ಯಡಿಯೂರಪ್ಪ ಸವಾಲಿಗೆ ಸಿದ್ದರಾಮಯ್ಯ ಉತ್ತರವೇನು?
ಬೆಂಗಳೂರು, ಆಗಸ್ಟ್ 22: ಅಕ್ರಮ ಗಣಿಗಾರಿಕೆ ವರದಿಯಿಂದಲೆ ಅಧಿಕಾರ ಕಳೆದುಕೊಂಡ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅದಾದನಂತರ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯನ್ನು ತಡೆದಿದ್ದು ತಾವೊಬ್ಬರೇ ಎಂದು ಎದೆಯುಬ್ಬಿಸಿಕೊಂಡು ಹೇಳುತ್ತಾ ಬಂದಿದ್ದಾರೆ.
ಈ ಮಧ್ಯೆ, ಅಕ್ರಮ ಗಣಿಗಾರಿಕೆ ಬಗ್ಗೆ ರೋಶಾವೇಶದಿಂದ ಮಾತನಾಡುತ್ತಾ ಬಳ್ಳಾರಿವರೆಗೂ ಸಾಗಿ ಅಧಿಕಾರಕ್ಕೆ ಹತ್ತಿರವಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಮೇಲೆ ಆ ವಿಷಯವನ್ನೇ ಮರೆತುಬಿಟ್ಟರು. ಮುಖ್ಯಮಂತ್ರಿಯಾಗುತ್ತಿದ್ದಂತೆ ನಮ್ಮದೇ ಸಿಬಿಐನಿಂದ ಸಮಗ್ರ ತನಿಖೆ ಮಾಡಿಸುವುದಾಗಿ ಹೇಳುತ್ತಿದ್ದ ಸಿದ್ದು ಸಾಹೇಬರು ಅಧಿಕಾರಕ್ಕೆ ಬಂದು ನೂರು ದಿನವಾದರೂ ಆ ಬಗ್ಗೆ ಇನ್ನೂ ಮೀನಮೇಶಗಳನ್ನು ಎಣಿಸುತ್ತಿದ್ದಾರೆ.

ಇದನ್ನೇ ಯಡಿಯೂರಪ್ಪ ಅವರು ಈಗ ಪ್ರಶ್ನಿಸಿರುವುದು- ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ನಿಮಗೆ ತಾಕತ್ತು ಇದ್ದರೆ ಇನ್ನಾದರೂ ಸಿಬಿಐ ತನಿಖೆಗೆ ವಹಿಸಿಕೊಡಿ ಎಂದು ಖಡಕ್ ಸವಾಲು ಹಾಕಿದ್ದಾರೆ. ಕರ್ನಾಟಕದ ಜನತೆಯೂ ಸಿಎಂ ಸಿದ್ದುಗೆ ಇದನ್ನೇ ಕೇಳುತ್ತಿದ್ದಾರೆ!
ಮೊನ್ನೆ ಕಡೂರು ಪಟ್ಟಣದಲ್ಲಿ ಕೆಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನೀಡಿದ ಅಭಿನಂದನೆ ಸ್ವೀಕರಿಸಿ ಕೆಜೆಪಿ ಮುಖಂಡ ಬೆಳ್ಳಿ ಪ್ರಕಾಶ್ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಮುಂದುವರಿದು ಮಾತನಾಡಿರುವ ಅವರು 'ನಾನು ಮುಖ್ಯಮಂತ್ರಿಯಾದಾಗ ಪ್ರಥಮ ಬಾರಿಗೆ ಅಕ್ರಮ ಗಣಿಗಾರಿಕೆ ತಡೆಗಟ್ಟಲು ಪ್ರಯತ್ನಿಸಿದ್ದು, ಬೇರೆ ದೇಶಗಳು ನಾವು ಕಳುಹಿಸುವ ಅದಿರಿನಿಂದ ವಸ್ತುಗಳನ್ನು ತಯಾರಿಸಿ, ತಮ್ಮ ದೇಶದ ನೈಸರ್ಗಿಕ ಸಂಪತ್ತನ್ನು ಕಾಪಾಡಿಕೊಳ್ಳುತ್ತಿದ್ದರು. ತಾವು ಇದನ್ನು ತಡೆಗಟ್ಟಲು ಮುಂದಾಗಿ ಗಣಿ ಅಕ್ರವನ್ನು ಸಿಬಿಐಗೆ ನೀಡುವ ಪ್ರಯತ್ನ ಮಾಡಿದ್ದಾಗಿ ತಿಳಿಸಿದ್ದಾರೆ.
ಆದರೆ, ಇಂದು ಅಕ್ರಮ ಗಣಿಗಾರಿಕೆ ಮಾಡುತ್ತಿರುವವರು ರಾಜರೋಷವಾಗಿ ಇದ್ದಾರೆ. ಅಂದು ಇದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸಿಬಿಐಗೆ ವಹಿಸುವುದಾಗಿ ಹೇಳಿದ್ದರು. ಈಗ ತಮ್ಮದೇ ಕಾಂಗ್ರೆಸ್ ನೇತೃತ್ವದ ಸರ್ಕಾರವಿದ್ದು, ಅವರಿಗೆ ತಾಕತ್ತಿದ್ದರೆ ಅಕ್ರಮ ಗಣಿಗಾರಿಕೆ ಪ್ರಕರಣ ಸಿಬಿಐಗೆ ವಹಿಸಲಿ ಎಂದು ಸವಾಲೊಡ್ಡಿದ್ದಾರೆ. Over to sleeping Siddu!












Click it and Unblock the Notifications