ದಿಲ್ಲಿ ರೇಪ್: ಬಾಲ ಅತ್ಯಾಚಾರಿಗೆ ಮೂರೇ ವರ್ಷ ಜೈಲು
ನವದೆಹಲಿ, ಆಗಸ್ಟ್ 31: ದೆಹಲಿಯಲ್ಲಿ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಆರೋಪಿಗಳಲ್ಲಿ ಒಬ್ಬನಾಗಿರುವ ಬಾಲ ಅತ್ಯಾಚಾರಿಗೆ ಬಾಲಾಪರಾಧಿ ನ್ಯಾಯಮಂಡಳಿಯು ಶನಿವಾರ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಬಾಲರೋಪಿಯ ತೀರ್ಪು ಈ ಹಿಂದೆಯೇ ಪ್ರಕಟವಾಗಬೇಕಿತ್ತಾದರೂ, ಬಾಲಾರೋಪಿ ವ್ಯಾಖ್ಯಾನದ ಕುರಿತು ಸುಬ್ರಮಣ್ಯಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿ ಇತ್ಯರ್ಥವಾಗುವವರೆಗೂ ಈತನ ಕುರಿತು ತೀರ್ಪು ನೀಡಲು ಸುಪ್ರೀಂಕೋರ್ಟ್ ತಡೆ ನೀಡಿತ್ತು.

ಇತ್ತೀಚೆಗೆ (ಆಗಸ್ಟ್ 22ರಂದು) ಸ್ವಾಮಿಯ ಅರ್ಜಿಯನ್ನು ಪ್ರತ್ಯೇಕವಾಗಿ ಪರಿಶೀಲಿಸಲು ಒಪ್ಪಿಕೊಂಡಿದ್ದ ಸುಪ್ರೀಂಕೋರ್ಟ್, ಬಾಲಾರೋಪಿ ಕುರಿತು ತೀರ್ಪು ನೀಡಲು ತನ್ನ ಅನುಮೋದನೆಯನ್ನು ನೀಡಿತ್ತು.
ಮೂರೇ ವರ್ಷ ಶಿಕ್ಷೆ! ಪ್ರಕರಣದಲ್ಲಿ ಅತ್ಯಂತ ಘೋರ ರೀತಿಯಲ್ಲಿ ವರ್ತಿಸಿದ್ದ ಎಂಬ ಆರೋಪ ಹೊತ್ತಿರುವ ಬಾಲಾರೋಪಿ ವಿರುದ್ಧ ಎಲ್ಲಾ ಆರೋಪಗಳು ಸಾಬೀತಾದರೂ, ಆತನಿಗೆ ಗರಿಷ್ಠ 3 ವರ್ಷ ಮಾತ್ರ ಶಿಕ್ಷೆಯಾಗಿದೆ. ಈಗಾಗಲೇ 8 ತಿಂಗಳು ಜೈಲು ಶಿಕ್ಷೆ ಅನುಭವಿಸಿರುವ ಈ ಬಾಲಾಪರಾಧಿಗೆ, ಇನ್ನು 2 ವರ್ಷ 4 ತಿಂಗಳು ಶಿಕ್ಷೆ ಮಾತ್ರ ಬಾಕಿ ಇದೆ.
ತೀರ್ಪಿನ ವಿರುದ್ಧ ಮೇಲ್ಮನವಿ: ತೀರ್ಪಿನ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬಾಧಿತ ಯುವತಿಯ ತಾಯಿ ಮತ್ತು ಕುಟುಂಬಸ್ಥರು ಸೋ ಕಾಲ್ಡ್ ಬಾಲ ಅತ್ಯಾಚಾರಿಗೆ ಇನ್ನೂ ಹೆಚ್ಚಿನ ಶಿಕ್ಷೆ ವಿಧಿಸುವಂತೆ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.
23 ವರ್ಷದ ವೈದ್ಯ ವಿದ್ಯಾರ್ಥಿಯನ್ನು ಚಲಿಸುತ್ತಿದ್ದ ಬಸ್ಸಿನಲ್ಲಿ ಡಿಸೆಂಬರ್ 16ರಂದು 6 ಮಂದಿ ದುರುಳರು ಸಾಮೂಹಿಕ ಅತ್ಯಾಚಾರವೆಸಗಿದ್ದರು. ಘಟನೆಯ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಬಾಧಿತೆ ನಿರ್ಭಯಾ ಸಿಂಗಾಪುರದಲ್ಲಿ ಮೃತಪಟ್ಟಿದ್ದರು. 6 ಮಂದಿ ಆರೋಪಿಗಳ ಪೈಕಿ ರಾಮ್ ಸಿಂಗ್ ಎಂಬುವವನು ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊ0ಡಿದ್ದ. ಉಳಿದ ನಾಲ್ವರ ವಿರುದ್ಧ ತ್ವರಿತ ವಿಚಾರಣೆ ನಡೆದಿದ್ದು, ಇನ್ನೂ ಶಿಕ್ಷೆ ವಿಧಿಸುವ ಹಂತಕ್ಕೆ ಬಂದಿಲ್ಲ.












Click it and Unblock the Notifications