Breaking: ತಿರುಪತಿ ವೆಂಕಟೇಶ್ವರ ಸ್ವಾಮಿ ಭಕ್ತರಿಗೆ ಸಿಹಿ ಸುದ್ದಿ; 300 ರೂ.ಗೆ ವಿಶೇಷ ದರ್ಶನ ಟಿಕೆಟ್
ಅಮರಾವತಿ, ಸೆ.20: ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಸಂಬಂಧಿಸಿದಂತೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಹತ್ವದ ಘೋಷಣೆ ಮಾಡಿದೆ. ಇದು ವೆಂಕಟರಮಣ ಸ್ವಾಮಿಯ ಭಕ್ತರಿಗೆ ಖುಷಿ ನೀಡಿದೆ.
ನವೆಂಬರ್ ತಿಂಗಳಿಗೆ 300 ರೂಪಾಯಿಗಳ ವಿಶೇಷ ದರ್ಶನ ಟಿಕೆಟ್‌ಗಳನ್ನು ಬಿಡುಗಡೆ ಮಾಡುವುದಾಗಿ ಟಿಟಿಡಿ ಘೋಷಣೆ ಮಾಡಿದೆ. ಟಿಕೆಟ್‌ಗಳು ಸೆಪ್ಟೆಂಬರ್ 21 ರಂದು ಬೆಳಗ್ಗೆ 9 ಗಂಟೆಯಿಂದ ದೊರೆಯಲಿವೆ.
ನವೆಂಬರ್‌ನಲ್ಲಿ ನಡೆಯಲಿರುವ ಕಲ್ಯಾಣೋತ್ಸವ, ಊಂಜಾಲ್ ಸೇವೆ, ಸಹಸ್ರ ದೀಪಾಲಂಕಾರ ಸೇವೆ ಮತ್ತು ಆರ್ಜಿತ ಸೇವಾ ಟಿಕೆಟ್‌ಗಳು ಸೆಪ್ಟೆಂಬರ್ 21 ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿಯೂ ಲಭ್ಯವಾಗಲಿವೆ. ಮೊದಲು ಬಂದವರಿಗೆ ಆಧ್ಯತೆ ಎಂಬ ಆಧಾರದ ಮೇಲೆ ಟಿಕೆಟ್ ಹಂಚಿಕೆ ಮಾಡಲಾಗುವುದು ಎಂದು ಟಿಟಿಡಿ ಪ್ರಕಟಿಸಿದೆ.

ನವೆಂಬರ್ ತಿಂಗಳ ಶ್ರೀವಾರಿ ಆರ್ಜಿತ ಸೇವಾ ಎಲೆಕ್ಟ್ರಾನಿಕ್ ಡಿಪ್ ನೋಂದಣಿ ಪ್ರಕ್ರಿಯೆಯು ಸೆಪ್ಟೆಂಬರ್ 21 ರಿಂದ ಲಭ್ಯವಿರುತ್ತದೆ ಎಂದು ಘೋಷಿಸಲಾಗಿದೆ. ಅಲ್ಲದೆ, ಅಕ್ಟೋಬರ್ ತಿಂಗಳ ಅಂಗಪ್ರದಕ್ಷಿಣಂ ಟೋಕನ್‌ಗಳನ್ನು ಸೆಪ್ಟೆಂಬರ್ 22 ರಂದು ಬೆಳಿಗ್ಗೆ 9 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಟಿಟಿಡಿ ಮಾಹಿತಿ ನೀಡಿದೆ.
ಆದರೆ, ಅಕ್ಟೋಬರ್ 1 ರಿಂದ 5 ರವರೆಗೆ ಬ್ರಹ್ಮೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಈ ದಿನಗಳಲ್ಲಿ ಅಂಗಪ್ರದಕ್ಷಿಣಂ ಟೋಕನ್‌ಗಳನ್ನು ನೀಡಲಾಗುವುದಿಲ್ಲ. ಭಕ್ತರು ಇದನ್ನು ಗಮನಿಸಿ ಟಿಕೆಟ್ ಕಾಯ್ದಿರಿಸಬೇಕಾಗಿ ವಿನಂತಿ ಎಂದು ಟಿಟಿಡಿ ತಿಳಿಸಿದೆ.

ಇತ್ತಿಚೆಗೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ತಿರುಮಲದಲ್ಲಿರುವ ವೆಂಕಟೇಶ್ವರನ ಪುರಾತನ ಬೆಟ್ಟದ ದೇವಾಲಯಕ್ಕೆ 1.5 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಇದರ ಜೊತೆಗೆ ಕಳೆದ ನಾಲ್ಕು ತಿಂಗಳಲ್ಲಿ ತಿರುಪತಿ ದೇವಾಲಯದಲ್ಲಿ ಹುಂಡಿಯ ಮೂಲಕ ಕೋಟಿ ಕೋಟಿ ದೇಣಿಗೆ ಮೊತ್ತ ಸಂಗ್ರಹವಾಗಿದೆ. ಮೇ ತಿಂಗಳಲ್ಲಿ 130.29 ಕೋಟಿ, ಜೂನ್‌ನಲ್ಲಿ 123.76 ಕೋಟಿ, ಜುಲೈನಲ್ಲಿ 139.46 ಕೋಟಿ ಮತ್ತು ಆಗಸ್ಟ ತಿಂಗಳಲ್ಲಿ 140.34 ಕೋಟಿ ರೂಪಾಯಿ ಸಂಗ್ರಹವಾಗಿದೆ.












Click it and Unblock the Notifications