ಮಂಡ್ಯ ಭೇಟಿ: ಸಂಸದೆ ರಮ್ಯಾಗೆ ಚೊಚ್ಚಲ ಅನುಭವ
ಮಂಡ್ಯ, ಸೆ.11: ಇತ್ತೀಚೆಗೆ ಮಂಡ್ಯ ಲೋಕಸಭೆಗೆ ನಡೆದ ಉಪಚುನಾವಣೆಯಲ್ಲಿ ಭಾರಿ ಅಂತರದೊಂದಿಗೆ ಅಮೋಘ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷದ ರಮ್ಯಾ ಅವರು ಮೊದಲ ಬಾರಿಗೆ ನಿನ್ನೆ ಮಂಗಳವಾರ ಸ್ವಕ್ಷೇತ್ರಕ್ಕೆ ಆಗಮಿಸಿದ್ದರು.
ಲೋಕಸಭಾ ಸದಸ್ಯೆಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಮಂಡ್ಯಕ್ಕೆ ಆಗಮಿಸಿದ್ದ ಸಂಸದೆ, ನಟಿ ರಮ್ಯಾ, ಮಂಗಳವಾರ ಇಲ್ಲಿನ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಬಳಿಕ ಅವರು ಹಲವು ಕಾಮಗಾರಿಗಳನ್ನು ಪರಿಶೀಲಿಸಿ, ಗ್ರಾಮೀಣ ಭಾಗದ ಕೆಲವು ಶಾಲೆಗಳಿಗೆ ಭೇಟಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಬಿಎನ್ ಕೃಷ್ಣಯ್ಯ, ಜಿಪಂ ಸಿಇಒ ಪಿಸಿ ಜಯಣ್ಣ, ಎಸ್‌ಪಿ ಭೂಷಣ್ ಜಿ. ಬೊರಸೆ, ಅಪರ ಜಿಲ್ಲಾಧಿಕಾರಿ ಗಾಯತ್ರಿ ದೇವಿ ಉಪಸ್ಥಿತರಿದ್ದರು.

ಡಿಸಿ ಕಚೇರಿಯಲ್ಲಿ ತಂದೆ ನೆನಪು ಕಾಡುತ್ತೆ
ಶಿಷ್ಟಾಚಾರದ ಪ್ರಕಾರ ಸಂಸದೆ ರಮ್ಯಾ ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಬೇಕಿತ್ತು. ಆದರೆ ಅದು ಜಿಲ್ಲಾ ಪಂಚಾಯಿತಿ ಆವರಣದ ಸಭಾಂಗಣದಲ್ಲಿ ನಡೆಯಿತು. ಈ ಬಗ್ಗೆ ಸ್ಪಷ್ಟನೆ ರೂಪದಲ್ಲಿ ಪ್ರತಿಕ್ರಿಯಿಸಿದ ರಮ್ಯಾ, 'ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ಶಕ್ತಿಯನ್ನು ಆ ದೇವರು ನನಗಿನ್ನೂ ನೀಡಿಲ್ಲ' ಎಂದು ನೊಂದು ನುಡಿದರು. ಏಕೆಂದರೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ರಮ್ಯಾ ಅವರ ಸಾಕು ತಂದೆ ಆರ್ ಟಿ ನಾರಾಯಣ್ ಅವರು ಇದೇ ಡಿಸಿ ಕಚೇರಿಯಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದರು.

