ಗುಜರಾತ್ : ಜಸ್‌ಧನ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಗೆ ಜಯ
ಅಹಮದಾಬಾದ್, ಡಿಸೆಂಬರ್ 23 : ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಸಂಪುಟದ ಸಚಿವ, ಬಿಜೆಪಿ ನಾಯಕ ಕುನ್ವರಾಜೀ ಬಾವಾಲಿಯಾ ಅವರು ಜಸ್‌ಧನ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯಗಳಿಸಿದರು.
ಗುಜರಾತ್‌ನ ಜಸ್‌ಧನ್ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಭಾನುವಾರ ಪ್ರಕಟವಾಯಿತು. ಬಿಜೆಪಿಯ ಕುನ್ವರಾಜೀ ಬಾವಾಲಿಯಾ ಅವರು 19,985 ಮತಗಳ ಅಂತರಿಂದ ಕಾಂಗ್ರೆಸ್‌ನ ಅವಸಾರ್ ನಖೀಯಾ ಅವರನ್ನು ಸೋಲಿಸಿದರು.
ಜಸ್‌ಧನ್ ಕ್ಷೇತ್ರದಲ್ಲಿ ಕುನ್ವರಾಜೀ ಬಾವಾಲಿಯಾ ಅವರು ಕಾಂಗ್ರೆಸ್‌ನಿಂದ ಕಳೆದ ಚುನಾವಣೆಯಲ್ಲಿ ಗೆದ್ದಿದ್ದರು. ಜುಲೈ ತಿಂಗಳಿನಲ್ಲಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಆದ್ದರಿಂದ, ಉಪ ಚುನಾವಣೆ ಎದುರಾಗಿತ್ತು.

ಜಸ್‌ಧನ್ ಕ್ಷೇತ್ರದಲ್ಲಿ ಬಾವಾಲಿಯಾ ಅವರು 1995, 1998, 2002, 2007 ಮತ್ತು 2017ರ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಕೋಲಿ ಸಮುದಾಯಕ್ಕೆ ಸೇರಿದ ಪ್ರಭಾವಿ ನಾಯಕ ಬಾವಾಲಿಯಾ ಅವರು ಬಿಜೆಪಿ ಸೇರಿದ ಬಳಿಕ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು.
ಸಂಪುಟ ಸೇರಿದ 6 ತಿಂಗಳವೊಳಗೆ ಚುನಾವಣೆಯಲ್ಲಿ ಅವರು ಜಯಗಳಿಸಬೇಕಾಗಿತ್ತು. ಜಸ್‌ಧನ್ ಕ್ಷೇತ್ರದಿಂದಲೇ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸಿದ್ದಾರೆ.
ಕುನ್ವರಾಜೀ ಬಾವಾಲಿಯಾ ಅವರ ಎದುರಾಳಿ ಕಾಂಗ್ರೆಸ್‌ನ ಅವಸಾರ್ ನಖೀಯಾ ಅವರು 20 ವರ್ಷಗಳ ಕಾಲ ಬಾಲಾಲಿಯಾ ಅವರ ಆಪ್ತರಾಗಿದ್ದರು. ಬಾವಾಲಿಯಾ ಅವರು ಕಾಂಗ್ರೆಸ್ ತೊರೆದ ಬಳಿಕ ಎದುರಾದ ಚುನಾವಣೆಯಲ್ಲಿ ಇಬ್ಬರು ನಾಯಕರು ಮುಖಾಮುಖಿಯಾಗಿದ್ದರು.












Click it and Unblock the Notifications