ಮೋಸ್ಟ್ ವಾಂಟೆಡ್ ಟೆರರಿಸ್ಟ್ ಯಾಸಿನ್ ಭಟ್ಕಳ್ ಯಾರು?
ಬೆಂಗಳೂರು, ಆ. 29 : ರಾಷ್ಟ್ರೀಯ ತನಿಖಾ ದಳದಿಂದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಎಂಬ ಹಣೆಪಟ್ಟಿ ಕಟ್ಟಿಸಿಕೊಂಡಿದ್ದ, ಭಾರತದಲ್ಲಿ ನಡೆದ ಹಲವಾರು ವಿಧ್ವಂಸಕ ಕೃತ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ಇಂಡಿಯನ್ ಮುಜಾಹಿದ್ದಿನ್ ಭಯೋತ್ಪಾದನೆ ಸಂಘಟನೆಯ ಸಂಸ್ಥಾಪಕ, ಮುಹಮ್ಮದ್ ಅಹ್ಮದ್ ಜರಾರ್ ಸಿದ್ದಿಬಾಪಾ ಅಲಿಯಾಸ್ ಯಾಸಿನ್ ಭಟ್ಕಳ್ ಬಂಧಿತನಾಗಿರುವುದು ಗುಪ್ತಚರ ದಳದ ದೊಡ್ಡ ಸಾಧನೆ.
ಕೇವಲ 30 ವರ್ಷ ವಯಸ್ಸಿನ, ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ಯಾಸಿನ್ ಭಟ್ಕಳ್‌ನನ್ನು ಕಳೆದ ತಿಂಗಳು ಬಂಧಿತನಾಗಿರುವ ಉಗ್ರ ತುಂಡಾ ನೀಡಿರುವ ಸುಳಿವಿನ ಮೇರೆಗೆ ಭಾರತೀಯ ಗುಪ್ತಚರ ದಳ ಮತ್ತು ರಿಸರ್ಚ್ ಮತ್ತು ಅನಾಲಿಸಿಸ್ ವಿಂಗ್ (ರಾ) ಜಂಟಿ ಕಾರ್ಯಾಚರಣೆಯಲ್ಲಿ ಇಂಡೋ-ನೇಪಾಳ ಗಡಿಯಲ್ಲಿ ಬಂಧಿಸಲಾಗಿದೆ.
ಈತನ ಇತಿಹಾಸ ಗಮನಿಸಿದರೆ, ಭಾರತದಲ್ಲಿ ನಡೆಸಿರುವ ಹಲವಾರು ಬಾಂಬ್ ಸ್ಫೋಟಗಳ ಹಿಂದೆ ಈತನ ಕೈವಾಡವಿರುವುದು ದೃಢಪಡುತ್ತದೆ. ಈತನ ವಿಚಾರಣೆಯಿಂದ ಇನ್ನೂ ಹಲವಾರು ಇಂಡಿಯನ್ ಮುಜಾಹಿದ್ದಿನ್ ಸಂಘಟನೆಯ ಉಗ್ರರನ್ನು ಮಟ್ಟಹಾಕಲು ಸಹಕಾರಿಯಾಗಬಹುದು. ಕೆಲವೇ ವರ್ಷಗಳಲ್ಲಿ ಇಷ್ಟೊಂದು 'ಸಾಧನೆ' ಮಾಡಿರುವ ಈ 'ಸಾಧಕ' ಮಾಡಿರುವ ಕೃತ್ಯಗಳತ್ತ ಒಂದು ಕಣ್ಣು ಹಾಯಿಸೋಣ.

ಭಟ್ಕಳದಲ್ಲಿ ಯಾಸಿನ್ ಜನನ
ಸುನ್ನಿ ಇಸ್ಲಾಂ ಧರ್ಮಕ್ಕೆ ಸೇರಿದ ಯಾಸಿನ್ ಭಟ್ಕಳ್ ಹುಟ್ಟಿದ್ದು ಜನವರಿ 15, 1983ರಂದು, ಉತ್ತರ ಕನ್ನಡದ ಭಟ್ಕಳದಲ್ಲಿ. ಪ್ರಾಥಮಿಕ ವಿದ್ಯಾಭ್ಯಾಸ ಭಟ್ಕಳದ ಅಂಜುಮನ್ ಹಮಿ-ಇ-ಮುಸ್ಲಿಮೀನ್ ಶಾಲೆಯಲ್ಲಿ. ಮುಂದೆ ಪಯಣ ಬೆಳೆಸಿದ್ದು ಪುಣೆಗೆ. ಅಲ್ಲಿ ಯಾವುದೇ ವಿದ್ಯಾಭ್ಯಾಸ ನಡೆಸಿದ ಮಾಹಿತಿ ಇಲ್ಲ. ಆದರೆ, ಆತ ಪುಣೆಯಲ್ಲಿ ಹೆಚ್ಚು ಕಾಲ ಕಳೆದದ್ದು ಚಡ್ಡಿದೋಸ್ತ್ ಅಗಿದ್ದ ಯುನಾನಿ ವೈದ್ಯ ಇಕ್ಬಾಲ್ ಇಸ್ಮಾಯಿಲ್ ಷಾಭಂಡಾರಿ ಜೊತೆ.

