ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಕೆದಾಟು ಜಲ ವಿದ್ಯುತ್ ಯೋಜನೆ ಸ್ಥಗಿತವಿಲ್ಲ

|
Google Oneindia Kannada News

mekedatu
ಬೆಂಗಳೂರು, ಸೆ.11 : ತಮಿಳುನಾಡು ಸರ್ಕಾರದ ವಿರೋಧದ ನಡುವೆಯೇ ಮೇಕೆದಾಟು ಬಳಿ ಎರಡು ಜಲವಿದ್ಯುತ್‌ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರ ತೀರ್ಮಾನಿಸಿದೆ. ರಾಜ್ಯ ಸರ್ಕಾರ ಯೋಜನೆ ಕುರಿತು ಪ್ರಸ್ತಾವನೆ ಸಿದ್ಧಗೊಳಿಸುತ್ತಿದ್ದು, ಇದನ್ನು ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೂ ಕಳುಹಿಸಲು ನಿರ್ಧರಿಸಲಾಗಿದೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಕಾವೇರಿ ನೀರು ಸಂಗ್ರಹಿಸಿ ಜಲವಿದ್ಯುತ್‌ ತಯಾರಿಸುವ ಯೋಜನೆಯ ರೂಪು-ರೇಷೆಗಳು ಸಿದ್ಧವಾಗುತ್ತಿದೆ ಎಂದು ಹೇಳಿದರು.

ಕಾವೇರಿ ನ್ಯಾಯಮಂಡಳಿ ತೀರ್ಪಿನ ಪುಟ ಸಂಖ್ಯೆ 13 ಹಾಗೂ ಷೆಡ್ಯೂಲ್‌ 9 ರಲ್ಲಿ ವಿದ್ಯುತ್‌ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ತಿಂಗಳು ತಮಿಳುನಾಡಿಗೆ ಇಂತಿಷ್ಟು ಪ್ರಮಾಣದಲ್ಲಿ ನೀರು ಹರಿಸಬೇಕು ಎಂದು ತಿಳಿಸಲಾಗಿದೆ.

ಮಳೆಗಾಲದ ಸಂದರ್ಭದಲ್ಲಿ ಹೆಚ್ಚು ನೀರು ಹರಿದು ಹೋಗುತ್ತದೆ. ಅಂತಹ ಸಂದರ್ಭದಲ್ಲಿ ನೀರನ್ನು ಜಲಾಶಯದಲ್ಲಿ ಸಂಗ್ರಹಿಸಿ, ವಿದ್ಯುತ್‌ ಉತ್ಪಾದನೆಗೆ ಬಳಸಿಕೊಳ್ಳಲಾಗುವುದು. ಇದರಿಂದಾಗಿ ಕಾವೇರಿ ತೀರ್ಪಿನ ಉಲ್ಲಂಘನೆ ಆಗುವುದಿಲ್ಲ ಎಂದರು.

ನಮ್ಮಲ್ಲಿ ನೀರು ಇದ್ದಾಗ ತಮಿಳುನಾಡಿಗೆ ನ್ಯಾಯಮಂಡಳಿ ತೀರ್ಪಿನ ಪ್ರಕಾರ ನೀರು ಹರಿಸುತ್ತೇವೆ. ನ್ಯಾಯಾಧಿಕರಣದ ತೀರ್ಪಿಗೆ ವಿರುದ್ಧವಾಗಿ ಯಾವ ಕಾಮಗಾರಿಯನ್ನು ಕೈಗೊಳ್ಳುತ್ತಿಲ್ಲ. ತಮಿಳುನಾಡು ಮುಖ್ಯಮಂತ್ರಿ ಜಯಲಿತಾ ಯೋಜನೆ ವಿರೋಧಿಸುತ್ತಿರುವುದು ಸರಿಯಲ್ಲ ಎಂದರು. (ಮತ್ತೆ ಕಾವೇರಿ ಕ್ಯಾತೆ ತೆಗೆದ ಜಯಲಲಿತಾ)

ಜಲ ವಿದ್ಯುತ್‌ ಉತ್ಪಾದನೆಗಾಗಿ ಸಂಗ್ರಹಿಸಿಡುವ ನೀರಿನಿಂದ ಕೃಷಿ ಚಟುವಟಿಕೆ ಮಾಡಲು ಸಾಧ್ಯವಿಲ್ಲ. ಎಲ್ಲ ವಿಚಾರಗಳ ಬಗ್ಗೆಯೂ ಕಾನೂನು ತಜ್ಞರ ಜತೆ ಚರ್ಚಿಸಿ ಯೋಜನೆ ಸಿದ್ಧಪಡಿಸಲಾಗಿದೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗೆ ಶೀಘ್ರವೇ ಒಪ್ಪಿಗೆ ಪಡೆಯಲಾಗುವುದು ಎಂದು ತಿಳಿಸಿದರು.

ಸಚಿವ ಸಂಪುಟ ಸಭೆಯ ಅನುಮೋದನೆ ದೊರಕಿದ ಬಳಿಕ ಯೋಜನೆಗೆ ಅನುಮತಿ ಪಡೆಯಲು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಕಾವೇರಿ ತೀರ್ಪಿನ ವಿರುದ್ಧವಾಗಿ ಯೋಜನೆ ಕೈಗೊಂಡಿಲ್ಲ. ಆದ್ದರಿಂದ ಕೇಂದ್ರ ಸರ್ಕಾರದಿಂದಲೂ ಅನುಮತಿ ದೊರೆಯಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

English summary
The Karnataka Government defended its proposal to build a reservoir at Mekedatu by claiming that, the move conforms to the final award of Cauvery Water Disputes Tribunal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X