ದೆಹಲಿ ರೇಪ್: ತೀರ್ಪು ವಿರುದ್ಧ ಆರೋಪಿಗಳು ಹೈಕೋರ್ಟಿಗೆ
ನವದೆಹಲಿ, ಸೆಪ್ಟೆಂಬರ್ 10: ಅಮಾಯಕ ವಿದ್ಯಾರ್ಥಿನಿಯ ಮೇಲೆ ಪೈಶಾಚಿಕವಾಗಿ ಸಾಮೂಹಿಕ ಅತ್ಯಾಚಾರ ನಡೆಸಿ, ಅವಳನ್ನು ಅಕ್ಷರಶಃ ಸಾವಿನ ದವಡೆಗೆ ನೂಕಿದ ನಾಲ್ವರು ಆರೋಪಿಗಳನ್ನು ತಪ್ಪಿತಸ್ಥರು ಎಂದು ದೆಹಲಿಯ ಸಾಕೇತ್ ಕ್ಷಿಪ್ರ ನ್ಯಾಯಾಲಯವು ಮಂಗಳವಾರ ಘೋಷಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಯೋಗೀಶ್ ಖನ್ನಾ ಅವರು ಸೆಪ್ಟೆಂಬರ್ 3ರಂದು ಪ್ರಕರಣದ ವಾಸ-ಪ್ರತಿವಾದ ಪೂರ್ಣಗೊಂಡ ಬಳಿಕ ತಮ್ಮ ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದರು. ಇದೀಗತಾನೆ 'ಆರೋಪಿಗಳು ಗುರುತರ ಅಪರಾಧವೆಸಗಿದ್ದಾರೆ. ಅವರು ತಪ್ಪಿತಸ್ಥರು. ಅವರ ಮೇಲಿನ ಆರೋಪ ಸಾಬೀತಾಗಿದೆ' ಎಂದು ಕೋರ್ಟ್ ಹೇಳಿದೆ.
ಆದರೆ ಈ ನಾಲ್ವರೂ ತಪ್ಪಿತಸ್ಥರಿಗೆ ಶಿಕ್ಷೆ ಏನು ಎಂಬುದನ್ನು ಕೋರ್ಟ್ ನಾಳೆ ಸೆಪ್ಟೆಂಬರ್ 11ರಂದು ಬೆಳಗ್ಗೆ ಘೋಷಿಸಲಿದೆ. ನಾಲ್ಕೂ ಕಾಮುಕರಿಗೆ ಗಲ್ಲು ಶಿಕ್ಷೆ ಪ್ರಕಟವಾಗುವ ಸಾಧ್ಯತೆಯಿದೆ.
ಹೈಕೋರ್ಟಿಗೆ ಮೇಲ್ಮನವಿ: ಆದರೆ ಪೊಲೀಸರು ತನ್ನ ಕಕ್ಷಿದಾರರನ್ನು ಪ್ರಕರಣದಲ್ಲಿ ಸಿಕ್ಕಿಹಾಕಿಸಿದ್ದಾರೆ. ಅಸಲಿಗೆ ಘಟನೆ ನಡೆದಾಗ ನನ್ನ ಇಬ್ಬರು ಕಕ್ಷಿದಾರರು ಘಟನಾ ಸ್ಥಳದಿಂದ ತುಂಬಾ ದೂರದಲ್ಲಿದ್ದರು. ಇದನ್ನು ಸಾಬೀತುಪಡಿಸಲು ಕೋರ್ಟಿಗೆ ವಿಡಿಯೋ ಸಹ ಸಲ್ಲಿಸಿದ್ದೇನೆ. ಆದರೆ ಆರೋಪಿಗಳು ಸ್ಥಿತಿವಂತರಲ್ಲ. ಅವರಲ್ಲಿ ತೋಳ್ಬಲವೂ ಇಲ್ಲ. ಹಾಗಾಗಿ ಅವರ ವಿರುದ್ಧ ಆರೋಪ ಹೊರೆಸಿ, ತೀರ್ರ್ಪು ನೀಡಲಾಗಿದೆ. ಇಂದಿನ ತೀರ್ಪಿನ ವಿರುದ್ಧ ದಿಲ್ಲಿ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುವೆ ಎಂದು ನಾಲ್ಕೂ ತಪ್ಪಿತಸ್ಥರ ಪರ ವಕೀಲ ಎಪಿ ಸಿಂಗ್ ಅವರು ತೀರ್ಪು ಹೊರಬೀಳುತ್ತಿದ್ದಂತೆ ಪ್ರತಿಕ್ರಿಯಿಸಿದ್ದಾರೆ.
