ಧರ್ಮಸಂಕಟದಲ್ಲಿ ಗೌಡರು: ಬಾಲಕೃಷ್ಣ ಸಹ ಗುಡ್ ಬೈ?
ಮಂಡ್ಯ, ಆಗಸ್ಟ್ 28: ಇಂದು ಬೆಳಗ್ಗೆ 'ಒನ್ಇಂಡಿಯಾಕನ್ನಡ' ಬರೆದಂತೆ ಇಂದಿನ ಜೆಡಿಎಸ್ ಸಭೆಗೆ ನಿರೀಕ್ಷೆಯಂತೆ ಸಾಲು ಸಾಲು ಶಾಸಕರು ಗೈರು ಹಾಜರಾಗಿದ್ದಾರೆ. ಗೈರು ಹಾಜರಾದ ನಾಯಕರ ರಾಜಕೀಯ ನಡೆ ನಿಗೂಢವಾಗಿದೆ. ಇದರಿಂದ ಗೌಡರು ನೂತನ ನಾಯಕನ ಆಯ್ಕೆ ಕಸರತ್ತನ್ನು ಮುಂದಿನ ಸೋಮವಾರಕ್ಕೆ ಮುಂದೂಡಿದ್ದಾರೆ.
ಬೆಳಗಿನ ಸುದ್ದಿ: ಅನಿರೀಕ್ಷಿತವೆನಿಸುವಂತೆ ಮೊನ್ನೆ ನಡೆದ ಉಪಚುನಾವಣೆಯಲ್ಲಿ ಹೀನಾಯ ಸೋಲುಂಡ ಬಳಿಕ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್ ಡಿ ಕುಮಾರಸ್ವಾಮಿ ಅವರು ರಾಜೀನಾಮೆ ಸಲ್ಲಿಸಿದ್ದು, ನೂತನ ಆಯ್ಕೆ ಸಂಬಂಧ ಚರ್ಚಿಸಲು ಇಂದು ಬುಧವಾರ ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅಧ್ಯಕ್ಷತೆಯಲ್ಲಿ ಪಕ್ಷದ ಪ್ರಮುಖ ನಾಯಕರ ಕೋರ್ ಕಮಿಟಿ ಸಭೆ ಆಯೋಜಿಸಲಾಗಿದೆ.
ಇದು ದೇವೇಗೌಡರ ಕುಟುಂಬಾಧಿಪತ್ಯದ ಜಾತ್ಯತೀತ ಜನತಾದಳಕ್ಕೆ ಸಂದಿಗ್ಧ ಕಾಲವೇ ಆಗಿದೆ. ದೊಡ್ಡಗೌಡರು ನಿಜಕ್ಕೂ ಧರ್ಮಸಂಕಟದಲ್ಲಿ ಸಿಲುಕಿದ್ದಾರೆ- ಇತ್ತ ಕುಟುಂಬ ಅತ್ತ ಪಕ್ಷ ಎನ್ನುವಂತಾಗಿದೆ ಅವರಿಗೆ. ಪಕ್ಷದ ಸಾರಥ್ಯವನ್ನು ಕುಟುಂಬದ ಹೊರಗಿನವರಿಗೆ 'ಹಸ್ತಾಂತರಿಸುವ' ಅನಿವಾರ್ಯತೆ ಎದುರಾಗಿದೆ.
ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಮತ್ತು ಯುದ್ಧೋತ್ಸಾಹವನ್ನೇ ಕಳೆದುಕೊಂಡಿರುವ ಕಾರ್ಯಕರ್ತರಲ್ಲಿ ಮಹತ್ವದ ಮುಂದಿನ ಲೋಕಸಭಾ ಚುನಾವಣೆಗಾಗಿ ಉತ್ಸಾಹ ತುಂಬುವ ಜರೂರತ್ತು ಎದುರಾಗಿದೆ. ಕೃಷ್ಣ ಜನ್ಮಾಷ್ಠಮಿಯಂದು ಶ್ರೀಕೃಷ್ಣನಂತೆ ಭಗವದ್ಗೀತೆ ಬೋಧಿಸುತ್ತಾರಾ ಗೌಡರು? ಅಥವಾ ಮರಳಿ ಕುಟುಂಬ ರಾಜಕಾರಣಕ್ಕೆ ಹೊರಳುತ್ತಾರಾ? ಎಂಬುದು ಇಂದು ಇತ್ಯರ್ಥವಾಗಲಿದೆ.

