು ಭೂಮಿ ನೀಡಲು ಮುಂದೆ ಬಂದಿದ್ದಾರೆ. ಆದರೆ, ಭೂಸ್ವಾಧೀನ ವಿವಾದ ಇನ್ನೂ ತಣ್ಣಗಾಗಿಲ್ಲ.

ಚಾಮುಂಡಿ ದೇವಿ ಕೈ ಬಿಟ್ಟರೂ ಕೈ ಬಿಡದ ಬಾದಾಮಿ ಬನಶಂಕರಿ ದೇವಿ
ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಚಾಮುಂಡಿ ದೇವಿ ಕೈ ಬಿಟ್ಟರೂ ಬಾದಾಮಿ ಬನಶಂಕರಿ ದೇವಿಯ ಆಶೀರ್ವಾದ ಫಲಿಸಿತು. ಬಾದಾಮಿ ಬನಶಂಕರಿ ದೇವಿಯ ಆಶೀರ್ವಾದ ಈ ಬಾರಿಯೂ ಸಿದ್ಧರಾಮಯ್ಯನವರ ಕೈ ಬಿಡಲಾರಳು. ಆದರೆ ಸಿದ್ದರಾಮಯ್ಯನವರಿಗೆ ಬಾದಾಮಿ ಕ್ಷೇತ್ರ ಬೆಂಗಳೂರಿನಿಂದ ದೂರಾಗುತ್ತದೆ. ಜನತೆಗೆ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಬಾದಾಮಿ ಕ್ಷೇತ್ರ ಬಿಡುವುದು ಬಹುತೇಕ ಖಚಿತವಾಗಿದೆ. ಆದರೆ ಮುಂದಿನ ರಾಜಕೀಯ ಬೆಳವಣಿಗೆಗಳು ದಿಢೀರ ಬದಲಾಗಲೂಬಹುದು. ಮುಂದಿನ ಬಾರಿ ಬಾದಾಮಿ ಬನಶಂಕರಿ ಕೃಷೆ ಯಾರಿಗೆ ಒಲಿಯಲಿದೆ ಎಂದು ಕಾಲಘಟ್ಟವೇ ನಿರ್ಧರಿಸಲಿದೆ.
-
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಹೊಸ 800 ಕೆಪಿಎಸ್ ಶಾಲೆ, ಇಂಗ್ಲಿಷ್ ಭಾಷಾ ತರಬೇತಿ: ಕರ್ನಾಟಕ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಘೋಷಣೆ -
Karnataka Budget 2026: 100 ಹೊಸ ಸ್ಕೈವಾಕ್, ಟನಲ್ ರಸ್ತೆ ಸೇರಿ ಕರ್ನಾಟಕ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು? -
ರೈತರಿಗೆ ಮಾಲ್, ಮಂಡ್ಯ ಸಾವಯ ಕೃಷಿ: ಅಡಿಕೆ - ತೆಂಗು ಬೆಳಗಾರರಿಗೂ ಬಂಪರ್, ಮೇಕೆದಾಟು ಯೋಜನೆಗೆ ಅಸ್ತು -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ -
Karnataka Budget 2026: ಕರ್ನಾಟಕ ಬಜೆಟ್ 2026: ಬಜೆಟ್ ಗ್ರಾತ ಕಳೆದ ಬಾರಿಗಿಂತ 40 ಸಾವಿರ ಕೋಟಿ ರೂ. ಹೆಚ್ಚಳ












Click it and Unblock the Notifications