ಇಂದಿರಾನಗರ ಬಂಗ್ಲೆಯಲ್ಲಿ ಸತ್ತುಬಿದ್ದಿದ್ದ ಕಾನೂನು ಪದವೀಧರೆ
ಬೆಂಗಳೂರು, ಆಗಸ್ಟ್ 21: ಇಂದಿರಾನಗರದಲ್ಲಿ ಅದೊಂದು ವಿಶಾಲ ಬಂಗಲೆ. ಬರೋಬ್ಬರಿ ನಾಲ್ಕು ತಿಂಗಳಿಂದ ಆ ಬಂಗಲೆಯಲ್ಲಿ ಮಹಿಳೆಯೊಬ್ಬಳು ಸತ್ತುಬಿದ್ದಿದ್ದಳು. ಆದರೆ ಯಾರೊಬ್ಬರೂ ಆ ಮಹಿಳೆ ಬದುಕಿದ್ದಾಳಾ/ಸತ್ತಿದ್ದಾಳಾ ಎಂದು ವಿಚಾರಿಸಿಕೊಂಡಿಲ್ಲ.
4 ತಿಂಗಳ ಹಿಂದೆಯೇ ಮೃತಪಟ್ಟಿದ್ದ 53 ವರ್ಷದ ಮಹಿಳೆಯ ದೇಹ ಸಂಪೂರ್ಣವಾಗಿ ಜೀರ್ಣವಾಗಿದೆ. ಅಸ್ಥಿಪಂಜರವಷ್ಟೇ ಉಳಿದಿದೆ. ಇಷ್ಟಾದರೂ ಸಂಬಂಧಿಕರೂ ಆಕೆಯನ್ನು ವಿಚಾರಸಿಕೊಂಡಿಲ್ಲ. ಮಹಿಳೆ ಅವಿವಾಹಿತಳು ಎಂದು ತಿಳಿದುಬಂದಿದೆ.

ಶ್ರೀಮಂತರ ಪ್ರತಿಷ್ಠೆಯ ಬಡಾವಣೆಯಾದ ಇಂದಿರಾನಗರದಲ್ಲಿ 12ನೇ ಮುಖ್ಯರಸ್ತೆಯಲ್ಲಿರುವ ಬಾಲಾಜಿ ನಿಲಯ ಎಂಬ ಎರಡಂತಸ್ತಿನ ಮನೆಯಲ್ಲಿ ವಾಸವಾಗಿದ್ದ ಶೀಲಾ ರೆಡ್ಡಿ ಎಂಬ ಈ ಮಹಿಳೆ ಬಹುಶಃ ಹಸಿವಿನಿಂದ ಸತ್ತುಹೋಗಿರಬಹುದು ಎಂದು ಶಂಕಿಸಲಾಗಿದೆ.
ಪಕ್ಕದ ಮನೆಯವರು ಹೇಳುವಂತೆ 'ತನ್ನನ್ನು ನೋಡಿಕೊಂಡು ಹೋಗಲು ತನ್ನ ಬಂಧುಗಳು ಯಾರೂ ಬರುವುದಿಲ್ಲ' ಎಂದು ನಾಲ್ಕಾರು ತಿಂಗಳ ಹಿಂದೆ ಬೇಸರದಿಂದ ಶೀಲಾ ಗೊಣಗುತ್ತಿದ್ದರು. ಕಾನೂನು ಪದವೀಧರೆಯಾಗಿದ್ದ ಶೀಲಾ ಏಕಾಂಗಿಯಾಗಿ ಜೀವಿಸುತ್ತಿದ್ದರು.
ಆರು ತಿಂಗಳ ಹಿಂದೆ ಅಕ್ಕನ ಮನೆಯ ಕಡೆ ತಲೆ ಹಾಕಿದ ಶಂಕರ ರೆಡ್ಡಿ, ಮೊನ್ನೆ ಸೋಮವಾರ ಅಕ್ಕನ ಮನೆಗೆ ಬಂದು ಕಿಟಕಿಯಿಂದ ಇಣುಕಿ ನೋಡಿದಾಗ ಅಕ್ಕನ ದೇಹ ಕಂಡುಬಂದಿದೆ. ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಗಿ, ಅವರು ಬಂದು ತಡಕಾಡಿದಾಗ ಮನೆಯಲ್ಲಿ ತಿನ್ನುವುದಕ್ಕೆ ಒಂಚೂರು ಆಹಾರವೂ ಕಣ್ಣಿಗೆ ಬಿದ್ದಿಲ್ಲ. ಇದರಿಂದ ಬಹುಶಃ ಹಸಿವು ತಡೆಯಲಾಗದೆ ಮಹಿಳೆ ಸತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕೆಲವು ತಿಂಗಳ ಹಿಂದೆಯೇ ನೆರೆಮನೆಯವರು ಏನೋ ವಾಸನೆ ಬರುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರಂತೆ. ಆದರೆ ಪೊಲೀಸರು ನಾಯಿನೋ/ ಬೆಕ್ಕೋ ಸತ್ತುಹೋಗಿರಬಹುದು ಬಿಡಿ ಎಂದು ಸುಮ್ಮನಾಗಿದ್ದರಂತೆ. ಮುಂದೆ ವಾಸನೆ ಬರುವುದೂ ನಿಂತುಹೋಗಿತ್ತು ಎಂದು ನೆರೆ ಮನೆಯವರು ಹೇಳುತ್ತಾರೆ.
ಸದರಿ ರೆಡ್ಡಿ ಕುಟುಂಬದವರು ಶ್ರೀಮಂತ ಕುಟುಂಬದವರಾಗಿದ್ದು, ತಿಪ್ಪಸಂದ್ರದಲ್ಲಿ ವಿಶಾಲ ಜಾಗಗಳನ್ನು ಹೊಂದಿದ್ದಾರೆ. ಚೌಡರೆಡ್ಡಿ ಮತ್ತು ಅಮ್ಮಯ್ಯಮ್ಮ ದಂಪತಿಯ ಪುತ್ರಿ ಎಂದು ತಿಳಿದುಬಂದಿದೆ. 'ಏನೇ ಆಗಲಿ ಶೀಲಾಗೆ ಇಂತಹ ಸಾವು ಬರಬಾರದಿತ್ತು' ಎಂದು ಪಕ್ಕದ ಮನೆಯವರು ವಿಷಾದ ವ್ಯಕ್ತಪಡಿಸಿದ್ದಾರೆ.












Click it and Unblock the Notifications