ಆಂಧ್ರದ ಐವರು ಉಪ ಮುಖ್ಯಮಂತ್ರಿಗಳಾರು? ಸಸ್ಪೆನ್ಸ್ ಮುಂದುವರಿಕೆ
ಅಮರಾವತಿ, ಜೂನ್ 08 : ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಐವರು ಉಪ ಮುಖ್ಯಮಂತ್ರಿಗಳನ್ನು ನೇಮಿಸುವ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದಾರೇನೋ ಸರಿ. ಆದರೆ, ಆ ಐವರು ಯಾರು ಎಂಬ ಬಗ್ಗೆ ಗುಟ್ಟನ್ನು ಅವರು ಇನ್ನೂ ಬಿಟ್ಟುಕೊಟ್ಟಿಲ್ಲ.
ಓರ್ವ ಮುಸ್ಲಿಂ, ಮೂವರು ಮಹಿಳೆಯರು ಸೇರಿದಂತೆ 25 ಶಾಸಕರ ಮಂತ್ರಿಮಂಡಲವನ್ನು ಜಗನ್ ಮೋಹನ್ ರೆಡ್ಡಿ ಅವರು ರಚಿಸಿದ್ದು, ಇವರಲ್ಲಿ ಯಾರು ಉಪ ಮುಖ್ಯಮಂತ್ರಿಗಳಾಗಲಿದ್ದಾರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಇದು ಶನಿವಾರದೊಳಗೆ ಬಹಿರಂಗವಾಗುವ ಸಾಧ್ಯತೆಯಿದೆ.
ಈ 25 ಶಾಸಕರಲ್ಲಿ, ಅವಿಭಜಿತ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಅವರ ಸಂಪುಟದಲ್ಲಿ ಕೆಲಸ ಮಾಡಿದ್ದ 6 ಸಚಿವರಿದ್ದಾರೆ. ಇವರನ್ನು ಬಿಟ್ಟರೆ ಉಳಿದವರೆಲ್ಲ ಪ್ರಥಮ ಬಾರಿ ಸಚಿವರಾಗಿ ಸಂಪುಟ ಸೇರಲಿದ್ದಾರೆ. ಎಲ್ಲ ನೂತನ ಸಚಿವರಿಗೆ ರಾಜ್ಯಪಾಲ ಇಎಸ್ಎಲ್ ನರಸಿಂಹನ್ ಅವರು ಶನಿವಾರ 11.49ಕ್ಕೆ ಸರಿಯಾಗಿ ಆರಂಭವಾದ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಬೋಧಿಸಿದರು.

ಮೇ 30ರಂದೇ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ಜಗನ್ ಮಂತ್ರಿಮಂಡಲದಲ್ಲಿ ಇರುವವರು ಧರ್ಮಣ ಕೃಷ್ಣ ದಾಸ್, ಬೊಚ್ಚ ಸತ್ಯನಾರಾಯಣ, ಪಿ ಪುಷ್ಪ ಶ್ರೀವಾಣಿ, ಅವಂತಿ ಶ್ರೀನಿವಾಸ್, ಕೆ ಕಣ್ಣ ಬಾಬು, ಪಿ ವಿಶ್ವರೂಪ್, ಪಿಲ್ಲಿ ಸುಭಾಶ್ ಚಂದ್ರ ಬೋಸ್, ಕೊಡಲಿ ನಾಣಿ, ವಿ ಶ್ರೀನಿವಾಸ್, ಪೆರ್ನಿ ನಾಣಿ, ಬಿ ಶ್ರೀನಿವಾಸ ರೆಡ್ಡಿ, ಎಂ ಗೌತಮ್ ರೆಡ್ಡಿ, ಬಿ ರಾಜೇಂದ್ರನಾಥ್ ರೆಡ್ಡಿ, ಅಲ್ಲ ನಾಣಿ, ಚ ಶ್ರೀರಂಗನಾಥ ರಾಜು, ಟಿ ವನಿತಾ ಮತ್ತು ಎಂ ಸುಚರಿತ್ರಾ.
ಬಲ್ಲ ಮೂಲಗಳ ಪ್ರಕಾರ, ರಾಜಣ್ಣ ಡೋರ, ಅಲ್ಲ ನಾಣಿ, ಪಾರ್ಥ ಸಾರಥಿ, ಎಂ ಸುಚರಿತ್ರಾ ಮತ್ತು ಅಹ್ಮದ್ ಬಾಷಾ ಅವರು ಉಪ ಮುಖ್ಯಮಂತ್ರಿಯಾಗುವ ಸಾಧ್ಯತೆಯಿದೆ. ಸಮಾಜದ ಎಲ್ಲ ವರ್ಗದವರಿಗೆ ಪ್ರಾತಿನಿಧ್ಯ ಸಿಗುವಂತೆ ಅತ್ಯಂತ ನಾಜೂಕುತನದಿಂದ ಇವರನ್ನು ಜಗನ್ ಆಯ್ಕೆ ಮಾಡಿದ್ದಾರೆ. ವೈಎಸ್ಆರ್ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ್ದ ವಾಗ್ದಾನದಂತೆ ಜಗನ್ ಅವರು ತಮ್ಮ ನಿರ್ಧಾರಗಳನ್ನು ಜಾರಿಗೆ ತರುತ್ತಿದ್ದಾರೆ.
ಮೇ 23ರಂದು ಪ್ರಕಟವಾದ ವಿಧಾನಸಭೆ ಫಲಿತಾಂಶದಲ್ಲಿ, ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ ಪಕ್ಷ 175 ಸೀಟುಗಳಲ್ಲಿ 151ರಲ್ಲಿ ಗೆದ್ದು ಅಭೂತಪೂರ್ವ ಸಾಧನೆ ಮಾಡಿತ್ತು. ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಆಂಧ್ರದ ಜನರು ಸಾರಾಸಗಟಾಗಿ ನಿರಾಕರಿಸಿಬಿಟ್ಟಿದ್ದಾರೆ.












Click it and Unblock the Notifications