ರಂಭಾಪುರಿ ಶ್ರೀಗಳ ವಿರುದ್ಧ ಮಠದ ಭಕ್ತರಿಂದ ಪ್ರತಿಭಟನೆ: ಕಾರಿಗೆ ಚಪ್ಪಲಿ ತೂರಾಟ
ಬಾಗಲಕೋಟೆ ಫೆಬ್ರವರಿ 17: ರಂಭಾಪುರಿ ಶ್ರೀಗಳ ವಿರುದ್ಧ ಮಠದ ಭಕ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅವರ ಕಾರಿಗೆ ಚಪ್ಪಲಿ ಎಸೆದ ಘಟನೆ ಬಾಗಲಕೋಟೆ ತಾಲೂಕಿನ ಕಲಾದಗಿಯಲ್ಲಿ ನಡೆದಿದೆ. ಪಂಚಗೃಹ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ಆಯ್ಕೆ ವಿವಾದಕ್ಕೆ ಸಂಬಂಧಿಸಿದಂತೆ ಭಕ್ತರು ಪ್ರತಿಭಟನೆಯನ್ನು ಮಾಡುತ್ತಿದ್ದರು.
ವಿವಾದ ಕೋರ್ಟ್‌ನಲ್ಲಿದ್ದಾಗಲೇ ಗಂಗಾಧರ ಸ್ವಾಮೀಜಿ ಅವರಿಂದ ಮಠದ ದುರಸ್ತಿ, ಹೊಲದ ಉಳುಮೆ ಮಾಡಿದ್ದಕ್ಕೆ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ವೇಳೆ ಭಕ್ತರು ಉದಗಟ್ಟಿ ಗ್ರಾಮಕ್ಕೆ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಶ್ರೀಗಳ ಕಾರನ್ನು ಅಡಗಟ್ಟಿದ್ದಾರೆ. ಸ್ಥಳದಲ್ಲಿ ತಳ್ಳಾಟ, ನೂಕಾಟ ನಡೆದು ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಪ್ರವೇಶಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿದರು.

ಕಲಾದಗಿಯ ಗುರುಲಿಂಗೇಶ್ವರ ಪಂಚಗ್ರಹ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯರಾದ ಬಳಿಕ ಅವರ ಉತ್ತರಾಧಿಕಾರಿಯನ್ನಾಗಿ ರಂಭಾಪುರಿ ಶ್ರೀಗಳು ಮಧ್ಯಸ್ಥಿಕೆ ವಹಿಸಿ ತಮ್ಮದೇ ಪೀಠದ ಶಿಷ್ಯರಾಗಿರುವ ಕೆ.ಎಮ್.ಗಂಗಾಧರ ಸ್ವಾಮೀಜಿಯನ್ನ ನೇಮಕ ಮಾಡಿದ್ದರು. ಗ್ರಾಮಸ್ಥರ ಸಮ್ಮುಖದಲ್ಲಿ ಉತ್ತರಾಧಿಕಾರಿ ನೇಮಕ ಮಾಡದೇ ಏಕಪಕ್ಷೀಯವಾಗಿ ರಂಭಾಪುರಿ ಶ್ರೀಗಳು ನಿರ್ಧಾರ ತೆಗೆದುಕೊಂಡಿದ್ದಾರೆಂದು ಕೆಲ ಗ್ರಾಮಸ್ಥರು ಆರೋಪಿಸಿದ್ದರು.
ಪರ, ವಿರೋಧ ಬಣಗಳು ಹುಟ್ಟಿಕೊಂಡು ಪ್ರಕರಣ ಈಗ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದೆ. ರಂಭಾಪುರಿ ಶ್ರೀಗಳ ವಿರೋಧಿ ಬಣ ನೂತನ ಸ್ವಾಮೀಜಿಯನ್ನಾಗಿ ಮಹಾಂತ ದೇವರು ಸ್ವಾಮೀಜಿಯನ್ನ ಕರೆತಂದು ಅದ್ಧೂರಿ ಮೆರವಣಿಗೆ ಮಾಡಿತ್ತು. ಇಂದು ಗಂಗಾಧರ ಸ್ವಾಮೀಜಿ ಮಠದ ಹೊಲದ ಉಳುಮೆಗೆ ಮುಂದಾದಾಗ ಭಕ್ತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಠದ ಒಟ್ಟು 72 ಎಕ್ರೆ ಭೂಮಿಯನ್ನು ರಂಭಾಪುರಿ ಶ್ರೀ ಮತ್ತು ಗಂಗಾಧರ ಸ್ವಾಮೀಜಿ ಲಪಟಾಯಿಸಲು ಮುಂದಾಗಿದ್ದಾರೆ ಎನ್ನುವುದು ಭಕ್ತರ ಆರೋಪವಾಗಿದೆ.
ಹೀಗಾಗಿ ಬಾಗಲಕೋಟೆ ಜಿಲ್ಲೆಯ ರಂಭಾಪುರಿ ಪಂಚಗೃಹ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ಆಯ್ಕೆ ವಿವಾದ ಈಗ ತಾರಕ್ಕೇರಿದೆ. ವಿವಾದ ಕೋರ್ಟ್ ನಲ್ಲಿದ್ದಾಗಲೇ ಶ್ರೀ ಜಗದ್ಗುರು ಪೀಠದ ಶಾಖಾ ಮಠದ ಗುರುಲಿಂಗೇಶ್ವರ ಮಠಕ್ಕೆ ಗಂಗಾಧರ ಸ್ವಾಮೀಜಿ ಅವರನ್ನು ಪೀಠಾಧಿಪತಿಯನ್ನಾಗಿ ನೇಮಕ ಮಾಡಿದ್ದು ಭಾರೀ ವಿರೋಧಕ್ಕೆ ಕಾರಣವಾಗಿದ್ದು ಭಕ್ತರು ಆಕ್ರೊಶಗೊಂಡಿದ್ದಾರೆ.

ಮಠದ ಆಸ್ತಿ ಹೊಡೆಯಲು ರಂಭಾಪುರಿ ಶ್ರೀಗಳು ಷಡ್ಯಂತ್ರ ನಡೆಸಿದ್ದಾರೆ. ಉತ್ತರಾಧಿಕಾರಿ ನೇಮಕ ವಿಚಾರದಲ್ಲಿ ಕಲಾದಗಿ ಗ್ರಾಮಸ್ಥರನ್ನ ಕೇಳಿಲ್ಲ. ತಮ್ಮ ಸಂಬಂಧಿಯನ್ನೇ ಉತ್ತರಾಧಿಕಾರಿಯನ್ನಾಗಿ ನೇಮಿಸಿದ್ದಾರೆ. ವ್ಯಾಜ್ಯ ಕೋರ್ಟ್ ನಲ್ಲಿದೆ. ಅಲ್ಲಿಯವರೆಗೆ ಉತ್ತರಾಧಿಕಾರಿ ಇರಿಸೋದು ಸರಿಯಲ್ಲ. ನ್ಯಾಯ ಸಿಗೋವರೆಗೆ ಹೋರಾಟ ಮುಂದುವರೆಸುತ್ತೇವೆ. ಈ ಕಾರಣಕ್ಕೆ ರಂಭಾಪುರಿ ಶ್ರೀ ಗ್ರಾಮಕ್ಕೆ ಬಂದಾಗ ವಿರೋಧಿಸಿದ್ದೇವೆ ಎಂದು ಪ್ರತಿಭಟನೆ ನಡೆಸಿದ ಭಕ್ತರು ಮತ್ತು ಮಹಿಳೆಯರು ಹೇಳಿದ್ದಾರೆ.












Click it and Unblock the Notifications