ಮೋದಿ-ಯೋಗಿ ಜೋಡಿ ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ: ಯುಪಿ ಗವರ್ನರ್
ಪಾಟ್ನಾ, ಮಾರ್ಚ್ 27: ಮೋದಿ-ಯೋಗಿ ಜೋಡಿಯನ್ನು ಬೇರೆ ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶದ ಗವರ್ನರ್ ಆನಂದಿಬೆನ್ ಪಟೇಲ್ ಭಾನುವಾರ ಹೇಳಿದ್ದಾರೆ. ಗುಜರಾತ್‌ನ ಸೂರತ್‌ನಲ್ಲಿ ನೆಲೆಸಿರುವ ಹೆಚ್ಚಿನ ಸಂಖ್ಯೆಯ ಉತ್ತರ ಭಾರತೀಯರು ಸೇರಿದಂತೆ ಬಹಳಷ್ಟು ಜನರ ಬೆಂಬಲದೊಂದಿಗೆ ಬಿಜೆಪಿ ಯುಪಿಯಲ್ಲಿ ಅಧಿಕಾರವನ್ನು ಉಳಿಸಿಕೊಂಡಿದೆ ಎಂದು ಕೂಡಾ ಈ ಸಂದರ್ಭದಲ್ಲೇ ತಿಳಿಸಿದ್ದಾರೆ.
ಶುಕ್ರವಾರ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ ಯೋಗಿ ಆದಿತ್ಯನಾಥ್ ಅವರನ್ನು ಉಲ್ಲೇಖಿಸಿ ಉತ್ತರ ಪ್ರದೇಶದ ಗವರ್ನರ್ ಆನಂದಿಬೆನ್ ಪಟೇಲ್ ಈ ಹೇಳಿಕೆಯನ್ನು ನೀಡಿದ್ದಾರೆ.
ಈ ವರ್ಷದ ಆರಂಭದಲ್ಲಿ ನಡೆದ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವು 403 ಸ್ಥಾನಗಳಲ್ಲಿ 273 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 255 ಸ್ಥಾನಗಳನ್ನು ಪಡೆದರೆ, ಅದರ ಮಿತ್ರಪಕ್ಷಗಳಾದ ನಿಶಾದ್ ಪಕ್ಷ ಮತ್ತು ಅಪ್ನಾ ದಳ (ಎಸ್) 18 ಸ್ಥಾನಗಳನ್ನು ಗಳಿಸಿತು. ಮೂರು ದಶಕಗಳಲ್ಲಿ ಒಂದು ಪಕ್ಷವು ನಿರ್ಣಾಯಕ ರಾಜ್ಯದಲ್ಲಿ ಸತತ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವುದು ಇದೇ ಮೊದಲು.

ಈ ಬಗ್ಗೆ ಉಲ್ಲೇಖ ಮಾಡಿ ಮಾತನಾಡಿದ ಯುಪಿ ಗವರ್ನರ್ ಆನಂದಿಬೆನ್ ಪಟೇಲ್, "ಉತ್ತರ ಪ್ರದೇಶದಲ್ಲಿ ನಾವು ಸರ್ಕಾರ ರಚಿಸಿದ್ದೇವೆ ಸ್ನೇಹಿತರೇ. ಮೋದಿ-ಯೋಗಿ ಜೋಡಿಯನ್ನು ಯಾರೂ ಮುರಿಯಲು ಸಾಧ್ಯವಿಲ್ಲ. ಯಾರೂ ಇದನ್ನು ಮಾಡಲು ಸಾಧ್ಯವಿಲ್ಲ. ಇದನ್ನು ಸಾಧಿಸಲು ಬಹಳಷ್ಟು ಜನರು ತಮ್ಮ ಬೆಂಬಲವನ್ನು ನೀಡಿದ್ದಾರೆ. ಸೂರತ್‌ನಿಂದ ಹಲವಾರು ಮಂದಿ ಯುಪಿ ಪ್ರಚಾರಕ್ಕೆ ಹೋಗಿದ್ದಾರೆ," ಎಂದು ಹೇಳಿದರು.
