ಭಾರತ 'ಮಿಲಿಟರಿ' ಉಪಗ್ರಹ ಯಶಸ್ವಿ ಉಡಾವಣೆ
ಬೆಂಗಳೂರು, ಆ.30: ಸಾಗರ ತೀರ ಪ್ರದೇಶಗಳ ಭದ್ರತೆಗೆ ಹೆಚ್ಚಿನ ಸಾಮರ್ಥ್ಯ ನೀಡುವ ನಿಟ್ಟಿನಲ್ಲಿ ಭಾರತದ ಸ್ವಂತವಾಗಿ ನಿರ್ಮಿತ ಪ್ರಪ್ರಥಮ ಜಿಸ್ಯಾಟ್-7 ಉಪಗ್ರಹವನ್ನು ಶುಕ್ರವಾರ ಯಶಸ್ವಿಯಾಗಿ ಉಡಾವಣೆ ಮಾಡಿತು.
ಫ್ರೆಂಚ್ ಗಯಾನದ ಕೌರವ್ ಬಾಹ್ಯಾಕಾಶ ನೆಲೆಯಿಂದ ಶುಕ್ರವಾರ ಬೆಳಗ್ಗೆ ಯಶಸ್ವಿಯಾಗಿ ಉಡಾಯಿಸಲಾಯಿತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿವೆ. ಬಹುತೇಕ ಸೆಪ್ಟೆಂಬರ್ ಕೊನೆ ವಾರದ ವೇಳೆಗೆ ತನ್ನ ಕಾರ್ಯಾಚರಣೆ ಆರಂಭಿಸಲಿರುವ ಜಿ ಸ್ಯಾಟ್- 7 ನಿಂದ ಭಾರತೀಯ ನೌಕಾಪಡೆ ಸಂಪರ್ಕ ಸಾಧಿಸುವ ಮೂಲಕ ಹೆಚ್ಚಿನ ಶಕ್ತಿ ಪಡೆಯಲಿದೆ.
ಜಿಸ್ಯಾಟ್-7ಕ್ಕೆ ತಗುಲಲಿರುವ ವೆಚ್ಚ 185 ಕೋಟಿ ರೂ. ಇಂದು ಬೆಳಗಿನ ಜಾವ 2 ಗಂಟೆಗೆ ಸರಿಯಾಗಿ ಉಡಾಯಿಸಲ್ಪಟ್ಟ ಜಿಸ್ಯಾಟ್-7 ಮೊದಲ ಹಂತದಲ್ಲಿ ಭೂಮಿಯಿಂದ 249 ಕಿ.ಮೀ.ವರೆಗಿನ ದೂರ ತಲುಪಿ ನಂತರ, ಭೂಮಧ್ಯರೇಖೆಯಿಂದ ಬರೋಬ್ಬರಿ 36 ಸಾವಿರ ಕಿಲೋಮೀಟರುಗಳ ಅಂತರವನ್ನು 34 ನಿಮಿಷಗಳಲ್ಲಿ ಕ್ರಮಿಸಿ ಸುರಕ್ಷಿತ ಮತ್ತು ಯಶಸ್ವಿಯಾಗಿ ತನ್ನ ಕಕ್ಷೆಯನ್ನು ಸೇರಿಕೊಂಡಿತು ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಈ ಉಪಗ್ರಹ ಸೆ.14ರ ನಂತರ ಪೂರ್ವ ರೇಖಾಂಶದಿಂದ 74 ಡಿಗ್ರಿ ಕಕ್ಷೆಯಲ್ಲಿ ಕಾರ್ಯಾಚರಣೆ ಆರಂಭಿಸಿ ಮಾಹಿತಿಗಳನ್ನು ರವಾನೆ ಮಾಡುವ ಯೋಜನೆಯನ್ನು ಇದರಲ್ಲಿ ರೂಪಿಸಲಾಗಿದ್ದು , ಭಾರತೀಯ ನೌಕಾಪಡೆಗಳು ವಿಶ್ವದ ಅಗತ್ಯ ಮಾಹಿತಿಗಳನ್ನು ಪಡೆಯಲಿವೆ ಎಂದು ಹೇಳಲಾಗಿದೆ. ರಕ್ಷಣಾ ದೃಷ್ಟಿಯಿಂದ ಇದೊಂದು ಅತ್ಯಂತ ಮಹತ್ವದ ಹಾಗೂ ಬಹುಪಯೋಗಿ ಸಾಧನೆಯಾಗಲಿದೆ ಎಂದು ಇಸ್ರೋ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಾಸನದಿಂದ ಹೇಳಿಕೆ: ಕರ್ನಾಟಕದ ಹಾಸನದಲ್ಲಿರುವ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ(MCF) ಕೇಂದ್ರಕ್ಕೆ 2.5 ಟನ್ ತೂಕದ ಉಪಗ್ರಹ ತನ್ನ ಕಕ್ಷೆಗೆ ತಲುಪಿದ ನಂತರ ಸಿಗ್ನಲ್ ನೀಡಿದೆ. ಒಟ್ಟಾರೆ ಈ ಯೋಜನೆಯ ವೆಚ್ಚ 470 ಕೋಟಿ ರು ತಗುಲಲಿದೆ.
ಈ ಉಪಗ್ರಹದಿಂದ ಭಾರತೀಯ ನೌಕಾಸೇನೆಗೆ ಹೆಚ್ಚಿನ ಸಂವಹನ ಶಕ್ತಿ ಸಿಗಲಿದೆ. ಇದುವರೆವಿಗೂ Inmarsat ಮೇಲೆ ಭಾರತ ಅವಲಂಬಿತವಾಗಿತ್ತು. ಈ ಉಪ್ರಗ್ರಹದಲ್ಲಿ Ku ಬ್ಯಾಂಡ್, ಎಸ್ ಬ್ಯಾಂಡ್, ಸಿ ಬ್ಯಾಂಡ್ ಹಾಗೂ UHF (ಅಲ್ಟ್ರಾ ಹೈ ಫ್ರೀಕ್ವೆನ್ಸಿ) ಬ್ಯಾಂಡ್ ಇದ್ದು ಭಾರತೀಯ ಜಲಸೇನೆಯ ಯುದ್ಧ ನೌಕೆಗಳಿಗೆ ನೆರವಾಗಲಿದೆ. ಗ್ರಹಣದ ಸಂದರ್ಭದಲ್ಲಿ ಉಪಗ್ರಹಕ್ಕೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿದ್ದು 108 Ampere ಗಂಟೆ ಲಿಥಿಯಮ್ ಐಯಾನ್ ಬ್ಯಾಟರಿ ಉಪಗ್ರಹದ ಕಾರ್ಯನಿರ್ವಹಣೆ ನಿಗಾವಹಿಸಲಿದೆ ಎಂದು ಇಸ್ರೋ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications