ರಾಚೋಟೇಶ್ವರ ಸನ್ನಿಧಿಯಲ್ಲಿ ಬಂಡೆ ಮೇಲೆ ಊಟ!
ಯಾದಗಿರಿ, ಸೆ. 7 : ತಟ್ಟೆ ಇಲ್ಲದೇ ನಾವು ಊಟ ಮಾಡಲು ಸಾಧ್ಯವೇ ಇಲ್ಲ. ಆದ್ರೆ ಈ ಗ್ರಾಮದಲ್ಲಿ ಜಾತ್ರೆಯಂದು ಇಡೀ ಊರಿನ ಜನರಲ್ಲದೇ, ಬಂದಂತಹ ಭಕ್ತರು ಸಹ ತಟ್ಟೆಗಳನ್ನು ಬಳಸದೇ ಬಂಡೆಯ ಮೇಲೆ ಊಟ ಮಾಡುತ್ತಾರೆ. ಬಡವ ಶ್ರೀಮಂತರೆನ್ನುವ ಭೇದ ಭಾವವಿಲ್ಲದೇ ಎಲ್ಲರೂ ಸೇರಿ ಭಕ್ಷ ಭೋಜನ ಸವಿಯುತ್ತಾರೆ. ಅರೇ ಅದು ಹೇಗೆ ಬಂಡೆ ಮೇಲೆ ಊಟ ಮಾಡ್ತಾರೆ ಅಂತ ಹುಬ್ಬೇರಿಸುತ್ತೀರಾ, ಹಾಗಾದರೇ ಮುಂದೆ ಓದಿ.
ಜೋಳದ ರೊಟ್ಟಿ, ಪುಂಡಿಪಲ್ಯ, ಬದನೆಕಾಯಿ ಪಲ್ಯ, ಟೊಮೆಟೊ ಚಟ್ನಿ, ಕರ್ಚಿಕಾಯಿ, ಚಕ್ಕುಲಿ, ಸಂಡಗಿ... ಹೀಗೆ ಬಾಯಿಗೆ ನೀರುಣಿಸುವ ಬಗೆ ಬಗೆಯ ವಿಶೇಷ ತಿಂಡಿ ಪದಾರ್ಥಗಳನ್ನು ಬಂಡೆಯ ಮೇಲೆ ಹಾಕಿಕೊಂಡು ಸಾಮೂಹಿಕವಾಗಿ ಊಟ ಮಾಡುತ್ತಾರೆ. ಅದು ಯಾದಗಿರಿ ತಾಲ್ಲೂಕಿನ ಕಾಳೆಬೆಳಗುಂದಿ ಗ್ರಾಮದ ಹೊರವಲಯದ ಶ್ರೀ ಬಂಡೇ ರಾಚೋಟೇಶ್ವರ ದೇವಸ್ಥಾನದಲ್ಲಿ.
ಪ್ರತಿ ವರ್ಷ ಶ್ರಾವಣ ಮಾಸದ ಕೊನೆಯ ಮಂಗಳವಾರದಂದು ಕುಟುಂಬ ಸಮೇತ ತಿಂಡಿ ಪದಾರ್ಥಗಳ ಬುತ್ತಿ ಕಟ್ಟಿಕೊಂಡು ಬಂದು ಸಾಮೂಹಿಕವಾಗಿ ಬಂಡೆಯ ಮೇಲೆ ಹಾಕಿಕೊಂಡು ಊಟ ಮಾಡುತ್ತಾರೆ. ಸುಮಾರು ಎರಡು ಸಾವಿರ ವರ್ಷಗಳಿಂದ ವಿಶೇಷ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿರುವ ಜಾತ್ರೆಗೆ ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಕುಟುಂಬ ಸಮೇತರಾಗಿ ಬರುವ ಜನರು, ಕಲ್ಲು ಬಂಡೆಯ ಮೇಲೆ ಊಟ ಮಾಡುತ್ತಾರೆ.

ಮಳೆ ಬೆಳೆ ಚೆನ್ನಾಗಿ ಆಗುತ್ತದೆ : ನಂಬಿಕೆ
ಹೀಗೆ ಬಂಡೆಯ ಮೇಲೆ ಊಟ ಮಾಡುವುದರಿಂದ ಹೊಟ್ಟೆಯಲ್ಲಿ ಸಣ್ಣ ಸಣ್ಣ ಕಲ್ಲುಗಳು ಹೋದರೂ ಸಹ ದೇವರ ಸನ್ನಿಧಿಯಲ್ಲಿ ಏನು ಆಗೋದಿಲ್ಲ ಎನ್ನುವುದು ಭಕ್ತರ ಬಲವಾದ ನಂಬಿಕೆ. ಅಲ್ಲದೇ ಬಂಡೆಯ ಮೇಲೆ ಊಟ ಮಾಡುವುದರಿಂದ ಆರೋಗ್ಯವು ಚೆನ್ನಾಗಿ ಇರುತ್ತದಲ್ಲದೇ ಮಳೆ ಬೆಳೆ ಚೆನ್ನಾಗಿ ಆಗುತ್ತದೆ ಎನ್ನುದು ಜಾತ್ರೆ ಬರುವ ಜನರ ಮಾತು.