ಜಿಲ್ಲಾಧಿಕಾರಿ ಕಚೇರಿಯತ್ತ ತಲೆಹಾಕೋಲ್ಲ: ರಮ್ಯಾ
ಗಮನಾರ್ಹವೆಂದರೆ ಇದೇ ನೋವಿನಲ್ಲಿ ಜಿಲ್ಲಾಧಿಕಾರಿ ಕಚೇರಿಯತ್ತ ತಲೆಹಾಕದಿರಲು ರಮ್ಯಾ ನಿರ್ಧರಿಸಿದ್ದಾರೆ. 'ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಸಂಸತ್ ಸದಸ್ಯರ ಕೊಠಡಿ ನನಗೆ ಬೇಡ. ಉಪ ವಿಭಾಗಾಧಿಕಾರಿಗಳ ಅಥವಾ ಜಿಪಂ ಸಿಇಒ ಕಟ್ಟಡದಲ್ಲಿ ಪ್ರತ್ಯೇಕವಾದ ಎಂಪಿ ಕಚೇರಿ ತೆರೆಯಲು ಅನುವು ಮಾಡಿಕೊಡಿ' ಎಂದು ಸಂಸದೆ ರಮ್ಯಾ ಜಿಲ್ಲಾಡಳಿತಕ್ಕೆ ಸಲಹೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನನಗಿದು ಹೊಸ ಅನುಭವ: ರಮ್ಯಾ
ಅಧಿಕಾರಿಗಳು ಒಬ್ಬೊಬ್ಬರಾಗಿ ತಮ್ಮನ್ನು ಪರಿಚಯಿಸಿಕೊಂಡಾಗ ಪ್ರತಿಯಾಗಿ ರಮ್ಯಾ ಕಿರುನಗೆ ಬೀರಿ ಕೈ ಮುಗಿಯುತ್ತಿದ್ದರು. 'ಸಾರ್ವಜನಿಕ ಬದುಕಿಗೆ ನಾನು ಹೊಸಬಳು. ಸಂಸದೆಯಾಗಿ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಕರ್ನಾಟಕದಲ್ಲೇ ಮಾದರಿ ಕ್ಷೇತ್ರವಾಗಿ ಮಾಡುವ ಕನಸು ನನ್ನದು. ಅದು ನನ್ನೊಬ್ಬಳಿಂದ ಸಾಧ್ಯವಿಲ್ಲ. ಅದಕ್ಕೆ ನಿಮ್ಮೆಲ್ಲರ (ಅಧಿಕಾರಿಗಳು) ಸಹಕಾರ ಬೇಕು. ನಿಮ್ಮ ಯಾವುದೇ ಯೋಚನೆಗಳಿದ್ದರೆ ಆ ಬಗ್ಗೆ ನನಗೆ ಸಲಹೆ ಕೊಡಿ. ನಾನು ಕಲಿಯಬೇಕಾದ್ದು ತುಂಬಾ ಇದೆ. ನನಗಿನ್ನೂ ಇದೆಲ್ಲ ಹೊಸದು. ನಿಮ್ಮೆಲ್ಲರ ಸಹಕಾರವಿದ್ದರೆ ಬೇಗ ಕಲಿಯುತ್ತೇನೆ. ನೀವು ಅನುಭವಿಗಳಿದ್ದೀರಿ. ನನ್ನನ್ನು ಪ್ರೋತ್ಸಾಹಿಸಿ, ಆಶೀರ್ವದಿಸಿ' ಎಂದು ರಮ್ಯಾ ಮನವಿ ಮಾಡಿದರು.

ಮಂಡ್ಯವನ್ನು ಕಾಡುತ್ತಿರುವ ಕೊರತೆ, ಬೇಡಿಕೆಗಳು ಇವು:
ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳ ಕೊರತೆ, ಮಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನಿಂಗ್, ಬ್ಲಡ್ ಕಾಂಪೋನೆಂಟ್ಸ್ ಘಟಕ ಸ್ಥಾಪನೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯ, ಚಿಕ್ಕ ಮಂಡ್ಯ ಕೆರೆಯಂಗಳದ ಬೀಡಿ ಕಾರ್ಮಿಕರ ಕಾಲೊನಿಗೆ ಕಾಯಕಲ್ಪ, ಹೊಸ ತರಕಾರಿ ಮಾರುಕಟ್ಟೆ, ಮೇಲ್ಸೇತುವೆ ನಿರ್ಮಾಣ ಮುಂತಾದ ಕೊರತೆ, ಬೇಡಿಕೆಗಳೂ ಸಭೆಯಲ್ಲಿ ವ್ಯಕ್ತವಾದವು.

ರಮ್ಯಾ ಕ್ಷೇತ್ರ ದರ್ಶನ
ಸಭೆ ಬಳಿಕ ರಮ್ಯಾ ಕೆರಗೋಡು, ಕೀಲಾರ, ತುಂಬಕೆರೆ, ಕಚ್ಚೀಗೆರೆ, ಹನಕೆರೆ ಮುಂತಾದೆಡೆ ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರಾಥಮಿಕ ಶಾಲೆ, ವಸತಿ ಶಾಲೆ, ದಲಿತ ಕಾಲೊನಿಯ ಅಭಿವೃದ್ಧಿ ಕಾಮಗಾರಿಗಳು, ರಸ್ತೆ ಕಾಮಗಾರಿಗಳು, ಕಚ್ಚೀಗೆರೆಯಲ್ಲಿ ವಿಶ್ವೇಶ್ವರಯ್ಯ ನಾಲೆ ಕಾಮಗಾರಿ ವೀಕ್ಷಿಸಿದರು. ಅರ್ಧಕ್ಕೆ ನಿಂತ ಸಮುದಾಯ ಭವನ ಕಾಮಗಾರಿಯನ್ನು ವೀಕ್ಷಿಸಿದ ಅವರು, ಆದಷ್ಟು ಬೇಗ ಪೂರ್ಣಗೊಳಿಸಲು ಸೂಚಿಸಿದರು.

