ಸೆಟ್‌ಟಾಪ್ ಬಾಕ್ಸ್ ಗೆ ಎಷ್ಟು ಹಣ ಕೊಟ್ಟಿದ್ದೀರಿ?

ಎಲ್ಲಾ ಗ್ರಾಹಕರಿಂದ ನೋ ಯುವರ್ ಕಸ್ಟಮರ್ (ಕೆವೈಸಿ) ಅರ್ಜಿ ಪಡೆದುಕೊಳ್ಳಬೇಕೆಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹೊಸ ಆದೇಶ ಹೊರಡಿಸಿದೆ. ಇದರಿಂದ ಹೆಚ್ಚಿನ ಹಣಕ್ಕೆ ಸೆಟ್‌ಟಾಪ್ ಬಾಕ್ಸ್ ಮಾರಿದ ಕೇಬಲ್ ಆಪರೇಟರ್ ಗಳು ಸಂಕಷ್ಟ ಅನುಭವಿಸುವ ಜೊತೆಗೆ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕೆವೈಸಿ ಅರ್ಜಿಯಲ್ಲಿ ಗ್ರಾಹಕರು ಸೆಟ್‌ಟಾಪ್ ಬಾಕ್ಸ್ ಪಡೆಯಲು ನೀಡಿದ ಮೊತ್ತ, ಮಾಸಿಕವಾಗಿ ಅವರು ಪಾವತಿಸುತ್ತಿರುವ ಬಿಲ್, ಪಡೆಯುತ್ತಿರುವ ಚಾನೆಲ್ ಗಳು ಮುಂತಾದವುಗಳ ಮಾಹಿತಿ ನೀಡಬೇಕು. ಈಗ ಗ್ರಾಹಕರು ಸೆಟ್‌ಟಾಪ್ ಬಾಕ್ಸ್ ಖರೀದಿಸಿದ ಹಣದ ಮೊತ್ತವನ್ನು ಅರ್ಜಿಯಲ್ಲಿ ತುಂಬಬೇಕಾಗಿದೆ. ಇದು ಕೇಬಲ್ ಆಪರೇಟರ್ ಗಳ ಭಯಕ್ಕೆ ಕಾರಣವಾಗಿದೆ.
ವಿಜಯನಗರದ ಮಂಜುನಾಥ್ ಎನ್ನುವವರು ಸೆಟ್‌ಟಾಪ್ ಬಾಕ್ಸ್ ಪಡೆಯಲು 1,800 ರೂ. ನೀಡಿದ್ದಾರೆ. ಸದ್ಯ ಕೆವೈಸಿ ಅರ್ಜಿ ಭರ್ತಿ ಮಾಡುವಾಗ, ಕೇಬಲ್ ಆಪರೇಟರ್ ಗಳು 1,200ರೂ. ಭರ್ತಿ ಮಾಡುವಂತೆ ಮನವಿ ಮಾಡುತ್ತಿದ್ದಾರೆ.
ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಈ ಸಮಸ್ಯೆ ಎದುರಾಗಿದೆ. ಸೆಟ್‌ಟಾಪ್ ಬಾಕ್ಸ್ ನೀಡುವಾಗ ಕೇಬಲ್ ಆಪರೇಟರ್ ಗಳು ಹೆಚ್ಚಿನ ಹಣ ಪಡೆದಿದ್ದಾರೆ. ಸದ್ಯ ಗ್ರಾಹಕರು ಕೆವೈಸಿ ಫಾರ್ಮ್ ನಲ್ಲಿ ಆಪರೇಟರ್ ಗಳು ಹೇಳಿದ ಮೊತ್ತ ತುಂಬಲು ನಿರಾಕರಿಸುತ್ತಿದ್ದಾರೆ.
ನೀವು ಹೇಳಿದ ಮೊತ್ತ ಭರ್ತಿ ಮಾಡಬೇಕಾದರೆ, ಹೆಚ್ಚಿನ ಹಣ ಪಡೆದಿದ್ದನ್ನು ವಾಪಸ್ ಮಾಡಿ ಎಂದು ಗ್ರಾಹಕರು ಆಪರೇಟರ್ ಗಳಿಗೆ ಒತ್ತಾಯಿಸುತ್ತಿದ್ದಾರೆ. ಹೊಸ ನಿಯಮದಿಂದಾಗಿ ಹೆಚ್ಚಿನ ಹಣ ಪಡೆದ ಆಪರೇಟರ್ ಗಳು ಸದ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. (ಸೆಟ್ ಟಾಪ್ ಬಾಕ್ಸ್ ಸಹವಾಸ ಸಾಕಪ್ಪಾ ಸಾಕು)
ಹೊಸದಾಗಿ ಸೆಟ್‌ಟಾಪ್ ಬಾಕ್ಸ್ ಪಡೆಯುತ್ತಿರುವ ಗ್ರಾಹಕರು ಕೆವೈಸಿ ಅರ್ಜಿ ಭರ್ತಿ ಮಾಡುವುದು ಕಡ್ಡಾಯವಾಗಿದೆ. ಕೇಬಲ್ ಟಿವಿ ಪ್ರಸಾರದಲ್ಲಿ ಪಾದರ್ಶಕತೆ ಕಾಯ್ದಕೊಳ್ಳಲು ಕೇಂದ್ರ ಸರ್ಕಾರ ಈ ನಿಯಮ ಜಾರಿಗೆ ತಂದಿದೆ. ನಿಗದಿಗೊಳಿಸಿದ ಎಂಆರ್ ಪಿ ದರಕ್ಕಿಂತ ಹೆಚ್ಚಿನ ಹಣಕ್ಕೆ ಬಾಕ್ಸ್ ಮಾರಿದ ಆಪರೇಟರ್ ಗಳು ಇದರಿಂದಾಗಿ ಪರದಾಡುತ್ತಿದ್ದಾರೆ.












Click it and Unblock the Notifications