ಬಾಗಲಕೋಟೆ; 'ಕೈ' ಟಿಕೆಟ್ ಸಿಗದ ದೇವರಾಜ್ ಪಾಟೀಲ್ ಜೆಡಿಎಸ್ ಅಭ್ಯರ್ಥಿ
ಕೊಪ್ಪಳ, ಏಪ್ರಿಲ್ 16; ಕರ್ನಾಟಕದ ವಿಧಾನಸಭೆ ಚುನಾವಣೆಗೆ ವಿವಿಧ ಪಕ್ಷಗಳ ಪಟ್ಟಿ ಬಿಡುಗಡೆ ಆಗುತ್ತಿರುವಂತೆಯೂ ಬಂಡಾಯವೂ ಹೆಚ್ಚುತ್ತಿದೆ. ಪಕ್ಷದಿಂದ ಪಕ್ಷಕ್ಕೆ ಹೋಗುವ ನಾಯಕರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಕರ್ನಾಟಕದಲ್ಲಿ ಮೇ 10ರಂದು ವಿಧಾನಸಭಾ ಚುನಾವಣೆ ನಡೆಯಲಿದೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಪಟ್ಟಿಯ ಬಿಡುಗಡೆ ಬಳಿಕ ಬಾಗಲಕೋಟೆ ಕ್ಷೇತ್ರದಲ್ಲಿ ಬಂಡಾಯದ ಬಾವುಟ ಹಾರಿದೆ. ಬಾಗಲಕೋಟೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ದೇವರಾಜ್ ಪಾಟೀಲ್ ಜೆಡಿಎಸ್ ಸೇರಿದ್ದು, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ 3ನೇ ಪಟ್ಟಿಯಲ್ಲಿ ಅವರೇ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆಯನ್ನೂ ಮಾಡಿದ್ದಾರೆ.

ಕಾಂಗ್ರೆಸ್ ತನ್ನ ಎರಡನೇ ಪಟ್ಟಿಯಲ್ಲಿ ಬಾಗಲಕೋಟೆ ಕ್ಷೇತ್ರಕ್ಕೆ ಹುಲ್ಲಪ್ಪ ಯಮನಪ್ಪ ಮೇಟಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಇದರಿಂದಾಗಿ ಟಿಕೆಟ್ ಆಕಾಂಕ್ಷಿಯಾಗಿದ್ದ ದೇವರಾಜ್ ಪಾಟೀಲ್‌ಗೆ ಟಿಕೆಟ್ ಕೈ ತಪ್ಪಿತು. ಅಲ್ಲದೇ ತನಗೆ ಟಿಕೆಟ್ ತಪ್ಪಲು ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಕಾರಣ ಎಂದು ಅವರು ಆರೋಪ ಮಾಡಿದ್ದಾರೆ.
ಶನಿವಾರ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ದೇವರಾಜ್ ಪಾಟೀಲ್ ಸಂಜೆ ಎಚ್. ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರಿದರು. 5 ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲಿ ಕುಮಾರಸ್ವಾಮಿ ಬಾಗಲಕೋಟೆಗೆ ದೇವರಾಜ್ ಪಾಟೀಲ್ ಅವರೇ ಅಭ್ಯರ್ಥಿ ಎಂದು ಘೋಷಣೆ ಮಾಡಿದರು. ಚುನಾವಣೆಯಲ್ಲಿ ಇದು ಹೇಗೆ ಕೆಲಸ ಮಾಡಲಿದೆ? ಎಂದು ಕಾದು ನೋಡಬೇಕಿದೆ.
ಸಿದ್ದರಾಮಯ್ಯ ಗೆಲುವಿಗೆ ಶ್ರಮಿಸಿದ್ದೆ; ಡಾ. ದೇವರಾಜ್ ಪಾಟೀಲ್ ಬಾಗಲಕೋಟೆ ಕಾಂಗ್ರೆಸ್ ಓಬಿಸಿ ಘಟಕದ ಮಾಜಿ ಜಿಲ್ಲಾಧ್ಯಕ್ಷರು. 2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಬಾದಾಮಿಯಲ್ಲಿ ಕಣಕ್ಕಿಳಿದಾಗ ಅವರ ಗೆಲುವಿಗಾಗಿ ಕೆಲಸ ಮಾಡಿದ್ದರು. ಆದರೆ ಈಗ ಸಿದ್ದರಾಮಯ್ಯ ಅವರಿಂದಲೇ ನನಗೆ ಟಿಕೆಟ್ ಕೈತಪ್ಪಿದೆ ಎಂದು ಆರೋಪ ಮಾಡುತ್ತಿದ್ದಾರೆ.
