ನವರಾತ್ರಿಗೆ ದೇವಿಯ ಈ ದೇಗುಲದಲ್ಲಿ ಕೋಟಿಗಟ್ಟಲೆ ನೋಟು, ಚಿನ್ನದ ಅಲಂಕಾರ
Recommended Video

ಅಮರಾವತಿ, ಅಕ್ಟೋಬರ್ 15: ದಸರಾ ನಡೆಯುತ್ತಿರುವಾಗ ವಿಶಾಖಪಟ್ಟಣದ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ಕೋಟಿಗಟ್ಟಲೆ ಬೆಲೆ ಬಾಳುವ ಆಭರಣಗಳು ಹಾಗೂ ನೋಟುಗಳಿಂದ ದೇವಿ ವಿಗ್ರಹಕ್ಕೆ ಅಲಂಕಾರ ಮಾಡಲಾಗಿದೆ.
ದೇವಿಗೆ 2 ಕೋಟಿ ರುಪಾಯಿ ಮೌಲ್ಯದ 8 ಕೇಜಿ ಚಿನ್ನಾಭರಣ ಕೊಡುಗೆಯಾಗಿ ಬಂದಿದ್ದು, ದೇವಾಲಯದ ಒಳಾಂಗಣವನ್ನು ಸಿಂಗರಿಸಲು 2.5 ಕೋಟಿ ರುಪಾಯಿ ನೋಟನ್ನು ಬಳಸಲಾಗಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
ಸಾಂಪ್ರದಾಯಿಕವಾಗಿ ಪ್ರತಿ ವರ್ಷ ದೇವ ನವರಾತ್ರಿ ಉತ್ಸವದ ವೇಳೆಯಲ್ಲಿ ದೇವಿ ವಿಗ್ರಹವನ್ನು ಆಭರಣಗಳಿಂದ ಹಾಗೂ ವಿವಿಧ ಮುಖ ಬೆಲೆಯ ನೋಟುಗಳಿಂದ ಅಲಂಕರಿಸಲಾಗುತ್ತದೆ. ಇನ್ನೂ ಹೇಳಬೇಕು ಅಂದರೆ, ಭಾರತದ ನೋಟುಗಳು ಮಾತ್ರವಲ್ಲ, ವಿದೇಶಿ ನೋಟುಗಳನ್ನು ಸಹ ಬಳಸಲಾಗುತ್ತದೆ.
ದೇವಿಯ ವಿಗ್ರಹ ಇಟ್ಟಿರುವ ಗರ್ಭಗುಡಿಯ ಸ್ಥಳದ ನೆಲ ಹಾಗೂ ಹಿಂಭಾಗದ ಗೋಡೆಯನ್ನು ಸಂಪೂರ್ಣವಾಗಿ ನೋಟಿನಿಂದ ಅಲಂಕಾರ ಮಾಡಲಾಗುತ್ತದೆ. ದೇವಿಯ ಮುಂದೆ ಹೀಗೆ ನೋಟುಗಳು ಮತ್ತು ಚಿನ್ನವನ್ನು ಇಡುವುದು ಅದೃಷ್ಟ ಎಂಬುದು ಜನರ ನಂಬಿಕೆ. ಆದ್ದರಿಂದ ಈ ಸಮಯದಲ್ಲಿ ನೀಡುತ್ತಾರೆ.

ಪೂಜೆಯ ನಂತರ ನೋಟುಗಳು ವಾಪಸ್
ಪೂಜೆಯೆಲ್ಲ ಆದ ನಂತರ ನೋಟುಗಳನ್ನು ಕೊಟ್ಟವರಿಗೇ ಹಿಂತಿರುಗಿಸಲಾಗುತ್ತದೆ. ಅವುಗಳು ದೇವಾಲಯದ ಟ್ರಸ್ಟ್ ಗೆ ಸೇರಲ್ಲ ಎಂದು ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ಕೊಲ್ಲೂರು ವೆಂಕಟೇಶ್ವರ ರಾವ್ ತಿಳಿಸಿದ್ದಾರೆ. ಇನ್ನೂರಕ್ಕೂ ಹೆಚ್ಚು ಭಕ್ತರು ನೀಡಿದ ಚಿನ್ನಾಭರಣ ಹಾಗೂ ನೋಟುಗಳಿಂದ ಈ ಬಾರಿ ದೇವಿಯನ್ನು ಅಲಂಕರಿಸಲಾಗಿದೆ.

