ಆಂಧ್ರಪ್ರದೇಶ ವಿಧಾನಸಭೆ : 2 ಕ್ಷೇತ್ರದಿಂದ ಸ್ಪರ್ಧೆಗಿಳಿದ ಪವನ್ ಕಲ್ಯಾಣ್
ಅಮರಾವತಿ, ಮಾರ್ಚ್ 19: ತೆಲುಗು ಚಿತ್ರರಂಗದ ಪವರ್ ಸ್ಟಾರ್, ಜನಸೇನಾ ಪಕ್ಷದ ಸ್ಥಾಪಕ ಪವನ್ ಕಲ್ಯಾಣ್ ಅವರು ಚುನಾವಣಾ ರಾಜಕೀಯ ಇದೀಗ ಆರಂಭಗೊಂಡಿದೆ. ಆಂಧ್ರಪ್ರದೇಶ ವಿಧಾನಸಭೆಗಾಗಿ ಎರಡು ಕ್ಷೇತ್ರಗಳಿಂದ ಪವನ್ ಕಲ್ಯಾಣ್ ಅವರು ಕಣಕ್ಕಿಳಿಯುತ್ತಿದ್ದಾರೆ.
ಏಪ್ರಿಲ್ 11ರ ವಿಧಾನಸಭೆ ಚುನಾವಣೆಯಲ್ಲಿ ಗಜುವಾಕಾ ಹಾಗೂ ಭೀಮಾವರಂ ಕ್ಷೇತ್ರದಿಂದ ಪವನ್ ಅವರು ಸ್ಪರ್ಧಿಸುತ್ತಿದ್ದಾರೆ. ಗಜುವಾಕಾ ವಿಶಾಖಪಟ್ಟಣಂ ಜಿಲ್ಲೆಯಲ್ಲಿದ್ದರೆ, ಭೀಮಾವರಂ ಪಶ್ಚಿಮ ಗೋದಾವರಿಯ ಐತಿಹಾಸಿಕ ಕ್ಷೇತ್ರವಾಗಿದೆ.
ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಾಗಿ ಬಹುಜನ ಸಮಾಜವಾದಿ ಪಕ್ಷ, ಸಿಪಿಐ ಮತ್ತು ಸಿಪಿಐ (ಎಂ) ಜತೆ ಜನಸೇನಾ ಪಕ್ಷ ಮೈತ್ರಿ ಮಾಡಿಕೊಂಡಿದೆ. ಒಟ್ಟಾರೆ, ಜನಸೇನಾ 140 ವಿಧಾನಸಭಾ ಕ್ಷೇತ್ರ ಹಾಗೂ 18 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಸದ್ಯ 77 ವಿಧಾನಸಭಾ ಕ್ಷೇತ್ರ ಹಾಗೂ 9 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹೆಸರಿಸಿದೆ.

2014ರಲ್ಲಿ ಬಿಜೆಪಿ-ಟಿಡಿಪಿ ಮೈತ್ರಿಯನ್ನು ಪವನ್ ಕಲ್ಯಾಣ್ ಬೆಂಬಲಿಸಿದ್ದರು. ನಂತರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಮೋದಿ ಆಡಳಿತವನ್ನು ಹೊಗಳಿದ್ದರು. ಆದರೆ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡಲು ಎನ್ಡಿಎ ಹಿಂದೇಟು ಹಾಕುತ್ತಿದ್ದಂತೆ,ಮೋದಿ ವಿರುದ್ಧ ತಿರುಗಿ ನಿಂತರು.
ಆಂಧ್ರಪ್ರದೇಶದಲ್ಲಿ ಏಪ್ರಿಲ್ 11ರಂದು 175 ಸದಸ್ಯರ ವಿಧಾನಸಭೆ ಹಾಗೂ 25 ಸದಸ್ಯರ ಲೋಕಸಭೆಗೆ ಚುನಾವಣೆ ನಡೆಯಲಿದ್ದು, ತೆಲಂಗಾಣದಲ್ಲಿ 17 ಸ್ಥಾನಕ್ಕಾಗಿ ಮತದಾನವಾಗಲಿದೆ. ಮೇ 23ರಂದು ಫಲಿತಾಂಶ ಹೊರ ಬರಲಿದೆ.












Click it and Unblock the Notifications