ಶ್ರೀಮಂತ ಬಡವನೆಂಬ ಭೇದಭಾವವಿಲ್ಲ
ಸುಮಾರು 2,000 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ವಿಶಿಷ್ಟ ಜಾತ್ರೆಯಲ್ಲಿ ಬಡವ ಶ್ರೀಮಂತರೆಂಬ ಯಾವುದೇ ಭೇದಭಾವವಿಲ್ಲ. ದೇವರ ಸನ್ನಿಧಿಯಲ್ಲಿ 5 ಕಲ್ಲುಗಳನ್ನು ಇಟ್ಟು ಚಿಕ್ಕದಾದ ಮನೆ ತರಹ ಮಾಡಿ ಅದಕ್ಕೆ ಪೂಜೆ ಮಾಡುವುದರಿಂದ ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತವೆ, ಉರುಳು ಸೇವೆ ಮಾಡಿದ್ರೆ ಇಷ್ಟಾರ್ಥ ಬೇಡಿಕೆಗಳು ಈಡೇರುತ್ತವೆ ಎನ್ನುತ್ತಾರೆ ಭಕ್ತರು.

ಬುಟ್ಟಿಯಲ್ಲಿ ರೊಟ್ಟಿ, ಪುಂಡಿ ಪಲ್ಯ
ಗ್ರಾಮದ ಜನರು ಜಾತ್ರೆಯಲ್ಲಿ ಊರಿಂದ ಬುಟ್ಟಿಯಲ್ಲಿ ರೊಟ್ಟಿ, ಪುಂಡಿ ಪಲ್ಯ, ಅನ್ನ, ಬದನೆಕಾಯಿ ಪಲ್ಯ, ಸೇರಿದಂತೆ ವಿವಿಧ ಭಕ್ಷ್ಯಗಳನ್ನ ಮನೆಯಲ್ಲಿ ಮಾಡಿಕೊಂಡು ಬಂಡೇ ರಾಚೋಟೇಶ್ವರ ದೇವಸ್ಥಾನಕ್ಕೆ ಬರುತ್ತಾರೆ. ನಂತರ ಎಲ್ಲರೂ ಸೇರಿ ಬಂಡೆ ಮೇಲೆ ಹಾಕಿಕೊಂಡು ಊಟ ಮಾಡುತ್ತಾರೆ. ಯಾವುದೇ ಸಂಕೋಚವಿಲ್ಲದೇ ಜಾತ್ರೆಗೆ ಬಂದಂತಹ ಭಕ್ತರಿಗೂ ಊಟ ಮಾಡಲು ಕರೆಯುತ್ತಾರೆ.

ನಂಬಿಕೆ, ಪರಂಪರೆ ಹೀಗೇ ಮುಂದುವರಿಯಲಿ
ಕಾಲ ಆಧುನಿಕವಾಗಿ ಎಷ್ಟೇ ಮುಂದುವರೆದರೂ ನಮ್ಮ ಭಾರತೀಯ ಸಂಸ್ಕೃತಿಯನ್ನು ಗ್ರಾಮೀಣ ಪ್ರದೇಶದ ಜನರು ಮುಂದುವರೆಸಿಕೊಂಡು ಬರುತ್ತಿರುವುದಕ್ಕೆ ಇಂತಹ ಜಾತ್ರೆಗಳೇ ನಿದರ್ಶನ. ಮತ್ತೊಂದು ಜಾತ್ರೆಯ ವಿಶೇಷವೆಂದರೆ ಬಂಡೆಯ ಮೇಲೆ ಊಟ ಮಾಡಿದರೆ ಯಾವುದೇ ರೋಗರುಜಿನಗಳು ಬರುವುದಿಲ್ಲ ಎನ್ನೋದು. ಒಟ್ಟಾರೆಯಾಗಿ ಬಂಡೇ ರಾಚೋಟೇಶ್ವರ ಮೇಲಿಟ್ಟಿರುವ ನಂಬಿಕೆ ಹಾಗೂ ಈ ಜಾತ್ರೆಯಲ್ಲಿ ಆಚರಿಸಿಕೊಂಡು ಬರುತ್ತಿರುವ ಪರಂಪರೆ ಮುಂದುವರಿಯಲಿ.












Click it and Unblock the Notifications