ಗುಜರಾತ್‌ನಲ್ಲಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಸಕಲತಂತ್ರ
ಅಹಮದಾಬಾದ್ ಮೇ 31: ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಗುಜರಾತ್ ಟೈಟಾನ್ಸ್ ತಂಡ ಆಡಿದೆ ಮತ್ತು ಗೆದ್ದಿದೆ. ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 600 ಕೋಟಿ ರು. ವೆಚ್ಚದ ಕ್ರೀಡಾ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಗುಜರಾತ್ ಮುಖ್ಯಮಂತ್ರಿ ಮತ್ತು ಕ್ರೀಡಾ ಸಚಿವರು ವಿಜೇತ ತಂಡಕ್ಕೆ ಸೋಮವಾರ ಭೂಜನಕೂಟ ಆಯೋಜಿಸಿದ್ದರು. ಮಾರ್ಚ್‌ನಿಂದ ಪ್ರಧಾನಿ ನರೇಂದ್ರ ಮೋದಿ ಅವರು ಕನಿಷ್ಠ ಮೂರು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ.
ಈ ಸಂಗತಿಗಳು ಒಂದಕ್ಕೊಂದು ಸಂಬಂಧ ಇಲ್ಲದಂತೆ ತೋರಬಹುದು. ಆದರೆ ಅವುಗಳು ಬಹಳಷ್ಟು ಸಾಮ್ಯತೆಗಳನ್ನು ಹೊಂದಿವೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಂದು ಗೆಲುವನ್ನು ಪಡೆಯಲು ಇವುಗಳು ಭಾರತೀಯ ಜನತಾ ಪಕ್ಷದ ತಂತ್ರಗಳಾಗಿವೆ ಎಂದು ವಿಶ್ಲೇಷಿಸಲಾಗಿದೆ.

ನರೇಂದ್ರ ಮೋದಿ ಅವರು ಮುಂದಾಳತ್ವ
ಗುಜರಾತ್ ವಿಧಾನಸಭೆ ಚುನಾವಣೆಗೆ ಇನ್ನೂ ಐದು ತಿಂಗಳು ಬಾಕಿಯಿದ್ದರೂ, ಆಡಳಿತಾರೂಢ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಪ್ರತಿ ಸಂದರ್ಭವನ್ನು ಪಕ್ಷಕ್ಕೆ ಲಾಭವಾಗುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ.
ಇಡೀ ಬಿಜೆಪಿಯ ಘಟಾನುಘಟಿ ನಾಯಕರು ಅಖಾಡಕ್ಕೆ ಧುಮುಕ್ಕಿದ್ದಾರೆ. ತವರು ರಾಜ್ಯದಲ್ಲಿ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರಲು ನರೇಂದ್ರ ಮೋದಿ ಅವರು ಮುಂದಾಳತ್ವ ವಹಿಸಿದ್ದಾರೆ.

ಬಿಜೆಪಿಯ ಚುನಾವಣಾ ತಂತ್ರ
"ಇದು ಬಿಜೆಪಿಯ ಚುನಾವಣಾ ತಂತ್ರ ಹೊರತು ಬೇರೇನೂ ಅಲ್ಲ. ಯಾವುದರಿಂದ ತನಗೆ ಲಾಭವಿದೆ ಎಂಬುದು ಪಕ್ಷಕ್ಕೆ ತಿಳಿದಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ತಂಡ ಗೆಲ್ಲುತ್ತದೆ. ಕ್ರಿಕೆಟ್ ನಲ್ಲಿ ಗೆಲುವು ಗುಜರಾತಿನ ಹೆಮ್ಮೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪರಿಗಣಿಸಿದ್ದಾರೆ. ಚುನಾವಣಾ ದೃಷ್ಟಿಯಿಂದ, ಇದು ಪಕ್ಷಕ್ಕೆ ಲಾಭದಾಯಕ ಸಂದರ್ಭ,'' ಎಂದು ಅಹಮದಾಬಾದ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ, ರಾಜಕೀಯ ವಿಶ್ಲೇಷಕ ಸಾರ್ಥಕ್ ಬಾಗ್ಚಿ ಅಭಿಪ್ರಾಯಪಟ್ಟಿದ್ದಾರೆ.