ಪುಣೆಯಲ್ಲಿ ಚಡ್ಡಿದೋಸ್ತ್ ಸಂಗ
ನವಾಯತ್ ಮುಸ್ಲಿಂ ಆಗಿರುವ ಇಕ್ಬಾಲ್ ಷಾಭಂಡಾರಿಯ ತಂದೆ ರಿಯಾಜ್ ಭಂಡಾರಿ ಭಟ್ಕಳದಲ್ಲಿ ದೊಡ್ಡ ವ್ಯಾಪಾರಿ. ಆತ ತನ್ನ ವ್ಯಾಪಾರವನ್ನು ಮುಂಬೈಗೂ ವಿಸ್ತರಿಸಿಕೊಂಡಿದ್ದ. 1993ರಲ್ಲಿ ಮತ್ತು 1996ರಲ್ಲಿ ಭಟ್ಕಳದಲ್ಲಿ ನಡೆದ ಕೋಮುದಂಗೆಯ ನಂತರ ಷಾಭಂಡಾರಿ ಕುಟುಂಬ ಪುಣೆಗೆ ಹೋಗಿ ಅಲ್ಲಿ ವಾಸಿಸಲು ಆರಂಭಿಸಿತು. ಅದೇ ಇಕ್ಬಾಲ್ ಷಾಭಂಡಾರಿ ಯಾಸಿನ್‌ನ ಸೋದರ ಸಂಬಂಧಿಯೂ ಹೌದು.

ಭಯೋತ್ಪಾದಕ ಕೃತ್ಯದ ಬೀಜ ಮೊಳೆತಿದ್ದು
ಇಕ್ಬಾಲ್ ಷಾಭಂಡಾರಿ ಪುಣೆಯಲ್ಲಿ ಯುವ ಮತ್ತು ವಿದ್ಯಾವಂತ ಮುಸ್ಲಿಂ ಯುವಕರನ್ನು ಒಗ್ಗೂಡಿಸಿಕೊಂಡು ಅವರನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟಲು ಆರಂಭಿಸಿದ. ಇಕ್ಬಾಲ್ ಜೊತೆಗೂಡಿಯೇ ಯಾಸಿನ್ ಭಟ್ಕಳ್ ಇಂಡಿಯನ್ ಮುಜಾಹಿದ್ದಿನ್ ಸಂಘಟನೆಯ ನೇತೃತ್ವ ವಹಿಸಿಕೊಂಡಿದ್ದು. ಭಯೋತ್ಪಾದಕ ಕೃತ್ಯದ ಬೀಜ ಯಾಸಿನ್‌ನಲ್ಲಿ ಮೊಳಕೆಯೊಡೆದದ್ದು ಅಲ್ಲಿಯೇ. ಷಾಭಂಡಾರಿ ಬ್ರದರ್ಸ್ ಎಂದೇ ಕುಖ್ಯಾತಿ ಗಳಿಸಿರುವ ಇಕ್ಬಾಲ್ ಮತ್ತು ರಿಯಾಜ್ ಕರಾಚಿಯಲ್ಲಿ ತಲೆಮರೆಸಿಕೊಂಡಿದ್ದಾರೆ.

