ಬೆಂಗಳೂರು, ಮೈಸೂರು ಅಭಿವೃದ್ಧಿಗೆ 61 ಯೋಜನೆ

ಸೋಮವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ, ಎರಡೂ ನಗರಗಳ ಅಭಿವೃದ್ಧಿಗಾಗಿ ಸುಮಾರು 5265.22ಕೋಟಿ ರೂ.ಗಳ ಯೋಜನೆ ಸಿದ್ದಪಡಿಸಲಾಗಿದೆ ಎಂದು ತಿಳಿಸಿದರು.
ಯೋಜನೆ ಯಡಿ ರಸ್ತೆಗಳ ಅಭಿವೃದ್ಧಿ, ಸಾರಿಗೆ ವ್ಯವಸ್ಥೆ ಸುಧಾರಣೆ, ಕುಡಿಯುವ ನೀರಿನ ಸಮಸ್ಯೆ ಪರಿಹಾರ ಮುಂತಾದ ಅಭಿವೃದ್ದಿ ಕೆಲಸಗಳನ್ನು ಮೈಸೂರು ಮತ್ತು ಬೆಂಗಳೂರಿನಲ್ಲಿ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಗರದ ಅಭಿವೃದ್ದಿ ಯೋಜನೆಗಳನ್ನು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ಸಂಸ್ಥೆ ತಯಾರಿಸಿ ಕೇಂದ್ರ ಸರ್ಕಾರಕ್ಕೆ ನೀಡಿದೆ. ಕೆಲವು ಯೋಜನೆಗಳಿಗೆ ಶೀಘ್ರದಲ್ಲೇ ಕೇಂದ್ರದಿಂದ ಅನುಮತಿ ದೊರೆಯುವ ಸಾಧ್ಯತೆ ಇದೆ ಎಂದರು.
ರಾಜ್ಯದ ಯೋಜನೆಗಳಿಗೆ ಒಪ್ಪಿಗೆ ನೀಡುವಂತೆ ಕೇಂದ್ರ ನಗರಾಭಿವೃದ್ದಿ ಸಚಿವ ಕಮಲ್ ನಾಥ್ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ. 61 ಯೋಜನೆಗಳಲ್ಲಿ ಹಲವು ಯೋಜನೆಗಳಿಗೆ ಕೇಂದ್ರ ಒಪ್ಪಿಗೆ ನೀಡಲಿದೆ ಎಂದು ತಿಳಿಸಿದರು.
ಯಾವ ಯೋಜನೆಗಳು : ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸೋರಿಕೆ ತಡೆಗಟ್ಟಲು ಯೋಜನೆ ರೂಪಿಸಲಾಗಿದೆ. ಬೆಂಗಳೂರು ಜಲಮಂಡಳಿಯ ಪ್ರಸ್ತಾಪದಂತೆ, ಟಿ.ಕೆ.ಹಳ್ಳಿ ಜಲಾಶಯದ ಅಭಿವೃದ್ಧಿ ಪಡಿಸುವ ಯೋಜನೆ ಸಿದ್ದಪಡಿಸಲಾಗಿದೆ ಎಂದರು.
ಜೆ-ನರ್ಮ್ ಯೋಜನೆ ಅನುಷ್ಠಾನಕ್ಕೆ ಜನಸಂಖ್ಯೆ ಮಿತಿ ತೆಗೆದುಹಾಕಿರುವ ಹಿನ್ನೆಲೆಯಲ್ಲಿ ರಾಜ್ಯದ ಇತರೆ ನಗರಗಳಿಗೂ ಎರಡನೇ ಹಂತದಲ್ಲಿ ಜೆ-ನರ್ಮ್ ಯೋಜನೆ ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದರು.
ಬೆಳಗಾವಿ, ಗುಲ್ಬರ್ಗ ಮತ್ತು ಹುಬ್ಬಳ್ಳಿ- ಧಾರವಾಡ ನಗರಪಾಲಿಕೆಯ ವ್ಯಾಪ್ತಿಯ ನಗರ ಪ್ರದೇಶಗಳಿಗೆ ದಿನದ 24 ಗಂಟೆ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ 1760 ಕೋಟಿ ರೂ. ಯೋಜನೆಯನ್ನು ತಯಾರಿ ಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯ ನಗರ ಸಾರಿಗೆ ನಿಧಿಯಿಂದ ಉತ್ತರ ಕರ್ನಾಟಕದ ಬಳ್ಳಾರಿ, ಬಿಜಾಪುರ, ಯಾದಗಿರಿ, ಹೊಸಪೇಟೆ, ಬೀದರ್ ನಲ್ಲಿ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಲು 12 ಕೋಟಿ ರೂ. ನೆರವು ನೀಡಲಾಗುವುದು ಎಂದು ಹೇಳಿದರು.












Click it and Unblock the Notifications