ಐವತ್ತು ಸಾವಿರಕ್ಕೂ ಹೆಚ್ಚು ಮಂದಿ ದರ್ಶನ
ನೂರಾ ನಲವತ್ತು ವರ್ಷದಷ್ಟು ಹಳೆಯದಾದ ಈ ದೇವಸ್ಥಾನದ ವಿಗ್ರಹವನ್ನು ನವರಾತ್ರಿಯ ಹತ್ತು ದಿನಗಳ ಕಾಲ ಮಹಾಲಕ್ಷ್ಮಿಯ ವಿವಿಧ ಅವತಾರಗಳಲ್ಲಿ ಸಿಂಗರಿಸಲಾಗುತ್ತದೆ. ಭಾನುವಾರದಂದು ಚಿನ್ನ-ನೋಟುಗಳ ಅಲಂಕಾರ ಮಾಡಿದ್ದ ವೇಳೆ ಐವತ್ತು ಸಾವಿರಕ್ಕೂ ಹೆಚ್ಚು ಮಂದಿ ದರ್ಶನ ಪಡೆದಿದ್ದಾರೆ.

ಮಹಾಲಕ್ಷ್ಮಿಯ ಅವತಾರ ಎತ್ತಿದ ದಿನ
ದೇವಿಯು ಮಹಾಲಕ್ಷ್ಮಿಯ ಅವತಾರ ಎತ್ತಿದ ದಿನದಂದು ಹೀಗೆ ಈ ದೇವಸ್ಥಾನದಲ್ಲಿ ಚಿನ್ನ ಮತ್ತು ನೋಟುಗಳನ್ನು ಬಳಸಿ ದೇವಿಗೆ ಅಲಂಕಾರ ಮಾಡಲಾಗುತ್ತದೆ. ಆ ದಿನ ತಮ್ಮ ಹಣವನ್ನು ದೇವಿಯ ಪಾದದ ಬಳಿ ಇರಿಸಿದರು ವ್ಯಾಪಾರ-ವ್ಯವಹಾರದಲ್ಲಿ ಒಳ್ಳೆ ಅದೃಷ್ಟ ಹಾಗೂ ಉತ್ತಮ ಲಾಭ ಬರುತ್ತದೆ ಎಂದು ಜನರು ನಂಬುತ್ತಾರೆ.

ಚಿನ್ನವನ್ನು ದೇವರಿಗೆ ಅರ್ಪಣೆ
ಕೊಡುಗೆಯಾಗಿ ಕೊಟ್ಟಂಥ ಚಿನ್ನವು ದೇವಾಲಯದ ಬಳಿಯೇ ಉಳಿಯುತ್ತದೆ. ಆಂಧ್ರಪ್ರದೇಶದಾದ್ಯಂತ ಸಾಂಪ್ರದಾಯಿಕವಾಗಿ ಇಂಥ ಆಚರಣೆ ಇದೆ. ನಗದು ಅಥವಾ ಚಿನ್ನವನ್ನು ದೇವರಿಗೆ ಅರ್ಪಣೆ ಮಾಡಿ, ಆಶೀರ್ವಾದಕ್ಕಾಗಿ ಪ್ರಾರ್ಥನೆ ಮಾಡುತ್ತಾರೆ. ಜಗತ್ತಿನಲ್ಲೇ ಶ್ರೀಮಂತ ದೇಗುಲ ಎಂದು ಹೆಸರಾಗಿರುವ ತಿರುಮಲ ತಿರುಪತಿ ವೆಂಕಟೇಶ್ವರನಿಗೆ ಹೀಗೇ ಭಕ್ತರು ಕೊಡುಗೆ ನೀಡಿ, ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತಾರೆ.

ವ್ಯಾಪಾರ-ವ್ಯವಹಾರದಲ್ಲಿ ತಿರುಪತಿ ತಿಮ್ಮಪ್ಪನೂ ಪಾಲುದಾರ
ತಿರುಮಲದ ವೆಂಕಟೇಶ್ವರ ಅನುಗ್ರಹ ಮಾಡಿದರೆ ಎಲ್ಲ ರೀತಿಯಲ್ಲೂ ಅನುಕೂಲ ಆಗುತ್ತದೆ ಎಂದು ನಂಬುವ ಜನರು, ಯಾವುದೇ ವ್ಯಾಪಾರ- ವ್ಯವಹಾರ ಆರಂಭಕ್ಕೂ ಮುನ್ನ ತಮ್ಮ ನೋಂದಣಿ ಪತ್ರದಲ್ಲಿ ವೆಂಕಟೇಶ್ವರನ ಹೆಸರು ಹಾಕುತ್ತಾರೆ. ಅಥವಾ ಆಸ್ತಿ ಖರೀದಿ ಸಂದರ್ಭದಲ್ಲೂ ವೆಂಕಟೇಶ್ವರನ ಹೆಸರು ಬಳಸುತ್ತಾರೆ. ಮತ್ತೂ ಕೆಲವರು ಆ ದೇವರನ್ನೇ ತಮ್ಮ ವ್ಯಾಪಾರದ ಪಾಲುದಾರನನ್ನಾಗಿ ಹೆಸರಿಸಿ, ಆಯಾ ವರ್ಷದಲ್ಲಿ ಬರುವ ಲಾಭದ ಪೈಕಿ ಇಂತಿಷ್ಟು ಎಂದು ದೇವಾಲಯಕ್ಕೆ ನೀಡುತ್ತಾರೆ.












Click it and Unblock the Notifications