ಪೊಲೀಸರ ತನಿಖೆಗೆ ಕೋರ್ಟ್ ಪ್ರಶಂಸೆ: ದೇಶವನ್ನೆ ಬೆಚ್ಚಿಬೀಳಿಸಿದ್ದ ದೆಹಲಿ ಗ್ಯಾಂಗ್‌ರೇಪ್ ಪ್ರಕರಣದ ತನಿಖೆ ನಡೆಸಿದ ಪೊಲೀಸರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ನ್ಯಾಯಾದೀಶ ಯೋಗೇಶ್ ಖನ್ನಾ ಅವರು, ಪೊಲೀಸರು ವೈಜ್ಞಾನಿಕವಾಗಿ ತನಿಖೆ ನಡೆಸಿದ್ದಾರೆ. ಪ್ರಕರಣದಲ್ಲಿ ಪೊಲೀಸರ ತನಿಖೆ ಶ್ಲಾಘನೀಯ. ಬೇರೆ ಪ್ರಕರಣಗಳಲ್ಲೂ ಪೊಲೀಸರು ಇದೇ ರೀತಿಯ ತನಿಖೆ ನಡೆಸಬೇಕು ಎಂದರು.
ಪ್ರಕರಣವು ದೇಶಾದ್ಯಂತ ತೀವ್ರ ಸಂಚಲನವನ್ನುಂಟುಮಾಡಿ, ಹೊಸ ಕಾನೂನಿಗೆ ದಾರಿದೀಪವಾಗಿದೆ. ಈ ಮಹತ್ವದ ತೀರ್ಪು ಭವಿಷ್ಯದಲ್ಲಿ ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಕಾನೂನಿನ ಮೇಲೆ ಮಹತ್ತರ ಪರಿಣಾಮ ಹೊಂದಲಿದೆ.
ಬಸ್ ಕ್ಲೀನರ್ ಬಿಹಾರದ ಅಕ್ಷಯ್ ಕುಮಾರ್ ಸಿಂಗ್, ಜಿಮ್ ತರಬೇತುದಾರ ವಿಜಯ್ ಶರ್ಮಾ, ಹಣ್ಣು ಮಾರಾಟಗಾರ ಪವನ್ ಗುಪ್ತಾ ಮತ್ತು ನಿರುದ್ಯೋಗಿ ಮುಕೇಶ್ ಸಿಂಗ್ ಜತೆಗೆ ರಾಮ್ ಸಿಂಗ್ ಹಾಗೂ ಒಬ್ಬ ಬಾಲ ಅತ್ಯಾಚಾರಿ ಡಿಸೆಂಬರ್ 16ರ ಕರಾಳ ರಾತ್ರಿ ನಡೆಸಿದ ಪೈಶಾಚಿಕ ಕೃತ್ಯಕ್ಕೆ ಮೂಕ ಸಾಕ್ಷಿಯಾಗಿರುವ ಬಸ್ಸಿನ ಚಿತ್ರ.

ನಿರ್ಭಯಾ ಗ್ಯಾಂಗ್ ರೇಪ್ ಮತ್ತು ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥನೆನಿಸಿರುವ ಒಬ್ಬ ಬಾಲ ಅತ್ಯಾಚಾರಿಗೆ ಬಾಲಾಪರಾಧಿ ನ್ಯಾಯಮಂಡಳಿಯು ಇತ್ತೀಚೆಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಆದರೆ ಮತ್ತೊಬ್ಬ ಅಪರಾಧಿ ರಾಮ್ ಸಿಂಗ್ ಎಂಬುವವನು ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.
23 ವರ್ಷದ ಅರೆ ವೈದ್ಯಕೀಯ ವಿದ್ಯಾರ್ಥಿಯನ್ನು ಚಲಿಸುತ್ತಿದ್ದ ಬಸ್ಸಿನಲ್ಲಿ ಡಿಸೆಂಬರ್ 16ರಂದು 6 ಮಂದಿ ದುರುಳರು ಸಾಮೂಹಿಕ ಅತ್ಯಾಚಾರವೆಸಗಿದ್ದರು. ಘಟನೆಯ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಬಾಧಿತೆ ನಿರ್ಭಯಾ ಸಿಂಗಾಪುರದಲ್ಲಿ ಮೃತಪಟ್ಟಿದ್ದರು.
ದೆಹಲಿ ಪೊಲೀಸರು ಒಟ್ಟು ಆರು ಮಂದಿಯ ವಿರುದ್ಧ ಸದರಿ ವಿದ್ಯಾರ್ಥಿನಿಯ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಸಂಬಂಧ ಫೆ. 2ರಂದು ಆರೋಪಪಟ್ಟಿ ದಾಖಲಿಸಿದ್ದರು.
ಈ ನಾಲ್ವರು ಅಪರಾಧಿಗಳ ವಿರುದ್ಧ ಪೊಲೀಸರು IPC section 302 (murder), 307 (attempt to murder), 376 (2)(g) (gangrape), 377 (unnatural offences), 395 (dacoity), 396 (murder in dacoity), 201 (destruction of evidence), 120-B conspiracy), 364 (kidnapping or abducting in order to murder), 365 ( kidnapping or abducting with intent secretly and wrongfully to confine person), 394 (voluntarily causing hurt in committing robbery), and section 412 (dishonestly receiving property stolen in the commission of a dacoity) ಅನ್ನು ದಾಖಲಿಸಿದ್ದರು.












Click it and Unblock the Notifications