ವಿಎಚ್ ಪಿ ಮುಖಂಡ ಅಶೋಕ್ ಸಿಂಘಾಲ್ ಬಂಧನ
ಲಖ್ನೋ, ಆ.25: ವಿಶ್ವ ಹಿಂದೂ ಪರಿಷತ್ ನಡೆಸಲು ಉದ್ದೇಶಿಸಿರುವ 'ಚೌರಾಸಿ ಕೋಸ್ ಪರಿಕ್ರಮಾ ಯಾತ್ರೆ'ಗೆ ಅಖಿಲೇಶ್ ಯಾದವ್ ಸರ್ಕಾರ ಅಡ್ಡಿಯಾಗಿ ನಿಂತಿದೆ. ಆರೆಸ್ಸೆಸ್, ವಿಎಚ್ ಪಿ, ಬಿಜೆಪಿ ಶಾಸಕರು ಸೇರಿದಂತೆ ಹಿಂದೂ ಸಂಘಟನೆಗಳ ಮುಖಂಡರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮುಸ್ಲಿಮರ ಓಲೈಕೆಗಾಗಿ ಉ.ಪ್ರ. ಸರ್ಕಾರ ಯಾತ್ರೆಗೆ ನಿಷೇಧ ಹೇರಿದೆ ಎಂದು ಬಿಜೆಪಿ ನಾಯಕ ಕಲ್ಯಾಣ್ ಸಿಂಗ್ ಆರೋಪಿಸಿದ್ದಾರೆ.
ಭಾನುವಾರದಿಂದ ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಚೌರಾಸಿ (84) ಕೋಸಿ ಪರಿಕ್ರಮ ಯಾತ್ರೆ ನಡೆಸಿಯೇ ತೀರುವುದಾಗಿ ವಿಶ್ವಹಿಂದೂ ಪರಿಷತ್ ಪಣತೊಟ್ಟಿದೆ. ಯಾತ್ರೆಯನ್ನು ನಿಷೇಧಿಸಿರುವ ಉತ್ತರ ಪ್ರದೇಶ ಸರ್ಕಾರ ಇಡೀ ಅಯೋಧ್ಯೆಯನ್ನು ಪೊಲೀಸರ ಭದ್ರಕೋಟೆಯಾಗಿ ಮಾರ್ಪಡಿಸಿದೆ.
900ಕ್ಕೂ ಹೆಚ್ಚು ಮಂದಿ ಸೆರೆ: ವಿಹಿಂಪ ಆಯೋಜಿಸಿರುವ ಯಾತ್ರೆಯಿಂದ ಕೋಮುಗಲಭೆ ಉಂಟಾಗುವ ಸಾಧ್ಯತೆಯಿದೆ ಹಾಗೂ ಯಾತ್ರೆಗೆ ಅವಕಾಶ ನೀಡುವುದು ಸುಪ್ರೀಂ ಕೋರ್ಟ್ ನ ಆದೇಶ ಉಲ್ಲಂಘಿಸಿದಂತಾಗುತ್ತದೆ ಎಂದು ಅಖಿಲೇಶ್ ಸರ್ಕಾರ ಹೇಳಿದೆ.
ಸಮಯ 10.35 : ವಿಶ್ವ ಹಿಂದೂ ಪರಿಷತ್ ಮುಖಂದರಾದ ಅಶೋಕ್ ಸಿಂಘಾಲ್, ಪ್ರವೀಣ್ ತೊಗಾಡಿಯಾ ಅವರನ್ನು ಲಕ್ನೋ ವಿಮಾನ ನಿಲ್ದಾಣದಲ್ಲೇ ಬಂಧಿಸಲಾಗಿದೆ.
ಸಮಯ 9.45 : ಮಾಜಿ ಬಿಜೆಪಿ ಸಂಸದ ರಾಮ್ ವಿಲಾಸ್ ವೇದಾಂತಿ, ಹಾಲಿ ಶಾಸಕ ರಾಮ್ ಚಂದ್ರ ಯಾದವ್ ಅವರನ್ನು ಬೆಳಗ್ಗೆ 7 ಗಂಟೆಗೆ ಬಂಧಿಸಲಾಗಿದೆ.ಶನಿವಾರವೇ ಸಂತರು, ವಿಎಚ್‌ಪಿ ಕಾರ್ಯಕರ್ತರು ಸೇರಿದಂತೆ 350ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿತ್ತು. ಜತೆಗೆ, 300ರಷ್ಟು ಮಂದಿಯ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿತ್ತು.

ವಿಎಚ್ ಪಿ ನಾಯಕರು ತಮ್ಮ ಮನೆಗಳಿಂದ ಹೊರಬರದಂತೆ ನೋಡಿಕೊಳ್ಳಲಾಗಿದೆ. ಹೊರಗಿನವರಿಗೆ ಅಯೋಧ್ಯೆಯೊಳಗೆ ಪ್ರವೇಶ ನೀಡುತ್ತಿಲ್ಲ. ಯಾರೇ ಬಂದರೂ ಅವರ ಗುರುತು, ಪರಿಚಯ, ತಪಾಸಣೆಯ ಬಳಿಕವೇ ಒಳಬಿಡಲಾಗುತ್ತಿದೆ. ಜತೆಗೆ, ಕಾರ್ಯಕರ್ತರ ಚಲನವಲನಗಳ ಬಗ್ಗೆ ಗುಪ್ತಚರ ಮಾಹಿತಿ ಒದಗಿಸುವಂತೆ ನೆರೆಯ ರಾಜ್ಯಗಳಿಗೂ ಉತ್ತರ ಪ್ರದೇಶ ಸರ್ಕಾರ ಕೋರಿಕೊಂಡಿದೆ.
ಲೋಕಸಭೆಯಲ್ಲೂ ಟೀಕೆ: ಇದೇ ವೇಳೆ, ಭಾನುವಾರದ ಯಾತ್ರೆಯಲ್ಲಿ 40-50 ಸಾವಿರ ವಿಎಚ್‌ಪಿ ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಲೋಕಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಕಾಂಗ್ರೆಸ್, ಎಸ್ಪಿ ಹಾಗೂ ಆರ್‌ಜೆಡಿ ಸಂಸದರು ವಿಎಚ್‌ಪಿ ಯಾತ್ರೆಯ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications