ಅರ್ಕಾವತಿ ಯೋಜನೆಗೂ ಜಯಲಲಿತಾ ಅಪಸ್ವರ!

ಬುಧವಾರ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿರುವ ಜಯಲಲಿತಾ, ಕಾವೇರಿ ನದಿಯ ಸಹಜ ಹರಿವಿಗೆ ಅರ್ಕಾವತಿ ಹಾಗೂ ಹೇಮಾವತಿ ನದಿ ಕಾಲುವೆಗಳ ಆಧುನೀಕರಣದಿಂದ ಅಡಚಣೆ ಉಂಟಾಗಲಿದೆ. ಕಾವೇರಿ ನದಿ ಪಾತ್ರದಲ್ಲಿ ಈ ಕಾಮಗಾರಿ ನಡೆಯುತ್ತಿದ್ದು, ಕರ್ನಾಟಕ ತಮ್ಮ ಅನುಮತಿ ಪಡೆಯಬೇಕಿತ್ತು ಎಂದು ಹೇಳಿದ್ದಾರೆ.
ಕರ್ನಾಟಕ ಸರ್ಕಾರ ಅರ್ಕಾವತಿ ಪುನಶ್ಚೇತನ ಯೋಜನೆಯ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ನಿರ್ದೇಶನ ನೀಡಬೇಕೆಂದು ಮನಮೋಹನ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ. ಅರ್ಕಾವತಿ ಕಾಮಗಾರಿಗೆ ಕರೆದಿರುವ ಟೆಂಡರ್ ಪ್ರಕ್ರಿಯೆಗೆ ತಡೆ ನೀಡಬೇಕೆಂದು ಆಗ್ರಹಿಸಿದ್ದಾರೆ. (ಮತ್ತೆ ಕಾವೇರಿ ಕ್ಯಾತೆ ತೆಗೆದ ಜಯಲಲಿತಾ)
ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆಯಾಗುವವರೆಗೆ ಯಾವುದೇ ಕಾರಣಕ್ಕೂ ಕಾವೇರಿ ಪಾತ್ರದಲ್ಲಿ ನೀರಾವರಿ ಕಾಮಗಾರಿಗಳನ್ನು ನಡೆಸಲು ಅವಕಾಶ ನೀಡಬಾರದು ಎಂದು ಜಯಲಲಿತಾ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಕಾಮಗಾರಿ ಪ್ರಾರಂಭವಾದರೆ, ಕಾವೇರಿ ನದಿ ನೀರು ಹರಿವಿಗೆ ತಡೆ ಉಂಟಾಗಿ ತಮಿಳುನಾಡಿಗೆ ತೊಂದರೆ ಆಗಲಿದೆ ಎಂದು ಪತ್ರದಲ್ಲಿ ವಿವರಣೆ ನೀಡಿದ್ದಾರೆ.
ಅರ್ಕಾವತಿ ಕಾಮಗಾರಿ ಪ್ರಾರಂಭವಾದರೆ, ಕರ್ನಾಟಕ ರಾಜ್ಯ ಸರ್ಕಾರ ಕಾವೇರಿ ಐ ತೀರ್ಪುನ್ನು ಉಲ್ಲಂಘಿಸಿದಂತಾಗುತ್ತದೆ. ಕಾವೇರಿ ಅಧಿಸೂಚನೆ ಪ್ರಕಟಗೊಳ್ಳದೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಜಯಲಲಿತಾ ಪ್ರಧಾನಿಗೆ ಪತ್ರದಲ್ಲಿ ತಿಳಿಸಿದ್ದಾರೆ
ಮಂಗಳವಾರ ಪ್ರಧಾನಿಗೆ ಪತ್ರ ಬರೆದಿದ್ದ ಜಯಲಲಿತಾ, ಮೇಕೆದಾಟು ಬಳಿ ಕರ್ನಾಟಕ ಸರ್ಕಾರ 500 ರಿಂದ 600 ಕೋಟಿ ರೂ. ವೆಚ್ಚದಲ್ಲಿ ಜಲವಿದ್ಯುತ್ ಯೋಜನೆ ಪ್ರಾರಂಭಿಸುತ್ತಿದೆ ಇದಕ್ಕೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದ್ದರು. ಸದ್ಯ ಅರ್ಕಾವತಿ ಯೋಜನೆಗೂ ಅಪಸ್ವರ ಎತ್ತಿದ್ದಾರೆ.












Click it and Unblock the Notifications