ಅಸಾರಾಮ್ ಬಾಪುಗೆ ಜಾಮೀನು ಸಿಗಲಿಲ್ಲ
ನವದೆಹಲಿ, ಸೆ.4: ಅಪ್ರಾಪ್ತ ವಯಸ್ಕ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಹೊತ್ತು ಜೈಲು ಸೇರಿರುವ ಸ್ವಯಂಘೋಷಿತ ದೇವಮಾನ ಅಸಾರಾಮ್ ಬಾಪು ಅವರಿಗೆ ಮತ್ತೆ ಹಿನ್ನಡೆಯಾಗಿದೆ. ಬಾಪು ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕಾರಗೊಂಡಿದೆ.
ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಜೋಧಪುರದ ಸ್ಥಳೀಯ ಕೋರ್ಟ್ ಬುಧವಾರ(ಸೆ.4) ಅಸಾರಾಮ್ ಬಾಪು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿ, ಜಾಮೀನು ನಿರಾಕರಿಸಿದೆ.
ಅಸಾರಾಮ್ ಪರ ಅವರ ಭಕ್ತರು ನಡೆಸುತ್ತಿರುವ ವ್ಯಾಪಕ ಪ್ರತಿಭಟನೆಯೇ ಬಾಪುಗೆ ಮುಳುವಾಗಿದೆ. ಬಾಪು ಅವರು ಪ್ರಭಾವಿ ವ್ಯಕ್ತಿಯಾಗಿದ್ದು, ಜಾಮೀನಿನ ಮೇಲೆ ಹೊರಕ್ಕೆ ಹೋದರೆ ಸಾಕ್ಷ್ಯ ನಾಶಪಡಿಸುವುದರಲ್ಲಿ ಅನುಮಾನವೇ ಇಲ್ಲ. ಈ ಹಿಂದೆ ಕೂಡಾ ಅನೇಕ ಪ್ರಕರಣಗಳಲ್ಲಿ ಸಾಕ್ಷ್ಯ ನಾಶ ಪಡಿಸಿದ ಉದಾಹರಣೆಗಳಿವೆ ಎಂಬ ವಾದವನ್ನು ಮನ್ನಿಸಿದ ಕೋರ್ಟ್ ಅಸಾರಾಮ್ ಅವರಿಗೆ ಜಾಮೀನು ನಿರಾಕರಿಸಿದೆ.

ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಅವರು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದು ಇನ್ನಷ್ಟು ನಿದ್ರೆರಹಿತ ರಾತ್ರಿಗಳನ್ನು ಜೈಲಿನಲ್ಲಿ ಕಳೆಯಬೇಕಾಗುತ್ತದೆ. ಅಸಾರಾಮ್ ಬಾಪು ಅವರ ಪುರುಷತ್ವ ಪರೀಕ್ಷೆ ನಡೆಸಿದ ಬಗ್ಗೆ ಕಿಡಿಕಾರಿರುವ ಬಾಪು ಅವರ ವಕೀಲ ಕೆಕೆ ಮೆನನ್ ಇದೊಂದು ಷಡ್ಯಂತ್ರವಾಗಿದೆ ಎಂದಿದ್ದಾರೆ.
ಅಪ್ರಾಪ್ತ ವಯಸ್ಕಳು ಎನ್ನುತ್ತಿರುವ ಯುವತಿಯ ಡಿಎನ್ ಎ ಪರೀಕ್ಷೆ ಮಾಡಿ ಆಕೆ ಅಪ್ರಾಪ್ತ ವಯಸ್ಕಳೆ ಅಲ್ಲವೇ ಎಂಬುದನ್ನು ಮೊದಲು ನಿರ್ಧರಿಸಲಿ ಎಂದಿದ್ದಾರೆ. ಜೋಧಪುರ ಪೊಲೀಸರು ಬಾಪು ವಿರುದ್ಧ Protection of Children against Sexual Offences (POSCO) ಅನ್ವಯ ಕೇಸು ದಾಖಲಿಸುತ್ತಾರೆ ಎಂಬ ಸುದ್ದಿಯೂ ಇದೆ.
ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಾಪು ಒಬ್ಬರೇ ಆರೋಪಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಾರಾಮ್ ಬಾಪು ಅವರ ಆಪ್ತ ಶಿವ ಎಂಬುವವರನ್ನು ಕೋರ್ಟಿಗೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಾಪು ಹೇಳಿದ ಮಾತುಗಳನ್ನು ನಾನು ಹುಚ್ಚನಂತೆ ನಂಬಿಬಿಟ್ಟೆ. ಬಾಪು ನನ್ನ ಮಗಳ ಮೇಲೆ ದೌರ್ಜನ್ಯ ಎಸಗಿಬಿಟ್ಟ. ಲಕ್ನೋದಿಂದ 150 ಕಿ.ಮೀ ದೂರದಲ್ಲಿರುವ ಷಹಜಹಾನ್ ಪುರದಲ್ಲಿ ನನ್ನ ಜಮೀನು ದಾನ ನೀಡಿ ಆಶ್ರಮ ನಿರ್ಮಿಸಿ ತಪ್ಪು ಮಾಡಿಬಿಟ್ಟೆ. ಬಾಪುಗೆ ಕಠಿಣ ಶಿಕ್ಷೆ ವಿಧಿಸಿ ಎಂದು ಸಂತ್ರಸ್ತ ಬಾಲಕಿಯ ತಂದೆ ದುಃಖ ತೋಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಬಾಪು ಪರ-ವಿರೋಧ ಪ್ರತಿಭಟನೆಗಳು ಜೋರಾಗಿ ನಡೆಯುತ್ತಲೇ ಇವೆ.(ಪಿಟಿಐ)












Click it and Unblock the Notifications