ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಸರ್ಕಾರದ ಒಪ್ಪಿಗೆ

ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, 65 ಕಿ.ಮೀ. ಉದ್ದದ ಈ ಯೋಜನೆಗೆ 5,800 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ ಎಂದರು.
ಯೋಜನೆ ಅನ್ವಯ ಆರು ಅಥವಾ ಎಂಟು ಪಥದ ರಸ್ತೆ ನಿರ್ಮಾಣ ಮಾಡಲು ಸರ್ಕಾರ ಉದ್ದೇಶಿಸಿದೆ. ಯೋಜನೆ ಅನುಷ್ಠಾನದ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ನಡೆಸಲು, ನಗರ ಭೂಸಾರಿಗೆ ಅಭಿವೃದ್ಧಿ ಇಲಾಖೆಗೆ ಸೂಚಿಸಿಲಾಗಿದ್ದು, ವಿವರವಾದ ವರದಿ ನೀಡಲಿದೆ ಎಂದು ಹೇಳಿದರು.
ಈ ಯೋಜನೆ ಅನುಷ್ಠಾನಕ್ಕಾಗಿ ಜಪಾನ್ ಇಂಟರ್ ನ್ಯಾಷನಲ್ ಕೋ-ಆಪರೇಷನ್ ಏಜೆನ್ಸಿ (ಜೈಕಾ) ಆರ್ಥಿಕ ನೆರವು ಪಡೆಯಲಾಗುವುದು. ಬೆಂಗಳೂರಿನ ಸಂಚಾರದಟ್ಟಣೆ ನಿವಾರಣೆಗೆ ನಿರ್ಮಿಸಲಾಗುತ್ತಿರುವ ಈ ಹೊರವರ್ತುಲ ರಸ್ತೆ ದೊಡ್ಡಬಳ್ಳಾಪುರ ರಸ್ತೆ, ಬಳ್ಳಾರಿ ರಸ್ತೆ, ಹಳೇ ಮದ್ರಾಸ್ ರಸ್ತೆ, ಸರ್ಜಾಪುರ ರಸ್ತೆ ಮೂಲಕ ಹಾದುಹೋಗಲಿದೆ ಎಂದು ಮಾಹಿತಿ ನೀಡಿದರು.
ಈ ಯೋಜನೆ ಜಾರಿಗೊಂಡರೆ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ಕಡಿಮೆಯಾಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು. ಈ ರಸ್ತೆಗಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರ ಮೊತ್ತ ಅಥವಾ ಬೇರೊಂದು ಜಾಗದಲ್ಲಿ ಭೂಮಿಯನ್ನು ನೀಡಲು ಸರ್ಕಾರ ಆಲೋಚನೆ ನಡೆಸಿದೆ ಎಂದರು.
ಅಂಡರ್ ಪಾಸ್ ಇಲ್ಲ ಮೇಲ್ಸೇತುವೆ : ನಗರದ ಪುರಭವನದ ಎದುರು ಉಂಟಾಗುವ ಸಂಚಾರದಟ್ಟಣೆ ಸಮಸ್ಯೆ ನಿವಾರಣೆಗೆ ಸರ್ಕಾರ ಮುಂದಾಗಿದೆ. ಪುರಭವನ ವೃತ್ತದಲ್ಲಿ ಪರ್ಯಾಯ ರಸ್ತೆ ಮಾರ್ಗಗಳನ್ನು ನಿರ್ಮಿಸುವ ಕಾಮಗಾರಿಗೆ ಸರ್ಕಾರ ಟೆಂಡರ್ ನೀಡಿದೆ.
ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಪುರಭವನದ ಮುಂದಿರುವ ವೃತ್ತದಲ್ಲಿ 35.80 ಕೋಟಿ ರೂ.ಗಳಲ್ಲಿ ಅಂಡರ್ ಪಾಸ್ ಅಥವಾ ಮೇಲ್ಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ವೆಂಕಟರಾವ್ ಇನ್‌ಫ್ರಾಸ್ಟ್ರಕ್ಚರ್ ಪ್ರೊಜೆಕ್ಟ್ ಪ್ರೈವೇಟ್ ಲಿ ಎಂಬ ಸಂಸ್ಥೆಗೆ ಈ ಯೋಜನೆಯ ಟೆಂಡರ್ ನೀಡಲಾಗಿದೆ.












Click it and Unblock the Notifications