ಮರ್ಯಾದಾ ಹತ್ಯೆ ಹೆಸರಿನಲ್ಲಿ ತಂದೆಯಿಂದಲೇ ಮಗಳ ಕೊಲೆ
ಅಮರಾವತಿ, ಫೆಬ್ರವರಿ 05 : ಕೆಳಜಾತಿಯ ಯುವಕನೊಬ್ಬನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ತಂದೆಯೇ ಮಗಳನ್ನು ಕೊಂದ ಬರ್ಬರ ಘಟನೆ ಆಂಧ್ರ ಪ್ರದೇಶದ ಪ್ರಕಾಸಂನಲ್ಲಿ ನಡೆದಿದೆ.
ವೆಂಕಾ ರೆಡ್ಡಿ ಎಂಬುವವರಿಗೆ ತಮ್ಮ ಮಗಳು ವೈಷ್ಣವಿ ಬೇರೊಬ್ಬ ಹುಡುಗನ್ನು ಪ್ರೀತಿಸುತ್ತಿದ್ದಾಳೆ ಎಂಬ ವಿಷಯ ತಿಳಿದಿತ್ತು. 20 ವರ್ಷ ವಯಸ್ಸಿನ ಮಗಳು ತನ್ನ ಪ್ರೇಮಿಯೊಂದಿಗೆ ಓಡಿಹೋಗುತ್ತಾಳೆ ಎಂಬ ಅನುಮಾನ ಹುಟ್ಟಿ ಆಕೆಯ ಬಳಿ ಪ್ರಶ್ನಿಸಿದ್ದರು.
ತಂದೆ-ಮಗಳ ನಡುವೆ ವಾಗ್ವಾದ ಆರಂಭವಾಗಿ ಕೋಪಗೊಂಡ ತಂದೆ ಮಗಳನ್ನೇ ಕತ್ತುಹಿಸುಕಿ ಕೊಂದಿದ್ದಾನೆ. ವಿಷಯ ನೆರೆಮನೆಯವರಿಂದ ಪೊಲೀಸರಿಗೆ ತಿಳಿದು, ವೆಂಕಾ ರೆಡ್ಡಿಯನ್ನು ಬಂಧಿಸಲಾಗಿದೆ.

ಘಟನೆ ಸೋಮವಾರ ನಡೆದಿದ್ದು, ಮರಣೋತ್ತರ ಪರೀಕ್ಷೆ ವರದಿಯ ನಂತರ ಇದನ್ನು ಕೊಲೆ ಎಂದು ಖಚಿತ ಪಡಿಸಲಾಗುವುದು ಎಂದು ಪೊಲಿಸರು ತಿಳಿಸಿದ್ದಾರೆ.
ಕಳೆದ ವರ್ಷ ತೆಲಂಗಾಣದಲ್ಲಿ ಅಮೃತಾ-ಪ್ರಣಯ್ ಎಂಬ ದಂಪತಿ ಅಂತರ್ಜಾತೀಯ ವಿವಾದವಾಗಿದ್ದಕ್ಕಾಗಿ ಕೋಪಗೊಂಡ ಅಮೃತಾ ತಂದೆಯೇ, ಪ್ರಣಯ್ ನನ್ನು ನಡುಬೀದಿಯಲ್ಲಿ, ಹಾಡುಹಗಲಲ್ಲೇ ಕೊಚ್ಚಿ ಕೊಲೆ ಮಾಡಿಸಿದ್ದರು.
ಈ ಘಟನೆ ಇಡೀ ದೇಶವನ್ನೇ ನಡುಗಿಸಿತ್ತು. ಇದೀಗ ಅಮೃತಾ ಮಡಿಲಲ್ಲಿ ಪುಟ್ಟ ಕಂದ ನಗುತ್ತಿದೆ. ಅಮೃತಾಳ ಬದುಕಿಗೆ ಆಸರೆ ಸಿಕ್ಕಂತಾಗಿದೆ.












Click it and Unblock the Notifications