JDS ಶಾಸಕ ರಾಜೀನಾಮೆ: ಎಚ್ಡಿಕೆ ಸ್ಥಾನಮಾನಕ್ಕೆ ಕುತ್ತು
ಮಂಡ್ಯ, ಆಗಸ್ಟ್ 28: ಜೆಡಿಎಸ್ಸಿನಲ್ಲಿ ಬುಸುಗುಟ್ಟುತ್ತಿದ್ದ ಭಿನ್ನಮತ ಸ್ಫೋಟಗೊಂಡಿದೆ. ದೇವೇಗೌಡರು ಯಾವುದು ನಡೆಯಬಾರದೆಂದು ಬಯಸಿದ್ದರೋ ಅದೇ ನಡೆದಿದೆ. ಇಂದು ಗೋಲ್ಡ್ ಫಿಂಚ್ ಹೋಟೆಲಿನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಬಹುತೇಕ ನಾಯಕರು ಗೈರು ಹಾಜರಾದಾಗ ಎಲ್ಲೋ ಏನೋ ಎಡವಟ್ಟಾಗುತ್ತಿದೆ ಎಂದು ಆತಂಕಗೊಂಡ ಗೌಡರು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೊಸ ನಾಯಕನನ್ನು ಸೋಮವಾರ ಆಯ್ಕೆ ಮಾಡುವುದಾಗಿ ಘೋಷಿಸುವ ಮೂಲಕ ಗಂಡಾಂತರದಿಂದ ಪಾರಾಗುವ ಆಲೋಚನೆ ನಡೆಸಿದ್ದರು.
ಆದರೆ ಅತ್ತ ದೂರದ ಬೀದರಿನಿಂದ ಗೌಡರಿಗೆ ಆಘಾತ ನೀಡುವಂತಹ ಸುದ್ದಿ ತಲುಪಿದೆ. ಜೆಡಿಎಸ್ ಪಕ್ಷದ ಬೀದರಿನ ಬಸವಕಲ್ಯಾಣ ಕ್ಷೇತ್ರದ ಶಾಸಕ ಮಲ್ಲಿಕಾರ್ಜುನ ಖುಬಾ ಅವರು ದೇವೇಗೌಡರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

JDS ಶಾಸಕ ಮಲ್ಲಿಕಾರ್ಜುನ ಖುಬಾ ರಾಜೀನಾಮೆ
ಹೌದು ಬಸವಕಲ್ಯಾಣದ JDS ಶಾಸಕ 37 ವರ್ಷದ ಮಲ್ಲಿಕಾರ್ಜುನ ಖುಬಾ ಅವರು ಪಕ್ಷದ ಸದಸ್ಯತ್ವ/ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ಅವರು ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ವರಿಷ್ಠ ದೇವೇಗೌಡರಿಗೆ ಸಲ್ಲಿಸಿದ್ದಾರೆ. ಖೂಬಾ ಎರಡನೆಯ ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.

Chief Wip ಸ್ಥಾನಕ್ಕೆ ಬೇಡಿಕೆ
ರಾಜಕೀಯದಲ್ಲಿ ಮೇಲೆ ಬರಬೇಕೆಂದು ಮಹತ್ವಾಕಾಂಕ್ಷಿ ಹೊಂದಿದ್ದ ಖುಬಾ ಅವರು ಪಕ್ಷದ ಮುಖ್ಯ ಸಚೇತಕ ಸ್ಥಾನಕ್ಕೆ (Chief Wip) ಬೇಡಿಕೆಯಿಟ್ಟಿದ್ದೆ. ಅದನ್ನು ಕುಮಾರಸ್ವಾಮಿ ಅವರ ಗಮನಕ್ಕೂ ತಂದಿದೆ. ಆದರೆ ಈಗ ಕುಮಾರಸ್ವಾಮಿಯೇ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ತಾವು ಅನಿವಾರ್ಯವಾಗಿ ರಾಜೀನಾಮೆ ಸಲ್ಲಿಸುತ್ತಿರುವಾಗಿ' ತಿಳಿಸಿದ್ದಾರೆ.

JDS ಶಾಸಕ ಮಲ್ಲಿಕಾರ್ಜುನ ಖುಬಾ ಕಾಂಗ್ರೆಸ್ಸಿಗೆ?
JDSನಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ ಎಂದು ರಾಜೀನಾಮೆ ಪತ್ರದಲ್ಲಿ ತಮ್ಮ ಅಸಮಾಧಾನ ಹೊರಹಾಕಿರುವ ಶಾಸಕ ಮಲ್ಲಿಕಾರ್ಜುನ ಖುಬಾ ಅವರು ಅಂತರಿಕ ಬೆಳವಣಿಗೆಗಳಿಂದ ಬೇಸತ್ತು ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ಸ್ಪೀಕರ್ ಅವರಿಗೂ ತಮ್ಮ ರಾಜೀನಾಮೆ ಪತ್ರ 'ಹಸ್ತಾಂತರಿಸಲಿದ್ದು' ಮುಂದೆ ಅವರು ಕಾಂಗ್ರೆಸ್ ಪಕ್ಷ ಸೇರುವ ಸಾಧ್ಯತೆಯಿದೆ ಎನ್ನಲಾಗಿದೆ.