ಇದು 35 ವರ್ಷಗಳ ನಂತರ ಒಂದು ಪಕ್ಷವು ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಮರಳಿದ್ದು ಇತಿಹಾಸವನ್ನು ಸೃಷ್ಟಿಸಿದೆ ಎಂದರು. "ಇದಕ್ಕಾಗಿ, ನೀವು ನಮ್ಮನ್ನು ಅಭಿನಂದಿಸಬೇಕು. ಹೆಚ್ಚಿನ ಸಂಖ್ಯೆಯ ಉತ್ತರ ಭಾರತೀಯರು ಸೂರತ್‌ನಲ್ಲಿ ನೆಲೆಸಿದ್ದಾರೆ. ಈ ಗೆಲುವನ್ನು ಸಾಧಿಸಲು ಅವರೂ ಕೂಡಾ ನಮಗೆ ಬೆಂಬಲ ನೀಡಿದ್ದಾರೆ," ಎಂದರು.
ಜಿಲ್ಲೆಯ ಓಲ್ಪಾಡ್ ತಾಲೂಕಿನ ವಡೋಡ್‌ನಲ್ಲಿ ಸಮಸ್ತ್ ಪಾಟಿದಾರ್ ಆರೋಗ್ಯ ಟ್ರಸ್ಟ್ ಸ್ಥಾಪಿಸುತ್ತಿರುವ ಕಿರಣ್ ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ ಮಾಡಲು ಪಟೇಲ್ ಸೂರತ್‌ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಉಪಸ್ಥಿತರಿದ್ದರು.
ಸಂಶೋಧನಾ ಕ್ಷೇತ್ರದಲ್ಲಿ ಭಾರತ ಹಿಂದುಳಿದಿದೆ
ಸಂಶೋಧನಾ ಕ್ಷೇತ್ರದಲ್ಲಿ ಭಾರತ ಹಿಂದುಳಿದಿದೆ ಎಂದ ಯುಪಿ ಗವರ್ನರ್, "ಭಾರತವು ಸಂಶೋಧನೆ ನಡೆಸುವ ಸಂದರ್ಭಕ್ಕೆ ಬಂದಿದೆ, ಕೊರೊನಾ ಲಸಿಕೆಯೊಂದಿಗೆ ಭಾರತವು ಸಂಶೋಧನೆಯ ಉತ್ತುಂಗಕ್ಕೆ ಏರಿದೆ," ಎಂದು ಕೂಡಾ ಹೇಳಿದರು.
ಗರ್ಭದ ಕ್ಯಾನ್ಸರ್ ವಿರುದ್ಧ ಲಸಿಕೆ
ಗರ್ಭದ ಕ್ಯಾನ್ಸರ್ ವಿರುದ್ಧ ಹುಡುಗಿಯರು ಲಸಿಕೆ ಹಾಕಿಸಿಕೊಳ್ಳುವ ಅಗತ್ಯವನ್ನು ಕೂಡಾ ಒತ್ತಿ ಹೇಳಿದರು. "ಹೊಸ ಲಸಿಕೆ (ಗರ್ಭ ಕ್ಯಾನ್ಸರ್ ವಿರುದ್ಧ) ಮಾರುಕಟ್ಟೆಗೆ ಬಂದಿದೆ. ಸದ್ಯದ ಮಟ್ಟಿಗೆ ಇದು ತುಂಬಾ ದುಬಾರಿಯಾಗಿದೆ. ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಈ ಲಸಿಕೆ ಬೆಲೆ 100 ರೂಪಾಯಿಯಿಂದ 300 ರೂಪಾಯಿಯೊಳಗೆ ಇಳಿಯಲಿದೆ," ಎಂದಿದ್ದಾರೆ. "ಈ ಲಸಿಕೆ ಲಭ್ಯವಿದ್ದಾಗ, 9 ರಿಂದ 14 ವರ್ಷದೊಳಗಿನ ನಿಮ್ಮ ಹೆಣ್ಣುಮಕ್ಕಳಿಗೆ ಗರ್ಭ ಕ್ಯಾನ್ಸರ್ ವಿರುದ್ಧ ಲಸಿಕೆ ಹಾಕುವಂತೆ ನಾನು ವಿನಂತಿಸುತ್ತೇನೆ. ನಾನು ಲಸಿಕೆ ಬೆಲೆಯನ್ನು ಲೆಕ್ಕಿಸದೆ ಯುಪಿಯಲ್ಲಿ ಈ ಲಸಿಕೆ ಕಾರ್ಯವನ್ನು ಪ್ರಾರಂಭಿಸಿದೆ," ಎಂದು ಶ್ಲಾಘಿಸಿದರು. (ಒನ್‌ಇಂಡಿಯಾ ಸುದ್ದಿ)












Click it and Unblock the Notifications