ಈಶ್ವರಪ್ಪಗೆ ಕ್ಲೀನ್ ಚಿಟ್ ಕೊಟ್ಟ ಯಡಿಯೂರಪ್ಪ!
ಬೆಂಗಳೂರು, ಸೆ.11 : ಕೆ.ಎಸ್ ಈಶ್ವರಪ್ಪ ಅವರೊಂದಿಗೆ ಇತ್ತೀಚೆಗೆ ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಉಂಟುಮಾಡಿದ್ದ ಕೆಜೆಪಿ ಅಧ್ಯಕ್ಷ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸದ್ಯ ನಾನು ಜೈಲಿಗೆ ಹೋಗಲು ಈಶ್ವರಪ್ಪ ಕಾರಣರಲ್ಲ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ ಯಡಿಯೂರಪ್ಪ, ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ಅವರನ್ನು ಭೇಟಿ ಮಾಡಿದ್ದು, ಅಲ್ಲಿ ದಸರಾ ಉತ್ಸವದ ಸಿದ್ಧತೆಗಳನ್ನು ಪರಿಶೀಲನೆ ನಡೆಸಲು. ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.

ಇದೇ ಸಂದರ್ಭದಲ್ಲಿ "ನಾನು ಜೈಲಿಗೆ ಹೋಗಲು ಈಶ್ವರಪ್ಪ ಅವರು ಕಾರಣರಲ್ಲ" ಎಂದು ಹೇಳಿ ಅಚ್ಚರಿ ಮೂಡಿಸಿದರು. ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ, ಈಶ್ವರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ಯಡಿಯೂರಪ್ಪ ನನ್ನನ್ನು ಜೈಲಿಗೆ ಕಳುಹಿಸಿದ್ದೇ ಈಶ್ವರಪ್ಪ ಎಂದು ಆರೋಪಿಸಿದ್ದರು.
ಮಂಗಳವಾರ ತಮ್ಮ ಹೇಳಿಕೆ ಹಿಂಪಡೆದ ಯಡಿಯೂರಪ್ಪ, ಅಂದಿನ ಸಂದರ್ಭದಲ್ಲಿ ಆವೇಶದಿಂದ ಈಶ್ವರಪ್ಪ ವಿರುದ್ಧ ಮಾತನಾಡಿದ್ದೆ. ನಾನು ಜೈಲಿಗೆ ಹೋಗಿದ್ದರ ಹಿಂದೆ ಅನೇಕ ನಾಯಕರ ಪಿತೂರಿಯಿದೆ. ಆದರೆ, ಈಶ್ವರಪ್ಪ ಅದಕ್ಕೆ ಕಾರಣರಲ್ಲ ಎಂದು ಕ್ಲೀನ್ ಚಿಟ್ ನೀಡಿದರು. ತಮ್ಮ ರಾಜಕೀಯ ಕಡುವೈರಿ ಬಗ್ಗೆ ಯಡಿಯೂರಪ್ಪ ಹೇಳಿದ ಮಾತು, ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ನನ್ನ ಮತ್ತು ಈಶ್ವರಪ್ಪ ಅವರ ವೈರತ್ವವನ್ನು ಬಳಸಿಕೊಂಡು ಕಾಂಗ್ರೆಸ್ ಜಯ ಸಾಧಿಸಿದೆ ಎಂದು ಹೇಳುವ ಮೂಲಕ, ಜಿಲ್ಲಾ ರಾಜಕಾರಣದಲ್ಲಿ ಮುಂದೆ ಇಬ್ಬರೂ ಒಟ್ಟಾಗಿ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸುವ ಸೂಚನೆ ನೀಡಿದರು.
ಗೊಂದಲ ಬೇಡ : ಕೆ.ಎಸ್.ಈಶ್ವರಪ್ಪ ಅವರನ್ನು ಭೇಟಿ ಮಾಡಿದ ತಕ್ಷಣ ನಾನು ಬಿಜೆಪಿಗೆ ಮರಳುತ್ತೇನೆ ಎಂದು ಕೆಜೆಪಿ ಪಕ್ಷದ ಕಾರ್ಯಕರ್ತರಿಗೆ ಗೊಂದಲಗಳು ಬೇಡ ಎಂದು ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ. ನಾನು ಕೆಜೆಪಿಯನ್ನು ಲೋಕಸಭೆ ಚುನಾವಣೆಗಾಗಿ ಸಂಘಟಿಸುತ್ತೇನೆ. ಸೆ.19ರಂದು ಕೆಜೆಪಿ ಹಿರಿಯ ನಾಯಕರ ಸಭೆ ಕರೆದಿದ್ದು, ಸಭೆಯಲ್ಲಿ ಪಕ್ಷ ಸಂಘಟನೆಯ ಕಾರ್ಯತಂತ್ರ ರೂಪಿಸುತ್ತೇನೆ ಎಂದು ಹೇಳಿದರು.












Click it and Unblock the Notifications