ವರುಣನ ಆರ್ಭಟ: ಎಲ್ಲೆಲ್ಲೂ ಮಳೆ, 7 ಸಾವು
ಬೆಂಗಳೂರು, ಸೆ. 11: ವರುಣರಾಯ ಮತ್ತೆ ಆರ್ಭಟಿಸತೊಡಗಿದ್ದಾನೆ. ಕೋಲಾರ ಸೇರಿದಂತೆ ಕೆಲ ಬಯಲುಸೀಮೆಗಳನ್ನು ಹೊರತುಪಡಿಸಿ, ಉತ್ತರ ಕರ್ನಾಟಕ ಸೇರಿದಂತೆ ಎಲ್ಲೆಲ್ಲೂ ಹನಿ ಬೀಳದ ಜಾಗವೇ ಇಲ್ಲ ಎಂಬಂತಾಗಿದೆ. ಮಳೆರಾಯನ ಕಾಟಕ್ಕೆ 5 ಮಂದಿ ಸಾವನ್ನಪ್ಪಿದ್ದಾರೆ.
ಅತ್ತ ಚೆನ್ನೈ ಸೇರಿದಂತೆ ತಮಿಳುನಾಡಿನ ಅನೇಕ ಜಿಲ್ಲೆಗಳು ಮಳೆಯಿಂದ ತತ್ತರಿಸಿವೆ. ಅಲ್ಲಿನ ಶಾಲಾ ಕಾಲೇಜುಗಳು, ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಮೀನುಗಾರಿಕೆಗೂ ರಜೆ ಘೋಷಿಸಿ, ಸಮುದ್ರ ತಟಕ್ಕೆ ಹೋಗದಂತೆ ಮೀನುಗಾರರನ್ನು ಎಚ್ಚರಿಸಲಾಗಿದೆ.

ಚೆನ್ನೈ ಮಳೆ ಪ್ರಭಾವ ಬೆಂಗಳೂರಿನಲ್ಲಿಯೂ ಕಾಣಿಸಿಕೊಂಡಿದ್ದು ಇಡೀ ಬೆಂಗಳೂರಿನ ಮೇಲೆ ಮೋಡದ ಛತ್ರಿಗಳು ಆವರಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಮುಂಗಾರು ಮಳೆ ಈ ಬಾರಿ ಭಾರಿಯಾಗಿಯೇ ಇದೆ. ಮುಂಗಾರು ಅಬ್ಬರ ಸದ್ಯಕ್ಕೆ ಕ್ಷೀಣಿಸುವ ಲಕ್ಷಣಗಳೂ ಇಲ್ಲ. ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದ್ದು ಮಂಗಳವಾರ ಮಳೆ ಬಿಟ್ಟಂತಿತ್ತು. ಆದರೆ ಬುಧವಾರ ಮತ್ತೆ ಮೋಡ ಕಾಣಿಸಿಕೊಂಡಿದ್ದು, ಸದ್ಯಕ್ಕೆ ಮಳೆರಾಯನಿಂದ ಮುಕ್ತಿಯಿಲ್ಲ ಎಂಬಂತಾಗಿದೆ.
7 ಸಾವು?: ಇನ್ನು ಅತ್ತ ಗಂಗಾವತಿಯತ್ತ ಕಣ್ಬಿಟ್ಟರೆ ನಿನ್ನೆ ರಾತ್ರಿ ವಿಪರೀತ ಮಳೆಗೆ ಮುರುಕಲು ಮನೆಯ ಶೆಡ್ ಬಿದ್ದು ಮೂವರು ನಿದ್ದೆಯಲ್ಲೇ ಸಾವಿಗೀಡಾಗಿದ್ದಾರೆ. ಇನ್ನು ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಗುಲ್ಬರ್ಗಾ ಜಿಲ್ಲೆ ಸೇಡಂ ತಾಲೂಕಿನ ಉಡುಗಿ ಗ್ರಾಮದಲ್ಲಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಇಬ್ಬರ ಶವ ಪತ್ತೆಯಾಗಿದೆ.












Click it and Unblock the Notifications