ಎಂಎಂ ಸಿಂಗ್ 'ಡಾಕ್ಟರ್ ಆಫ್ ಮನಿ' ಎಂದ ಮೋದಿ
ಛತ್ತೀಸ್ ಗಡ, ಸೆ.7: ತೆಲಂಗಾಣ ರಾಜ್ಯ ರಚನೆಗೆ ಮುಂದಾಗಿರುವ ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ಛತ್ತೀಸ್ ಗಢ ರಾಜ್ಯ ರಚನೆ ಮಾಡಿದ್ದನ್ನು ಸ್ಮರಿಸಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ರಮಣ್ ಸಿಂಗ್ ಅವರನ್ನು ಹೊಗಳುತ್ತಾ ಪ್ರಧಾನಿ ಎಂಎಂ ಸಿಂಗ್ ಅವರನ್ನು ಕಿಚಾಯಿಸಿದರು.
ಇಂದು ಅಂಬಿಕಾಪುರದಲ್ಲಿ ಬಿಜೆಪಿ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ತೆಲಂಗಾಣ ರಾಜ್ಯ ರಚನೆ ವಿಚಾರ ಕೇವಲ ಓಟ್ ಬ್ಯಾಂಕ್ ಗಾಗಿ ಮಾಡುತ್ತಿದೆ. ಅಲ್ಲದೆ ಕಾಂಗ್ರೆಸ್ ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರತ್ಯೇಕ ರಾಜ್ಯ ರಚನೆಗೆ ಮುಂದಾಗಿದೆ ಎಂದು ಆರೋಪಿಸಿದರು.
ದೆಹಲಿಯಲ್ಲೂ ಒಬ್ಬ ಸಿಂಗ್ ಇದ್ದಾರೆ, ಛತ್ತೀಸ್ ಗಢದಲ್ಲೂ ಒಬ್ಬ ಸಿಂಗ್ ಇದ್ದಾರೆ. ಇಬ್ಬರು 10 ವರ್ಷದ ಅಧಿಕಾರ ಅವಧಿ ಪೂರೈಸಿದ್ದಾರೆ. ಇಬ್ಬರು ಡಾಕ್ಟರೇಟ್ ಪಡೆದವರೇ. ಡಾ. ರಮಣ್ ಸಿಂಗ್ ಅವರು ಮಾನವರ ಡಾಕ್ಟರ್ ಆಗಿದ್ದಾರೆ. ಮನಮೋಹನ್ ಸಿಂಗ್ ಅವರು ಡಾಕ್ಟರ್ ಆಫ್ ಹಣ(Money) ಆಗಿರುವುದು ದುರಂತ ಎಂದು ಪ್ರಧಾನಿ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.

ತೆಲಂಗಾಣ ರಾಜ್ಯ ರಚನೆಯೊಂದಿಗೆ ಕಾಂಗ್ರೆಸ್ ದೇಶದಲ್ಲಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಕಾಂಗ್ರೆಸ್ ಕೇವಲ ಮತಕ್ಕಾಗಿ ದೇಶವನ್ನು ಹೊಡೆಯುವ ಹುನ್ನಾರ ನಡೆಸುತ್ತಿದೆ ಎಂದರು.
ಡಾಲರ್ ಎದುರ ರೂಪಾಯಿ ಮೌಲ್ಯ ಕಳೆದುಕೊಂಡು ಕೋಮಾಸ್ಧಿತಿಗೆ ಹೋಗಿದೆ. ದೇಶದ ಆರ್ಥಿಕ ಪರಿಸ್ಥಿತಿ ಯಾರ ಅಂಕೆಗೂ ಸಿಗದಂತಾಗಿದೆ. ಇದು ಈಗೆ ಮುಂದುವರೆದರೆ ದೇಶದ ಆರ್ಥಿಕ ಸ್ಥಿತಿ ಅಧೋಗತಿಗೆ ತಲುಪುತ್ತದೆ.
ಇಂಥ ಸಂದರ್ಭದಲ್ಲೂ ಸರ್ಕಾರ ರೂಪಾಯಿ ಅಪಮೌಲ್ಯ ತಡೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದನ್ನು ಗಮನಿಸಿದರೆ ಕೇಂದ್ರ ಸರ್ಕಾರ ಆಡಳಿತ ನಡೆಸುವ ನೈತಿಕತೆ ಕಳೆದುಕೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ವಿಫಲರಾಗಿದ್ದಾರೆ ಎಂದು ಮೋದಿ ದೂರಿದರು.












Click it and Unblock the Notifications