ಶಿವು ಮತ್ತು ಜಡೇಸ್ವಾಮಿಗೆ ಆ.22ರಂದು ಗಲ್ಲು

ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಕೊಳ್ಳೇಗಾಲ ತಾಲೂಕಿನ ಭದ್ರಯ್ಯನಹಳ್ಳಿಯ ಶಿವು ಮತ್ತು ಜಡೇಸ್ವಾಮಿ ಅವರಿಗೆ ಗಲ್ಲು ಶಿಕ್ಷೆ ಆ.22ರ ಗುರುವಾರ ಮುಂಜಾನೆ 6 ಗಂಟೆಗೆ ಜಾರಿಯಾಗಲಿದೆ ಎಂದು ಹಿಂಡಲಗಾ ಜೈಲಿನ ಅಧಿಕಾರಿಗಳು ಇಬ್ಬರ ಸಂಬಂಧಿಕರಿಗೆ ಪತ್ರ ಬರೆದಿದ್ದಾರೆ.
ಶಿವು ಮತ್ತು ಜಡೇಸ್ವಾಮಿ ಮರಣದಂಡನೆಗೆ ತಡೆ ನೀಡುವಂತೆ ಕೋರಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಆ.21ರ ಬುಧವಾರ ನಡೆಯಲಿದೆ. ನ್ಯಾಯಾಲಯ ತಡೆಯಾಜ್ಞೆ ನೀಡದಿದ್ದರೆ, ಗುರುವಾರ ಇಬ್ಬರು ಗಲ್ಲಿಗೇರುವುದು ಖಚಿತವಾಗಿದೆ. (ಕರ್ನಾಟಕ ಇಬ್ಬರಿಗೆ ಗಲ್ಲು ಖಾಯಂಗೊಳಿಸಿದ ರಾಷ್ಟ್ರಪತಿ)
ಪತ್ರದಲ್ಲೇನಿದೆ : ಹಿಂಡಲಗಾ ಜೈಲಿನ ಡಿಜಿಪಿ ಅವರು ಶಿವು ಮತ್ತು ಜಡೇಸ್ವಾಮಿ ಅವರ ಸಂಬಂಧಿಕರಿಗೆ ಪತ್ರ ಬರೆದಿದ್ದು, ರಾಷ್ಟ್ರಪತಿಗಳಿಂದ ಕ್ಷಮಾದಾನ ಅರ್ಜಿ ತಿರಸ್ಕೃತವಾಗಿರುವ ಇಬ್ಬರನ್ನು ಆ.22ರ ಮುಂಜಾನೆ 6 ಗಂಟೆಗೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನೇಣಿಗೆ ಏರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಡಿಜಿಪಿ ಅವರ ಪತ್ರವನ್ನು ಇಬ್ಬರು ಅಪರಾಧಿಗಳ ಸಂಬಂಧಿಕರಿಗೆ ರಾಮಾಪುರ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಅಧಿಕೃತ ತಲುಪಿಸಿ, ನೇಣಿನ ಕುರಿತು ಮಾಹಿತಿ ನೀಡಿದ್ದಾರೆ. ಶಿವು ಮತ್ತು ಜಡೇಸ್ವಾಮಿ ಅವರ ಸಂಬಂಧಿಕರು ಈಗಾಗಲೇ ಬೆಳಗಾವಿಗೆ ತಲುಪಿದ್ದಾರೆ ಎಂದು ತಿಳಿದು ಬಂದಿದೆ.
ಸುಪ್ರೀಂಗೆ ರಿಟ್ : ಗಲ್ಲು ಶಿಕ್ಷೆ ತಡೆ ನೀಡುವಂತೆ ಕೋರಿ ಸುಪ್ರೀಂಕೋರ್ಟ್ ಗೆ ಶಿವು ಮತ್ತು ಜಡೇಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ ಮತ್ತು ನ್ಯಾ.ರಂಜನ್ ಗೊಗೋಯ್ ಅವರಿದ್ದ ದ್ವಿಸದಸ್ಯ ಪೀಠ ವಿಚಾರಣೆಯನ್ನು ಆ.21ರ ಬುಧವಾರಕ್ಕೆ ಮುಂದೂಡಿತು.
ನ್ಯಾಯಾಲಯದ ಮುಂದೆ ತುರ್ತು ನಿವೇದನೆ ಮಾಡಿಕೊಂಡ ಅಪರಾಧಿಗಳ ಪರ ವಕೀಲರು, ಆಗಸ್ಟ್ 22ರಂದು ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧತೆಗಳು ನಡೆಯುತ್ತಿದ್ದು, ಈ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದರು.
ಬುಧವಾರ ಸುಪ್ರೀಂಕೋರ್ಟ್ ನೀಡುವ ತೀರ್ಪಿನ ಮೇಲೆ ಶಿವು ಮತ್ತು ಜಡೇಸ್ವಾಮಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆಯೇ ಎಂದು ಅಂತಿಮವಾಗಿ ತಿಳಿದು ಬರಲಿದೆ. ತಡೆಯಾಜ್ಞೆ ನೀಡಿದೆ, ಅರ್ಜಿಯ ವಿಚಾರಣೆಯನ್ನು ಬುಧವಾರವೂ ಮುಂದೂಡಿದರೆ ಗುರುವಾರ ಇಬ್ಬರಿಗೂ ಗಲ್ಲುಶಿಕ್ಷೆ ಜಾರಿಯಾಗಲಿದೆ.












Click it and Unblock the Notifications