ಅಮೃತಸರ ದಾಳಿ: ಶಂಕಿತರ ಅಸ್ಪಷ್ಟ ಚಿತ್ರ ಕ್ಯಾಮರಾದಲ್ಲಿ ಸೆರೆ
ಅಮೃತಸರ, ನವೆಂಬರ್ 19: ಪಂಜಾಬಿನ ಅಮೃತಸರದ ರಾಜಸಾನ್ಸಿಯ ನಿರಹಂಕಾರಿ ಭಯನ್ ಪ್ರಾರ್ಥನಾ ಮಂದಿರದ ಮೇಲೆ ನಡೆದ ಬಾಂಬ್ ದಾಳಿಗೆ ಸಂಬಂಧಿಸಿದಂತೆ ಇಬ್ಬರು ಶಂಕಿತ ಅಸ್ಪಷ್ಟ ಚಿತ್ರವೊಂದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಕೆಲವು ಮಾಹಿತಿಯ ಪ್ರಕಾರ ಈ ದಾಳಿಯಲ್ಲಿ ಸ್ಥಳೀಯರದೇ ಕೈವಾಡವಿರಬಹುದು ಎನ್ನಲಾಗುತ್ತಿದೆ.
ಇಬ್ಬರು ಬೈಕ್ ನಲ್ಲಿ ಬರುತ್ತಿರುವ ಈ ಚಿತ್ರ ಅಸ್ಪಷ್ಟವಾಗಿದ್ದು, ಬೈಕ್ ಸಂಖ್ಯೆಯನ್ನಾಗಲೀ, ಶಂಕಿತರ ಮುಖವನ್ನಾಗಲೀ ಪತ್ತೆ ಹಚ್ಚುವುದಕ್ಕೆ ಸಾಧ್ಯವಾಗುತ್ತಿಲ್ಲ.

ಸ್ಥಳೀಯ ಯುವಕರೇ ಈ ಕೃತ್ಯ ಎಸಗಿರಬಹುದು ಎನ್ನಲಾಗಿದ್ದು, ಭಾನುವಾರ ಆಶ್ರಮದ ಆವರಣದಲ್ಲಿ ಕಾರ್ಯಕ್ರಮವಿದೆ ಎಂದು ಬಲ್ಲವರೇ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ದಾಳಿಗೂ ಮುನ್ನ ಆಶ್ರಮದ ಆವರಣದಲ್ಲಿ ಆರೋಪಿಗಳು ಹಲವು ಬಾರಿ ಓಡಾಡಿ, ಸಮೀಕ್ಷೆ ನಡೆಸಿದ್ದಿರಬಹುದು ಎನ್ನಲಾಗಿದ್ದು, ಆಶ್ರಮದ ಆವರಣದ ಸಿಸಿಟಿವಿ ಫೂಟೇಜ್ ಗಳ ಮೂಲಕ ಮಾಹಿತಿ ಕಲೆಹಾಕಲಾಗುತ್ತಿದೆ.
ಖಾಲಿಸ್ಥಾನಿ ಚಳವಳಿಯ ಬೆಂಬಲಿಗರಿಂದಲೇ ಈ ಕೃತ್ಯ ನಡೆದಿರಬಹುದು ಎಂದೂ ಶಂಕಿಸಲಾಗಿದೆ.
ಭಾನುವಾರ ನಡೆದ ಈ ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, 20 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.
ಮೃತರ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ ಘೋಷಿಸಿದ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಗ್ರೆನೇಡ್ ದಾಳಿಕೋರರ ಸುಳಿವು ನೀಡಿದವರಿಗೆ 50 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.












Click it and Unblock the Notifications