ಇಂದಿನ ಸಭೆಗೆ ಎಲ್ಲಿಲ್ಲದ ಮಹತ್ವ
ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳಿಗೆ ಜೆಡಿಎಸ್ಸಿನ ಆಂತರಿಕ ಬೆಳವಣಿಗೆಗಳ ಬಗ್ಗೆ ವಿಶೇಷ ಕುತೂಹಲ ಇಲ್ಲವಾದರೂ ಜೆಡಿಎಸ್ಸಿನ ಆಧಾರಸ್ತಂಭಗಳೆನಿಸಿರುವ ಪಕ್ಷದ ಹಿರಿಯ ನಾಯಕರೇ ಇಂದಿನ ಸಭೆಯನ್ನು ವಿಶೇಷವಾಗಿ ಗಮನಿಸುತ್ತಿದ್ದಾರೆ. ಸಭೆಯಲ್ಲಿ ಕೈಗೊಳ್ಳುವ ತೀರ್ಮಾನಗಳು ಜೆಡಿಎಸ್ಸಿನ ಭವಿಷ್ಯವನ್ನು ನಿರ್ಧರಿಸುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಇಂದಿನ ಸಭೆಗೆ ಎಲ್ಲಿಲ್ಲದ ಮಹತ್ವ ಬಂದಿದೆ.

ಇನ್ನೂ ಒಂದಷ್ಟು ಪುಟ್ಟಣ್ಣಗಳು 'ಕೈ'ಚಾಚಿದ್ದಾರೆ
ಹಾಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರ ಆತ್ಮೀಯ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ಜೆಡಿಎಸ್ ಹೊಸಿಲು ದಾಟಲು ಎದ್ದುನಿಂತಿರುವುದು ಈಗಾಗಲೇ ಗೋಚರಿಸುತ್ತಿದೆ. ಇವರಿಗೆ ಸಾಥ್ ನೀಡಲು ಇನ್ನೂ ಒಂದಷ್ಟು ಪುಟ್ಟಣ್ಣಗಳು ಈಗಾಗಲೇ ಮನಸ್ಸು ಮಾಡಿದ್ದಾರೆ ಎಂಬ ಮಾತುಗಳು ಜೆಡಿಎಸ್ ಪಡಸಾಲೆಯಿಂದ ಕೇಳಿಬಂದಿದೆ.

ಮಾಗಡಿ ದೊರೆಯೂ ಹಸ್ತಾಂತರ?
ಮಾಗಡಿಯ ಬಾಲಕೃಷ್ಣ ಸತತವಾಗಿ ಗೆದ್ದುಬರುತ್ತಿದ್ದರೂ ಕುಮಾರಸ್ವಾಮಿಗೆ ಅಖಂಡ ನಿಷ್ಠೆ ತೋರುತ್ತಿದ್ದರೂ ಇದುವರೆಗೂ ಪಕ್ಷದಿಂದ ಯಾವುದೇ ಪ್ರಯೋಜನ ಪಡೆಯದೆ ಅತೃಪ್ತ ಆತ್ಮದಂತೆ ಮಾಗಡಿ ರಾಮನಗರ ಬೆಂಗಳೂರು ಮಧ್ಯೆ ರೌಂಡ್ ಹೊಡೆಯುತ್ತಿದ್ದಾರೆ.
ಎಚ್ ಸಿ ಬಾಲಕೃಷ್ಣ ಎಷ್ಟರಮಟ್ಟಿಗೆ ಬೇಸರಗೊಂಡಿದ್ದಾರೆಂದರೆ ಈ ತಕ್ಷಣವೇ ಕುಮಾರಸ್ವಾಮಿ ಸಹವಾಸ ಬಿಟ್ಟು ಡಿಕೆ ಶಿವಕುಮಾರ್ ಅವರ 'ಕೈ'ಹಿಡಿಯಲು ಸಿದ್ಧತೆ ನಡೆಸಿದ್ದಾರೆ ಎಂದು ಪಕ್ಕದ ಕನಕಪುರ ಮೂಲಗಳು ತಿಳಿಸಿವೆ. ತಮ್ಮ ರಾಜಕೀಯ ಶಕ್ತಿಯನ್ನು 'ಹಸ್ತಾಂತರಿಸಿ' ಕಾಂಗ್ರೆಸ್ಸಿನಲ್ಲಿ ಭವಿಷ್ಯ ಕಂಡುಕೊಳ್ಳುವುದು ಬಾಲಕೃಷ್ಣರ ಇರಾದೆಯಾಗಿದೆ.

