ಹೊಸೂರು: 4 ಕೋಟಿ ಚಿನ್ನಾಭರಣವಿದ್ದ ಕಾರನ್ನೇ ಕದ್ದರು!

ಗಮನಾರ್ಹವೆಂದರೆ ಭಾರಿ ಮೌಲ್ಯದ ಚಿನ್ನಾಭರಣವಿದ್ದ ಕಾರನ್ನು ಹೊಸೂರು ಪಟ್ಟಣದ ಹೊರವಲಯದಲ್ಲಿ ಚೆನ್ನೈ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಂಬಾಕ್ಕಂನಲ್ಲಿ ಊಟಕ್ಕೆಂದು ಹೋಗಿದ್ದಾಗ ಅಪಹರಿಸಲಾಗಿದೆ.
ಕಾಂಚಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಈ ಘಟನೆ ನಡೆದಿದೆ. ಟಾಟಾ ಕಂಪನಿಯ ತನಿಷ್ಕ್ ಜ್ಯೂವೆಲ್ಲರಿ ಕಾರ್ಖಾನೆಯಲ್ಲಿ ತಯಾರಾದ ಚಿನ್ನಾಭರಣ ಇದಾಗಿದೆ. ಜತೆಗೆ 1.5 ಕೋಟಿ ರೂ ನಗದು ಹಣವನ್ನೂ ದೋಚಲಾಗಿದೆ.
(ಹೊಸೂರು ಬಳಿ Meadow ಎಂಬ ಪುಟ್ಟ ಕಂಪನಿ ಚಿನ್ನಾಭರಣ ತಯಾರಿಕೆಯಲ್ಲಿ ಸುಪ್ರಸಿದ್ದಿಯಾಗಿದ್ದು, ಟಾಟಾ ಸೇರಿದಂತೆ ಬಹುತೇಕ ಕಂಪನಿಗಳು ಇಲ್ಲಿನ ಆಭರಣಗಳನ್ನೇ ತನ್ನ ಮಳಿಗೆಗಳಲ್ಲಿ ಮಾರಾಟ ಮಾಡುವುದು. ಸುಮಾರು 500 ಸ್ಥಳೀಯ ಅನಕ್ಷರಸ್ಥ ಯುವತಿಯರು ಈ ಕಾಯಕದಲ್ಲಿ ತೊಡಗಿದ್ದು, ಜೀವನೋಪಾಯ ಕಂಡುಕೊಂಡಿದ್ದಾರೆ)
ಆಂಧ್ರಪ್ರದೇಶದ ವೇಲೂರು, ತಮಿಳುನಾಡಿನ ಕಾಂಚಿಪುರಂ ಮತ್ತು ಚೆನ್ನೈನಲ್ಲಿರುವ ಕಂಪನಿಯ ಜ್ಯೂವೆಲ್ಲರಿ ಅಂಗಡಿಗಳಿಗೆ ಒಡವೆ ವಿತರಿಸಲು ಕಾರಿನಲ್ಲಿ ಕಳುಹಿಸಿಕೊಡಲಾಗಿತ್ತು. ಕಾರಿನಲ್ಲಿ ಚಾಲಕ ಮತ್ತು ಮೂರು ಮಂದಿ ಸೆಕ್ಯುರಿಟಿ ಗಾರ್ಡುಗಳು ಇದ್ದರು.
ಮೊದಲಿಗೆ ವೇಲೂರಿನ ಜ್ಯೂವೆಲ್ಲರಿ ಅಂಗಡಿಗೆ ಒಡವೆ ವಿತರಿಸಿ, ಒಂದೂವರೆ ಕೋಟಿ ರೂ. ಹಣ ಪಡೆದು ಮುಂದಿನ ಪ್ರಯಾಣ ಸಾಗಿದೆ. ಆದರೆ ಕಾಂಚಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೆದ್ದಾರಿಯಲ್ಲಿ ಊಟಕ್ಕೆಂದು ಹೋಟೆಲ್ ಬಳಿ ಕಾರು ನಿಲ್ಲಿಸಿದ ಚಾಲಕ ಮತ್ತು ಭದ್ರತಾ ಸಿಬ್ಬಂದಿ ಒಳಹೋಗಿದ್ದಾರೆ. ಊಟ ಮುಗಿಸಿ ಹೊರಬಂದು ನೋಡಿದಾಗ ಕಾರೇ ಮಾಯವಾಗಿತ್ತು.
ತಕ್ಷಣ ಕಾಂಚಿಪುರಂ ಪೊಲೀಸರಿಗೆ ಮಾಹಿತಿ ನೀಡಲಾಗಿ, ಹೆದ್ದಾರಿ ಮಾರ್ಗದಲ್ಲಿ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಲಾಗಿದೆ. ಆದರೆ ಕೆಲಹೊತ್ತಿನ ನಂತರ, ಹೊರಮಂಗಲಂ ಎಂಬ ಹಳ್ಳಿಯಲ್ಲಿ ಕಾರು ನಿಂತಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.
ಸ್ಥಳಕ್ಕೆ ಹೋಗಿ ಕಾರಿನಲ್ಲಿ ನೋಡಿದಾಗ ಚಿನ್ನಾಭರಣವೂ ಇಲ್ಲ, ದುಡ್ಡೂ ಇಲ್ಲ ಎಂಬಂತಾಗಿದೆ. ಪೊಲೀಸರು ಕಾರಿನಲ್ಲಿದ್ದ ನಾಲ್ವರನ್ನೂ ವಿಚಾರಣೆಗೊಳಪಡಿಸಿದ್ದಾರೆ. ಆದರೆ ಯಾವುದೇ ಸುಳಿವು ದೊರೆತಿಲ್ಲ.












Click it and Unblock the Notifications