ಹೊಸ ಮಾರ್ಗಗಳಲ್ಲಿ ವೋಲ್ವೋ ಓಡಿಸಲಿದೆ ಬಿಎಂಟಿಸಿ
ಬೆಂಗಳೂರು, ಸೆ.10 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವೋಲ್ವೋ ಬಸ್ ಗಳ ಮೂಲಕ ಹೆಚ್ಚಿನ ಆದಾಯ ಸಂಗ್ರಹಣೆ ಮಾಡಲು ಮುಂದಾಗಿದೆ. ಈ ಮೂಲಕ ವೋಲ್ವೋಗಳಿಂದ ಆಗುತ್ತಿರುವ ನಷ್ಟವನ್ನು ಭರ್ತಿ ಮಾಡಲು ಕಾರ್ಯ ಯೋಜನೆ ತಯಾರಿಸಿದೆ.
ಬಿಎಂಟಿಸಿ ಪಾಲಿಗೆ ವೋಲ್ವೋ ಬಸ್ ಗಳು ಬಿಳಿಯಾನೆಯಂತಾಗಿವೆ. ಇವುಗಳಿಂದ ಬರುವ ಆದಾಯಕ್ಕಿಂತ, ನಿರ್ವಹಣಾ ವೆಚ್ಚವೇ ಹೆಚ್ಚಾಗಿದ್ದು ಸಂಸ್ಥೆಯ ತಲೆನೋವಿಗೆ ಕಾರಣವಾಗಿದೆ. ಆದ್ದರಿಂದ ಹೊಸ ಮಾರ್ಗಗಳಲ್ಲಿ ವೋಲ್ವೋ ಸಂಚಾರ ಪ್ರಾರಂಭಿಸಲು ಚಿಂತನೆ ನಡೆಸಿದೆ.

2008ರಲ್ಲಿ ಬಿಎಂಟಿಸಿ ವೋಲ್ವೋ ಬಸ್ ಗಳನ್ನು ಪರಿಚಯಿಸಿತು. 2011ರಲ್ಲಿ ವೋಲ್ವೋ ಬಸ್ ಗಳಿಂದ ಸಂಸ್ಥೆ 55 ಕೋಟಿ ನಷ್ಟ ಅನುಭವಿಸಿತ್ತು. ನಂತರ ಪ್ರಯಾಣ ದರ ಹೆಚ್ಚಳ ಮಾಡಿ, ನಷ್ಟ ಭರ್ತಿ ಮಾಡಿಕೊಳ್ಳಲು ಮುಂದಾಯಿತು.
ವೋಲ್ವೋ ಪ್ರಯಾಣದರ ದುಬಾರಿಯಾದ ನಂತರ ಬಸ್ ಗಳು ಪ್ರಯಾಣಿಕರ ಕೊರತೆ ಎದುರಿಸಲು ಪ್ರಾರಂಭಿಸಿದವು. ಆದ್ದರಿಂದ ನಷ್ಟ ಮತ್ತಷ್ಟು ಹೆಚ್ಚಾಯಿತು. ಸದ್ಯ ಹೊಸ ಮಾರ್ಗಗಳಲ್ಲಿ ವೋಲ್ವೋ ಓಡಿಸಿ ನಷ್ಟ ಭರ್ತಿಮಾಡಿಕೊಳ್ಳಲು ಬಿಎಂಟಿಸಿ ಯೋಜನೆ ರೂಪಿಸಿದೆ.
ಒಟ್ಟು 6,300 ಬಸ್ ಹೊಂದಿರುವ ಬಿಎಂಟಿಸಿ ಬಳಿ 110 ವೋಲ್ವೋ ಬಸ್ ಗಳಿವೆ. ಈ ವರ್ಷ ಸಂಸ್ಥೆ 250-300 ಹೊಸ ವೋಲ್ವೋ ಬಸ್ ಗಳನ್ನು ಖರೀದಿಸಲು ಚಿಂತನೆ ನಡೆಸಿತ್ತು. ಆದರೆ, ಈ ಕಾರ್ಯಕ್ಕೆ ಸದ್ಯ ಬ್ರೇಕ್ ಬಿದ್ದಿದ್ದು, ನಷ್ಟ ಭರ್ತಿ ಮಾಡಲು ಆದ್ಯತೆ ನೀಡಲಾಗಿದೆ.
ಇತ್ತೀಚೆಗೆ ನಡೆದ ಬಿಎಂಟಿಸಿ ಅಧಿಕಾರಿಗಳ ಸಭೆಯಲ್ಲಿ ಹೆಚ್ಚು ಆದಾಯ ತರುವ ಹೊಸ ಮಾರ್ಗಗಳಲ್ಲಿ ವೋಲ್ವೋ ಸಂಚಾರ ಆರಂಭಿಸುವ ಕುರಿತು ಚರ್ಚಿಸಲಾಗಿದೆ. ಕೆಲವು ಮಾರ್ಗಗಳಿಗೆ ಮಾತ್ರ ಸೀಮಿತವಾಗಿರುವ ಬಸ್ ಸಂಚಾರವನ್ನು ವಿಸ್ತರಿಸಲು ಕಾರ್ಯತಂತ್ರ ರೂಪಿಸಲಾಗಿದೆ.
ಆದಾಯ ಕಡಿಮೆ ಇರುವ ಮಾರ್ಗದ ಬಸ್ ಸಂಚಾರ ಸ್ಥಗಿತಗೊಳಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಆದರೆ, ಈ ಕುರಿತ ಪ್ರಸ್ತಾವನೆ ಸಂಸ್ಥೆಯ ಮುಂದಿಲ್ಲ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಬಿಎಂಟಿಸಿಯ ಯೋಜನೆ ಕಾರ್ಯರೂಪಕ್ಕೆ ಬಂದರೆ, ಹೊಸ ಮಾರ್ಗಗಳಲ್ಲಿ ವೋಲ್ವೋ ಬಸ್ ಗಳ ಸಂಚಾರ ಪ್ರಾರಂಭವಾಗಲಿದೆ. ಹಲವು ಮಾರ್ಗದ ಪ್ರಯಾಣಿಕರು ಎಸಿ ಬಸ್ ನಲ್ಲಿ ಸಂಚರಿಸುವ ಅವಕಾಶ ಪಡೆಯಲಿದ್ದಾರೆ.











Click it and Unblock the Notifications