ಸಿಎಂ ಯೂಟ್ಯೂಬ್ ಚಾನಲ್ ನಲ್ಲಿ ನೇರ ಪ್ರಸಾರ
ಅಹಮದಾಬಾದ್ ಸ್ಟೇಡಿಯಂನಲ್ಲಿ ನಡೆದ ರೋಚಕ ಐಪಿಎಲ್ ಫೈನಲ್ ಪಂದ್ಯಕ್ಕೆ ಅಮಿತ್ ಶಾ, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್ .ಪಾಟೀಲ್, ಬಿಜೆಪಿಯ ಹಿರಿಯ ನಾಯಕರು ಸೇರಿದಂತೆ 1.2 ಲಕ್ಷ ಕ್ರಿಕೆಟ್ ಪ್ರೇಮಿಗಳು ಸಾಕ್ಷಿಯಾದರು. ಸೋಮವಾರ ಮಧ್ಯಾಹ್ನ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಮತ್ತು ರಾಜ್ಯ ಕ್ರೀಡಾ ಸಚಿವ ಹರ್ಷ್ ಸಾಂಘ್ವಿ ಅವರು ಭಾಗವಹಿಸಿದ್ದ ಗುಜರಾತ್ ಟೈಟಾನ್ಸ್ ಗೆಲುವಿನ ಸಂಭ್ರಮಾಚರಣೆ ಸಮಾರಂಭವು ಸಿಎಂ ಅವರ ಅಧಿಕೃತ ಯೂಟ್ಯೂಬ್ ಚಾನಲ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ನೇರ ಪ್ರಸಾರ ಮಾಡಲಾಯಿತು.

ರೋಡ್ ಶೋ ಗೆ ತಕ್ಷಣ ಅನುಮತಿ
ಈ ವೇಳೆ ಮಾತನಾಡಿದ ಭೂಪೇಂದ್ರ ಪಟೇಲ್, "ಗುಜರಾತ್ ಟೈಟಾನ್ಸ್ ಎಲ್ಲಾ ಗುಜರಾತಿಗಳು ಹೆಮ್ಮೆಪಡುವಂತೆ ಮಾಡಿದೆ ಮತ್ತು ಪ್ರತಿಯೊಬ್ಬ ಗುಜರಾತಿಯ ಹೃದಯ ಹೆಮ್ಮೆಯಿಂದ ಹಿಗ್ಗುವಂತೆ ಮಾಡಿದೆ,'' ಎಂದು ಹೇಳಿದ್ದರು.
ಅಲ್ಲದೇ ಇದರ ನಂತರ ಗುಜರಾತ್ ಟೈಟಾನ್ಸ್ ತಂಡ ರೋಡ್ ಶೋ ನಡೆಸಲು ಕೂಡಲೇ ಅಹಮದಾಬಾದ್ ಪೊಲೀಸರು ಅನುಮತಿ ನೀಡಿದರು. ಜತೆಗೆ ರೋಡ್ ಶೋ ಸರಾಗವಾಗಿ ನಡೆಯುವಂತೆ ನೋಡಿಕೊಂಡರು.
ಬಿಜೆಪಿಯಿಂದ ಅಧಿಕಾರ ದುರುಪಯೋಗ
"ರಾಜಕೀಯ ಲಾಭ ಪಡೆಯಲು ಬಿಜೆಪಿ ತನ್ನ ಸರಕಾರದ ಅಧಿಕಾರವನ್ನು ಬಳಸುತ್ತದೆ," ಎಂದು ಕಾಂಗ್ರೆಸ್ ನಾಯಕರೊಬ್ಬರು ಆರೋಪಿಸಿದ್ದಾರೆ. 2017 ರ ಸಂದರ್ಭ ಮರುಕಳಿಸದಂತೆ ನೋಡಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. 2017 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು 99 ಸ್ಥಾನಗಳಿಗೆ ಇಳಿಸಲು ಕಾಂಗ್ರೆಸ್ ಯಶಸ್ವಿಯಾಯಿತು. 1995 ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರದ ಅತ್ಯಂತ ಕಡಿಮೆ ಸ್ಥಾನಗಳು ಇದಾಗಿದೆ. ಆಡಳಿತರೂಢ ಬಿಜೆಪಿ ವಿರುದ್ಧ ಜನರ ಭಾವನೆಗಳನ್ನುಒಗ್ಗೂಡಿಸಲು ಕಾಂಗ್ರೆಸ್ ಗೆ ಸಾಧ್ಯವಾಯಿತು. ಹಾಗಾಗಿ ಅಂತರ ಕಡಿಮೆಯಾಯಿತು. ಇದು ಮರುಕಳಿಸದಂತೆ ದೊಡ್ಡ ಸಂಖ್ಯೆಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಎಲ್ಲಾ ರೀತಿಯಲ್ಲೂ ತಂತ್ರಗಾರಿಕೆ ನಡೆಸುತ್ತಿದೆ.












Click it and Unblock the Notifications