ಕಾರ್ಪೆಂಟರ್ ಕುಟುಂಬ ಬೆಂಕಿಗಾಹುತಿ: ಆತ್ಮಹತ್ಯೆ ಶಂಕೆ
ಕಣ್ಣೂರು (ಕಾಸರಗೋಡು), ಆ.21: ಇಲ್ಲಿಂದ 40 ಕಿಮೀ ದೂರದ ಚಿರುಪುಳ ಗ್ರಾಮದಲ್ಲಿ ಮನೆಯೊಂದಕ್ಕೆ ಬೆಂಕಿ ತಗುಲಿ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡ ಘೋರ ದುರಂತ ಮಂಗಳವಾರ ಮಧ್ಯರಾತ್ರಿ ನಡೆದಿದೆ. ಆದರೆ ಇದು ಆತ್ಮಹತ್ಯೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಚಿರುಪುಳದ ಪೆರುಂದಟತ್ತ್ ಸಾಜಿ (42), ಅವರ ಪತ್ನಿ ಸಿಂಧು (31), ಮಕ್ಕಳಾದ ಅಧೀರಾ (10) ಮತ್ತು ಅತುಲ್ಯಾ (5) ಮೃತಪಟ್ಟವರು.

ಮೊನ್ನೆ ರಾತ್ರಿ 2 ಗಂಟೆಯಲ್ಲಿ ಈ ದುರಂತ ಸಂಭವಿಸಿದೆ. ಪ್ಲಾಸ್ಟಿಕ್ ಶೀಟ್ ಮತ್ತು ಹೆಂಚಿನಿಂದ ಕಟ್ಟಿದ್ದ ಮನೆಗೆ ಬೆಂಕಿ ತಗುಲಿ ಸ್ಫೋಟದ ಶಬ್ದ ಕೇಳಿ ಬಂದಿದೆ. ಆಗ ಸ್ಥಳೀಯರು ಧಾವಿಸಿ ಬಂದಾಗ ಮನೆ ಸಂಪೂರ್ಣವಾಗಿ ದಹಿಸುತ್ತಿರುವುದು ಕಂಡುಬಂದಿದೆ.
ವಿಷಯ ತಿಳಿದು ಕೂಡಲೇ ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದರು. ಆದರೆ ಮನೆಯಲ್ಲಿದ್ದ ನಾಲ್ಕು ಮಂದಿಯ ಜೀವ ಉಳಿಸಲು ಸಾಧ್ಯವಾಗಿಲ್ಲ. ನಾಲ್ಕು ಮೃತ ದೇಹಗಳು ಒಂದೇ ಕೋಣೆಯಲ್ಲಿ ಪತ್ತೆಯಾಗಿದ್ದು, ಗುರುತು ಹಿಡಿಯಲಾಗದಷ್ಟು ಸುಟ್ಟು ಕರಕಲಾಗಿದ್ದವು.
ಘಟನಾ ಸ್ಥಳದಲ್ಲಿ ಸೀಮೆಎಣ್ಣೆ ಮತ್ತು ಪೆಟ್ರೋಲ್ ಕ್ಯಾನ್ ಪತ್ತೆಯಾಗಿವೆ. ಪತ್ನಿ ಮತ್ತು ಮಕ್ಕಳಿಗೆ ವಿಷವುಣಿಸಿ ಸಾಯಿಸಿದ ಬಳಿಕ, ಮನೆಗೆ ಬೆಂಕಿ ಹಚ್ಚಿ ಮನೆಯ ಯಜಮಾನ ಸಾಜಿ ಈ ಕೃತ್ಯವೆಸಗಿರಬಹುದು ಎಂದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ನಿಟ್ಟಿನಲ್ಲಿ ತನಿಖೆ ನಡೆದಿದೆ. ಕಣ್ಣೂರು ಪೊಲೀಸ್ ವರಿಷ್ಠ ರಾಹುಲ್ ನಾಯರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಾಜಿ ಮೂಲತಃ ಆಲಕ್ಕೋಡ್ ನಿವಾಸಿ. ಆದರೆ ವೃತ್ತಿಯಿಂದ ಕಾರ್ಪೆಂಟರ್ ಆಗಿದ್ದು, ಕೆಲ ವರ್ಷಗಳಿಂದ ಚಿರುಪುಳದಲ್ಲಿ ಕುಟುಂಬಸಹಿತ ವಾಸಿಸುತ್ತಿದ್ದರು. ಇದೇ ಮನೆಯಲ್ಲಿರುತ್ತಿದ್ದ ಸಿಂಧು ಅವರ ತಾಯಿ ಇತ್ತೀಚೆಗಷ್ಟೇ ಸಹೋದರಿ ಮನೆಗೆ ತೆರಳಿದ್ದರು. ಮೃತಪಟ್ಟ ಅಧೀರಾ ಚಿರುಪುಳದ ಜಾನಕಿ ಮೆಮೋರಿಯಲ್ ಶಾಲೆಯಲ್ಲಿ 5ನೆ ತರಗತಿ ಮತ್ತು ಅತುಲ್ಯಾಪ್ರಾಪೋಯಿಲ್ ಶಾಂತಿ ನಿಕೇತನ್ ಶಾಲೆಯಲ್ಲಿ 1ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.












Click it and Unblock the Notifications