'ಸ್ವಾಮಿ'ನಿಷ್ಠೆ: ಇಲ್ಲಿರಲಾ, ಅಲ್ಲಿಗೆ ಹೋಗಲಾ?
ಇದೇ ಹಾದಿಯಲ್ಲಿ ಮುಂದೆ ಕಾಣಸಿಗುವುದು ಕುಮಾರಸ್ವಾಮಿಯ ಮತ್ತೊಬ್ಬ ಆತ್ಮೀಯ ಚಲುವರಾಯಸ್ವಾಮಿ. ಕೇವಲ ಶಾಸಕರಾಗಿದ್ದುಕೊಂಡು ಇನ್ನೈದು ವರ್ಷ ಕಬ್ಬು ಅರಿಯುವುದು ಆಗದ ಮಾತು. ಅಧಿಕಾರ ಬೇಕೇ ಬೇಕು ಎಂಬ ತೀರ್ಮಾನಕ್ಕೆ ಬಂದಿರುವ ಚಲುವರಾಯಸ್ವಾಮಿಗಳು ಗೌಡರ ಕುಟುಂಬಕ್ಕೆ ಅಖಂಡ ನಿಷ್ಠೆ ತೋರಿದರೂ ತಮಗೆ ಮೂರು ಪೈಸೆ ಲಾಭವಾಗಿಲ್ಲ. ಹಾಗಾಗಿ ಸಧ್ಯಕ್ಕಲ್ಲದಿದ್ದರೂ ಲೋಕಸಭೆ ಚುನಾವಣೆ ವೇಳೆಗೆ ಕಾಂಗ್ರೆಸ್ಸನ್ನು ಅಪ್ಪಿಕೊಂಡರಾಯಿತು ಎಂಬ ಮನಸ್ಥಿತಿಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

'ರೆಬೆಲ್ ಸ್ಟಾರ್' ಜಮೀರ್ ಅಹಮದ್
ಸಕಲಚರಾಚರಗಳಿಗೂ ಗೋಚರಿಸುವಂತೆ ಇತ್ತೀಚೆಗೆ ಜೆಡಿಎಸ್ಸಿನಲ್ಲಿ 'ರೆಬೆಲ್ ಸ್ಟಾರ್' ಎಂದು ಮುಂಚುತ್ತಿರುವರೆಂದರೆ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್. ಕುಮಾರಸ್ವಾಮಿ ಬಲಕ್ಕೆ ಚಲುವರಾಯಸ್ವಾಮಿ ಇದ್ದಂತೆ ನಾನು ಅವರ ಎಡಕ್ಕೆ ನಿಲ್ಲುತ್ತೇನೆ ಎಂಬಂತೆ ಜಮೀರ್ ಅಹಮದ್ ಸದಾ 'ಸ್ವಾಮಿ'ನಿಷ್ಠೆ ತೋರಿದವರು. ಇದುವೇ ಅವರಿಗೆ ಇಂದು ಮುಳುವಾಗಿರುವುದೂ ಸಹ. ಅತಿನಿಷ್ಠೆ ತೋರಿ ಸ್ವಾಮಿಗಳ ಕೈಯಲ್ಲಿ ಮಾಡಬಾರದ್ದನ್ನೆಲ್ಲ ಮಾಡಿಸಿದರು ಎಂಬ ಗುರುತರ ಆರೋಪ ಜಮೀರ್ ಭಯ್ಯಾ ಮೇಲಿದೆ.