ಶನಿವಾರ ಬೆಳಗ್ಗೆ ಬೆಂಬಲಿಗರ ಸಭೆ ನಡೆಸಿದ್ದ ಡಾ. ದೇವರಾಜ್ ಪಾಟೀಲ್ ಬಳಿಕ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಸೇರಿದ್ದಾರೆ. ನಾಲ್ಕು ಬಾರಿ ಟಿಕೆಟ್ ಕೊಟ್ಟು ಕಸಿದುಕೊಂಡಿದ್ದಾರೆ. ಈ ಬಾರಿ ನನ್ನ ಹೆಸರು ಮುಂಚೂಣಿಯಲ್ಲಿತ್ತು. ಮೇಲ್ಮನೆ ವಿರೋಧ ಪಕ್ಷದ ನಾಯಕ ಬಿ. ಕೆ. ಹರಿಪ್ರಸಾದ್ ನನ್ನ ಹೆಸರು ಪ್ರಸ್ತಾಪಿಸಿದ್ದರು. ಆದರೆ ಸಿದ್ದರಾಮಯ್ಯ ವಿರೋಧ ಮಾಡಿದರು ಎಂದು ದೇವರಾಜ್ ಪಾಟೀಲ್ ದೂರಿದ್ದಾರೆ.
2018ರ ಚುನಾವಣೆಯಲ್ಲಿ ಬಿಜೆಪಿಯ ವೀರಣ್ಣ ಚಿರಂತಿಮಠ 85,653 ಮತಗಳನ್ನು ಪಡೆದು ಬಾಗಲಕೋಟೆಯಲ್ಲಿ ಗೆಲುವು ಸಾಧಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಪ್ತರಾದ ಅವರೇ ಈ ಬಾರಿಯೂ ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಕಳೆದ ಬಾರಿ 69,719 ಮತಗಳನ್ನು ಪಡೆದು ಸೋತಿದ್ದ ಹುಲ್ಲಪ್ಪ ಯಮನಪ್ಪ ಮೇಟಿಗೆ ಈ ಬಾರಿ ಮತ್ತೆ ಟಿಕೆಟ್ ನೀಡಲಾಗಿದೆ. ಜೆಡಿಎಸ್ ಕಳೆದ ಬಾರಿ ಕ್ಷೇತ್ರಕ್ಕೆ ಅಭ್ಯರ್ಥಿಯನ್ನೇ ಹಾಕಿರಲಿಲ್ಲ. ಈ ಬಾರಿ ಡಾ. ದೇವರಾಜ್ ಪಾಟೀಲ್ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಬಳಿಕ ಜೆಡಿಎಸ್‌ನಿಂದ ಕಣಕ್ಕಿಳಿಯುತ್ತಿದ್ದಾರೆ.
ಕ್ಷೇತ್ರದಲ್ಲಿ ಜೆಡಿಎಸ್ ಅಸ್ತಿತ್ವವೇ ಇಲ್ಲ ಎಂಬ ವಿಚಾರವಾಗಿ ಡಾ. ದೇವರಾಜ್ ಪಾಟೀಲ್ ಮಾತನಾಡಿದ್ದಾರೆ, "ನನ್ನ ವಿಚಾರ ಎಲ್ಲವನ್ನೂ ಜನರಿಗೆ ಹೇಳುವೆ. ಅದನ್ನು ಸ್ವೀಕರಿಸಿ ಆಶೀರ್ವಾದ ಮಾಡಿದರೆ ಅವರ ಪರವಾಗಿ ಕೆಲಸ ಮಾಡುತ್ತೇನೆ. ಕ್ಷೇತ್ರದಲ್ಲಿ ಜೆಡಿಎಸ್ಗೆ ಅಸ್ತಿತ್ವ ಇಲ್ಲ ಎಂದೇನಿಲ್ಲ. ಬಹಳಷ್ಟು ಜನರು ಗ್ರಾಮಾಂತರ ಭಾಗದಲ್ಲಿ ಜೆಡಿಎಸ್ ಪರವಾಗಿದ್ದಾರೆ. ಪಕ್ಷದಲ್ಲಿ ನಾಯಕರು ಕ್ಷೇತ್ರದಲ್ಲಿ ಇಲ್ಲ ಎಂಬ ಕಾರಣಕ್ಕೆ ಬೆಂಬಲ ಕೊಡುತ್ತಿರಲಿಲ್ಲ" ಎಂದರು.












Click it and Unblock the Notifications