ಯಾಸಿನ್ ಬಾಂಬ್ ಸ್ಪೆಷಲಿಸ್ಟ್
ಬಾಂಬ್ ತಯಾರಿಕೆಯಲ್ಲಿ ಪರಿಣತಿ ಗಳಿಸಿದ್ದ ಯಾಸಿನ್ ಮಂಗಳೂರು ಬಳಿಯ ವಿಠಲಮಕ್ಕಿ ಮತ್ತು ಹಕ್ಕಳಮನೆ ಎಂಬ ಸುರಕ್ಷಿತ ತಾಣದಿಂದ ಬಾಂಬ್ ಗಳನ್ನು ಪೂರೈಸಲು ಪ್ರಾರಂಭಿಸಿದ. ಮುಂದೆ ಈತ ನಡೆಸಿದ ವಿಧ್ವಂಸಕ ಕೃತ್ಯಗಳು ಒಂದೆರಡಲ್ಲ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಾಂಬ್ ಸ್ಫೋಟ, ದೆಹಲಿ ಕೋರ್ಟ್ ಎದುರಿಗೆ ನಡೆದ ಸರಣಿ ಬಾಂಬ್ ಸ್ಫೋಟ, ಪುಣೆ ಜರ್ಮನ್ ಬೇಕರಿ ಬಾಂಬ್ ಸ್ಫೋಟದಲ್ಲಿ ಯಾಸಿನ್ ಕೈವಾಡವಿತ್ತು.

ಚಿನ್ನಸ್ವಾಮಿ ಕ್ರೀಡಾಂಗಣ ಬಾಂಬ್ ಸ್ಫೋಟ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಮುಂದೆ 2010ರ ಏಪ್ರಿಲ್ 17ರಂದು ನಡೆದ ಬಾಂಬ್ ಸ್ಫೋಟದಲ್ಲಿ ಐವರು ಭದ್ರತಾ ಸಿಬ್ಬಂದಿ ಸೇರಿದಂತೆ ಹದಿನೈದಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಮೊದಲ ಬಾರಿ ಯಾಸಿನ್ ಭಟ್ಕಳ್ ವಿಧ್ವಂಸಕ ಕೃತ್ಯಗಳ ಇತಿಹಾಸದಲ್ಲಿ ತನ್ನ ಹೆಸರನ್ನು ಮೊದಲ ಬಾರಿ ದಾಖಲಿಸಿಕೊಂಡಿದ್ದ.

ದೆಹಲಿ ಮತ್ತು ಪುಣೆ ಸ್ಫೋಟದಲ್ಲಿ ಕೈವಾಡ
ನಂತರ 2011ರ ಸೆಪ್ಟೆಂಬರ್ 7ರಂದು ದೆಹಲಿ ಹೈಕೋರ್ಟ್ ಎದುರಿಗೆ ಯಾಸಿನ್ ಭಟ್ಕಳ್ ನಡೆಸಿದ ಸರಣಿ ಬಾಂಬ್ ಸ್ಫೋಟದಲ್ಲಿ 12 ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. 2012ರ ಆಗಸ್ಟ್ 1ರಂದು ಪುಣೆಯ ಜರ್ಮನ್ ಬೇಕರಿ ಎದುರಿಗೆ ನಡೆಸಿದ ಬಾಂಬ್ ಸ್ಫೋಟದಲ್ಲಿ ಐವರು ವಿದೇಶಿಯರು ಸೇರಿದಂತೆ 17 ಜನರು ಅಸುನೀಗಿದ್ದರು. ಅಲ್ಲಿ ಸ್ಫೋಟ ನಡೆದ 1 ಗಂಟೆಯ ಹಿಂದೆ ಯಾಸಿನ್ ಅಲ್ಲಿಗೆ ಬಂದಿದ್ದ ವಿಡಿಯೋ ಗುಪ್ತಚರ ದಳಕ್ಕೆ ಲಭ್ಯವಾಗಿದೆ.

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿ
ಹೈದರಾಬಾದ್ ದಿಲ್ ಖುಷ್ ನಗರದಲ್ಲಿ 2013ರ ಫೆಬ್ರವರಿ 21ರಂದು ನಡೆದ ಸರಣಿ ಬಾಂಬ್ ಸ್ಫೋಟದಲ್ಲಿಯೂ ಯಾಸಿನ್ ಭಟ್ಕಳ್ ಕೈವಾಡವಿದೆ ಎಂದು ತಿಳಿದುಬಂದಿದೆ. ಬಿಹಾರದ ಬೋಧಗಯಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿಯೂ ಯಾಸಿನ್ ಕೈವಾಡವಿದೆ. 2011ರಲ್ಲಿ ಚೆನ್ನೈನಲ್ಲಿ ಯಾಸಿನ್ ಇದ್ದಾನೆಂಬ ಸುಳಿವಿನ ಮೇರೆಗೆ ದಾಳಿ ಮಾಡಲಾಗಿತ್ತು. ಆದರೆ, ಆತ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ.












Click it and Unblock the Notifications