ಜಮೀರ್ ಅಹಮದ್ where abouts where?
ಹಾಗಾಗಿ ಗೌಡರ ಕುಟುಂಬದ ಅವಕೃಪೆಗೆ ಒಳಗಾದರು ಎನ್ನಲಾಗಿದೆ. ಆದರೆ ಜಮೀರ್ ಅಹಮದ್ ಅವರಿಗೆ ತಮ್ಮ ರಾಜಕೀಯ ಭವಿಷ್ಯ ಮುಖ್ಯ. ಕುಮಾರಣ್ಣ ಅಲ್ಲದಿದ್ದರೆ ಶಿವಕುಮಾರಣ್ಣ ಇದ್ದೇ ಇದ್ದಾರೆ ಎಂದು ಅತ್ತ ಕಡೆ ಕೈಚಾಚಿದ್ದಾರಂತೆ ಜಮೀರ್ ಭಾಯ್! ಈ ಮಧ್ಯೆ ದೊಡ್ಡ ಗೌಡರು ಜಮೀರ್ ಜತೆ ರಾಜೀ ಕಬೂಲಿಗೆ ಮುಂದಾಗಿದ್ದಾರಾದರೂ ಸದ್ಯಕ್ಕೆ ಜಮೀರ್ ಅಹಮದರ where abouts ಈ ಕ್ಷಣದವರೆಗೂ ತಿಳಿದುಬಂದಿಲ್ಲ.

ಹಾಗಾದರೆ ಉಳಿದವರು ಯಾರು?
ಉಳಿದಂತೆ, ಜೆಡಿಎಸ್ ಪಕ್ಷದಲ್ಲಿ ಅಖಂಡ ನಿಷ್ಠೆ ಹೊಂದಿರುವ ಹಿರಿಯರಾದ ಎಂಸಿ ನಾಣಯ್ಯ, ಪಿಜಿಆರ್ ಸಿಂಧ್ಯಾ, ಬಸವರಾಜ ಹೊರಟ್ಟಿ, ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಸುಮಾರು 20 ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಂದಿಗ್ಧ ಕಾಲದಲ್ಲಿ ಪಕ್ಷಕ್ಕೆ ಆಸರೆಯಾಗಲು ತೀರ್ಮಾನಿಸಿದ್ದಾರೆ.
ಪ್ರಸ್ತುತ ಕಾಂಗ್ರೆಸ್, ಬಿಜೆಪಿ, ಕೆಜೆಪಿ ರಾಜ್ಯಾಧ್ಯಕ್ಷರಾಗಿ ದಲಿತ, ಬ್ರಾಹ್ಮಣ, ಲಿಂಗಾಯತ ಸಮುದಾಯದವರು ಇರುವುದರಿಂದ ತಮ್ಮ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗದವರಿಗೆ ನೀಡುವುದು ಸೂಕ್ತ ಎಂಬ ಬಗ್ಗೆ ಜೆಡಿಎಸ್ ಚಿಂತನೆ ನಡೆಸಿದೆ ಎನ್ನಲಾಗಿದೆ.

