ಸಂತರು, ದೇವಮಾನವರು ಮಹಿಳೆಯರಿಂದ ದೂರವಿರಲಿ
ಹರಿದ್ವಾರ, ಸೆ 3: ಹದಿನಾರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದಡಿಯಲಿ ಜೋಧಪುರ ಪೊಲೀಸರಿಂದ ಬಂಧಿತರಾಗಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಬಾಪು ಬಂಧನದ ಘಟನೆ ದೇಶದ ಹಲವು ಮಠಾಧಿಪತಿಗಳು ಎಚ್ಚರಿಕೆಯಿಂದ ಇರುವಂತೆ ಮಾಡಿದೆ.
ಈ ಘಟನೆಯ ಬಗ್ಗೆ ಮಾತನಾಡುತ್ತಿದ್ದ ಯೋಗ ಗುರು ಬಾಬಾ ರಾಮದೇವ್ "ಸ್ವಾಮೀಜಿಗಳು ಮತ್ತು ದೇವ ಮಾನವರು' ಮಹಿಳೆಯರಿಂದ ದೂರವಿರ ಬೇಕು. ಸರ್ವಸಂಗ ಪರಿತ್ಯಾಗಿಗಳಾದ ಸ್ವಾಮೀಜಿಗಳಿಗೆ ಸೆಕ್ಸ್ ಯಾಕೆ ಬೇಕು ಎಂದು ಪ್ರಶ್ನಿಸಿದ್ದಾರೆ.
ಇವರುಗಳಿಗೆ ಸಮಾಜದಲ್ಲಿ ಗೌರವದ ಸ್ಥಾನವಿದೆ. ತಾಯಿ, ಮಗಳು, ಸಹೋದರಿ, ಅತ್ತೆ ಯಾರೇ ಇರಬಹುದು ಒಟ್ಟಿನಲ್ಲಿ ಮಹಿಳೆಯರಿಂದ ಸ್ವಾಮೀಜಿಗಳು ದೂರವಿರ ಬೇಕು. ಅದನ್ನೇ ನಮ್ಮ ಹಿಂದೂ ಸಂಸ್ಕೃತಿ ಪ್ರತಿಪಾದಿಸಿದ್ದು ಕೂಡಾ.

ಅಸಾರಾಮ್ ಬಾಪು ಹೆಸರು ಪ್ರಸ್ತಾಪಿಸದೇ ಮಾತನಾಡುತ್ತಿದ್ದ ರಾಮದೇವ್, ಮಹಿಳೆಯರ ಜೊತೆ ಅಂತರದಲ್ಲಿದ್ದರೆ ಯಾವ ರೀತಿಯ ಮುಜುಗರ ಅಥವಾ ತೊಂದರೆಗಳು ಬರುವುದಿಲ್ಲ. ನಮ್ಮ ಸಂಸ್ಕೃತಿಗೆ ವಿರುದ್ದವಾಗಿ ನಡೆದರೆ ಇಂದಲ್ಲಾ ನಾಳೆ ತೊಂದರೆ ಅನುಭವಿಸಲೇ ಬೇಕಾಗುತ್ತದೆ.
ಹಿಂದೂಗಳ ಭಾವನೆ ಮತ್ತು ಸಂಸ್ಕೃತಿಗೆ ವಿರುದ್ದವಾಗಿ ಯಾರೇ ನಡೆದರೂ ಅದು ತಪ್ಪು. ಜನಸಾಮಾನ್ಯರಿಗೆ ಸಂತರು ಮತ್ತು ದೇವಮಾನವರ ಮೇಲಿನ ಗೌರವ ಕಮ್ಮಿಯಾಗುವ ಘಟನೆಗಳು ಮರುಕಳಿಸ ಬಾರದೆಂದು ಬಾಬಾ ರಾಮದೇವ್ ಹೇಳಿದ್ದಾರೆ. (ಪಿಟಿಐ)












Click it and Unblock the Notifications