ಮೈಷುಗರ್ ಸಂಸ್ಥೆಗೆ ಕಾಯಕಲ್ಪ
ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮ್ಯಾ, 'ನನಗೇನು ಭಯವಿಲ್ಲ. ಆತ್ಮವಿಶ್ವಾಸದಿಂದ ಇದ್ದೇನೆ. ಜಿಲ್ಲೆಯಲ್ಲಿ ಸಾಕಷ್ಟು ಮಹಿಳಾ ಅಧಿಕಾರಿಗಳಿದ್ದಾರೆ. ಜಿಲ್ಲೆ ಅಭಿವೃದ್ಧಿಗಾಗಿ ತುಂಬಾ ಆಸೆಗಳಿವೆ. ಶಿಕ್ಷಣ, ಆರೋಗ್ಯ, ರೈತರ ಅಭ್ಯುದಯದ ಕನಸು ನನ್ನದು. ಸಂಸದರ ನಿಧಿಯಿಂದ ಜಿಲ್ಲೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಮೈಷುಗರ್ ಸಂಸ್ಥೆಗೆ ಸರಕಾರ 275 ಕೋಟಿ ರೂ. ಅನುದಾನ ನೀಡಿದೆ. ಈ ಹಣದ ಬಳಕೆ, ದುರ್ಬಳಕೆ ಸಂಬಂಧ ಪರಿಶೀಲನೆ ನಡೆಸಲಾಗುತ್ತದೆ. ಕಾರ್ಖಾನೆ ಪುನಃಶ್ಚೇತನ ಸಂಬಂಧ ತಾಂತ್ರಿಕ ಸಲಹೆಗಾರರಿಂದ ಮಾಹಿತಿ ಪಡೆಯುತ್ತೇನೆ' ಎಂದರು.

ವಾರದಾಗ ಮೂರು ದಿನ ಮಂಡ್ಯಾದಾಗೆ
ಮಂಡ್ಯ ಜನರ ಪ್ರಗತಿಗಾಗಿ ಆಯ್ಕೆಯಾದ ನಾನು ದೆಹಲಿಯಲ್ಲೇ ಠಿಕಾಣಿ ಹೂಡುವುದಿಲ್ಲ. ಇನ್ನು ಮುಂದೆ ಪ್ರತಿ ತಿಂಗಳ ಮೊದಲ ವಾರದ ಮೂರು ದಿನ ಕ್ಷೇತ್ರದಲ್ಲಿಯೇ ಬಿಡಾರ ಹೂಡುತ್ತೇನೆ. ಹಳ್ಳಿಗಳಿಗೆ ತೆರಳಿ ಅಲ್ಲಿನ ಸಮಸ್ಯೆಗಳನ್ನು ಆಲಿಸುತ್ತೇನೆ ಎಂದು ಮಂಡ್ಯ ಸಂಸದೆ ರಮ್ಯಾ ಹೇಳಿದ್ದಾರೆ.
'ನನಗೆ ಅನುಭವ ಬೇಕು. ಜನರಿಂದ ಸಮಸ್ಯೆ ಕೇಳಿಕೊಳ್ಳಬೇಕು. ಖುದ್ದು ಪರಿಶೀಲನೆ ಮಾಡಿದಾಗ ಮಾತ್ರ ವಸ್ತುಸ್ಥಿತಿ ಅರಿವಾಗುತ್ತದೆ. ನಾನು ಸದಾ ವಾಸ್ತವವಾಗಿ ಯೋಚನೆ ಮಾಡುವವಳು. ಅಧಿಕಾರಿಗಳು ಹೇಳಿದ್ದಕ್ಕೆ ತಲೆ ಆಡಿಸುವುದರಿಂದ ಜನರ ಭಾವನೆ ಮತ್ತು ಸಮಸ್ಯೆಗಳನ್ನು ಪರಿಹರಿಸಿದಂತೆ ಆಗುವುದಿಲ್ಲ. ಈ ಕಾರಣಕ್ಕಾಗಿಯೇ ಹಳ್ಳಿಗಳಿಗೆ ತೆರಳಿ ನೇರವಾಗಿ ಅವರ ಸಮಸ್ಯೆಗೆ ಸ್ಪಂದಿಸುತ್ತೇನೆ' ಎಂದು ರಮ್ಯಾ ಅಲವತ್ತುಕೊಂಡರು.












Click it and Unblock the Notifications