ಎ ಕೃಷ್ಣಪ್ಪ JDS ರಾಜ್ಯಾಧ್ಯಕ್ಷ ?
ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸಮರ್ಥವಾಗಿ ಹೋರಾಟ ನಡೆಸಲು ಆ ಪಕ್ಷವನ್ನು ತೊರೆದು ಬಂದಿರುವ ಕೃಷ್ಣಪ್ಪ ಅವರೇ ಸೂಕ್ತ ವ್ಯಕ್ತಿ ಎಂಬ ತರ್ಕ ಕೇಳಿ ಬಂದಿದೆ. ಹಾಗಾದಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಎ ಕೃಷ್ಣಪ್ಪ ಅವರನ್ನು ಆಯ್ಕೆ ಮಾಡುವ ಬಗ್ಗೆ ಹೆಚ್ಚಿನ ಒಲವು ವ್ಯಕ್ತವಾಗಿದೆ.

ಇಕ್ಬಾಲ್ ಅನ್ಸಾರಿಗೆ ಒಲಿಯುವುದೇ JDS ಪಟ್ಟ?
ಇದರ ಜತೆಗೆಜತೆಗೆ, ಹಿಂದುಳಿದ ವರ್ಗದ ಕೋಟಾದಡಿ ಬಂಡೆಪ್ಪ ಕಾಶಂಪುರ್ ಅವರ ಹೆಸರೂ ಪ್ರಸ್ತಾಪದಲ್ಲಿದೆ. ಮುಸ್ಲಿಂ ಸಮುದಾಯಕ್ಕೆ ಕೊಡುವುದಾದರೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಹೆಸರುಗಳು ಪರಿಶೀಲನೆಯಲ್ಲಿವೆ ಎಂದು ಮೂಲಗಳು ತಿಳಿಸಿವೆ.

ಕುಮಾರಸ್ವಾಮಿಗೆ ಹಾಸನದಲ್ಲೇ ಕಡಿವಾಣ
ದಲಿತ ಸಮುದಾಯಕ್ಕೆ ಸೇರಿದ ಎಚ್ ಕೆ ಕುಮಾರಸ್ವಾಮಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಚಿಂತನೆ ನಡೆದಿದೆಯಾದರತೂ ಗೌಡರ ಕುಟಂಬ ಹಾಸನ ಜಿಲ್ಲೆ ಮೇಲಿನ ತಮ್ಮ ಪ್ರಭಾವ/ಅಧಿಪತ್ಯವನ್ನು ಬಿಟ್ಟುಕೊಡಲು ಸುತರಾಂ ಸಿದ್ಧರಿಲ್ಲ. ಕುಮಾರಸ್ವಾಮಿ ಜಿಲ್ಲೆಯಲ್ಲಿ ಹೆಚ್ಚಿಗೆ ಬೆಳೆದುಬಿಟ್ಟರೆ ಎಂಬ ತೊಡಕು ಕಾಡುತ್ತಿದೆ. ಹಾಗಾಗಿ ದಲಿತರಿಗೆ ರಾಜ್ಯಾಧ್ಯಕ್ಷ ಸ್ಥಾನ ಕಲ್ಪಿಸಬೇಕೆಂಬ ಹಪಹಪಿ ಹಾಸನದಲ್ಲೇ ಬೋರಲುಬಿದ್ದಿದೆ.

ನನ್ನ ಕೂದಲೂ ಕೊಂಕುವುದಿಲ್ಲ
ಈ ಮಧ್ಯೆ, ಪ್ರತಿಪಕ್ಷ ನಾಯಕನ ಸ್ಥಾನವನ್ನೂ ತ್ಯಜಿಸಲು ಎಚ್ ಡಿ ಕುಮಾರಸ್ವಾಮಿ ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಆದರೆ ಪ್ರತಿಪಕ್ಷ ನಾಯಕರಾಗಿ ಮುಂದುವರಿಯಲು ಎಲ್ಲ ಶಾಸಕರು ಕುಮಾರಸ್ವಾಮಿ ಮೇಲೆ ಒತ್ತಡ ಹಾಕಲಿದ್ದು, ಕುಮಾರಸ್ವಾಮಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಲಿದ್ದಾರೆ ಎಂಬ ವಿಶ್ವಾಸದ ಮಾತುಗಳು ಕೇಳಿಬರುತ್ತಿವೆ.












Click it and Unblock the Notifications