ಮುಂದೇನು?: ಕುಮಾರಸ್ವಾಮಿ ಸ್ಥಾನಕ್ಕೆ ಕಂಟಕ
ಅದೊಮ್ಮೆ JDS ಶಾಸಕ ಮಲ್ಲಿಕಾರ್ಜುನ ಖುಬಾ ರಾಜೀನಾಮೆ ಪತ್ರ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ತಲುಪುತ್ತಿದ್ದಂತೆ ಅವರು ಅದನ್ನು ಅಂಗೀಕರಿಸಿದರೆ ವಿಧಾನಸಭೆಯಲ್ಲಿ JDS ಶಾಸಕರ ಬಲ 39ಕ್ಕೆ ಕುಸಿಯುತ್ತದೆ. ಅದರರ್ಥ ಪ್ರಸ್ತುತ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸ್ಥಾನದಲ್ಲಿರುವ ಎಚ್ ಡಿ ಕುಮಾರಸ್ವಾಮಿ ಅವರ ಸ್ಥಾನಕ್ಕೆ ಕಂಟಕವೊದಗಿದಂತೆಯೇ.

ರಾಮನಗರ ಜಿಲ್ಲಾ ಜೆಡಿಎಸ್ ಪಾಳೆಯದಲ್ಲಿ ಸಂಚಲನ
ಇತ್ತ ಮಂಡ್ಯ, ರಾಮನಗರದ ಕಡೆಯಿಂದ ಆಘಾತಕಾರಿ ಸುದ್ದಿ ಬರಬಹುದೆಂದು ನಿರೀಕ್ಷಿಸಿದ್ದ ಗೌಡರಿಗೆ ದೂರದ ಬೀದರಿನಿಂದ ಇಂತಹ ಸುದ್ದಿ ಬಂದಿದೆ.
ಈ ಮಧ್ಯೆ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸುದ್ದಿ ಹರಡುತ್ತಿದ್ದಂತೆ ರಾಜ್ಯ ಹಾಗೂ ಜಿಲ್ಲಾ ಜೆಡಿಎಸ್ ಪಾಳೆಯದಲ್ಲಿ ಸಂಚಲನ ಉಂಟುಮಾಡಿದೆ.

ಚಲುವರಾಯಸ್ವಾಮಿ-ಬಾಲಕೃಷ್ಣ-ಜಮೀರ್ ಮಧ್ಯೆ Hotline
ಅಲ್ಲದೆ, ತಕ್ಷಣವೇ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದು ಬೇಡ. ಜಮೀರ್ ಅಹಮದ್ ಬೆಂಗಳೂರಿಗೆ ಬಂದ ನಂತರ ನಾವೆಲ್ಲ ಕುಳಿತು ಮಾತನಾಡಿ ಸಮಂಜಸ ನಿರ್ಧಾರಕ್ಕೆ ಬರೋಣವೆಂದು ಮಾಗಡಿ ಶಾಸಕ ಎಚ್ ಸಿ ಬಾಲಕೃಷ್ಣ ಮತ್ತು ನಾಗಮಂಗಲ ಶಾಸಕ ಎನ್ ಚಲುವರಾಯಸ್ವಾಮಿ ಅವರು ಪುಟ್ಟಣ್ಣ ಜತೆ ಸುದೀರ್ಘವಾಗಿ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದು ವಿಶ್ವಸನೀಯ ಮೂಲಗಳು ದೃಢಪಡಿಸಿವೆ.
ಇದೇ ವೇಳೆ, ಬಾಲಕೃಷ್ಣ ಮತ್ತು ಚಲುವರಾಯಸ್ವಾಮಿ ಕೂಡ ರಾಜ್ಯದ ಹೊರಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರು ಬಂದ ನಂತರ ಪುಟ್ಟಣ್ಣ ಜತೆಗೆ ಮಹತ್ವದ ಮಾತುಕತೆ ನಡೆಸಿ ಸೂಕ್ತ ತೀರ್ಮಾನಕ್ಕೆ ಬರಲಿದ್ದಾರೆ ಎನ್ನುವ ಮಾತುಗಳು ಚಾಲ್ತಿಯಲ್ಲಿವೆ.












Click it and Unblock the Notifications