ಮೋದಿ ಡೈಲಾಗ್ ಹೊಡೆದು ಕಟ್ ಕಟ್ ಎಂದ ಅಂಬರೀಷ್
ಮಂಡ್ಯ, ಆಗಸ್ಟ್ 20: ನಾಲಿಗೆ ಮೇಲೆ ಹುಟ್ಟು ಮಚ್ಚೆಯಿಟ್ಟುಕೊಂಡು 'ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಮೋದಿ ಇದ್ದಂತೆ' ಎಂದು ಮಂಡ್ಯದ ಗಂಡು ಹೊಡೆದ ಡೈಲಾಗಿಗೆ ವ್ಯಾಪಕ ಪ್ರತಿಕ್ರಿಯೆಗಳು ಬಂದಿವೆ.
ಕೆಆರ್ ನಗರದಲ್ಲಿ ನಿನ್ನೆ 'ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ನರೇಂದ್ರ ಮೋದಿ ಇದ್ದಂತೆ. ಅವರು ರಾಷ್ಟ್ರ ನಾಯಕರಾಗುವ ದಿನಗಳು ದೂರವಿಲ್ಲ' ಎಂದು ವಸತಿ ಸಚಿವ ಅಂಬರೀಷ್ ಭವಿಷ್ಯ ನುಡಿದಿದ್ದರು. ಈ ಹೇಳಿಕೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಮಧ್ಯೆ, ಅತ್ತ ಬಿಹಾರದಲ್ಲಿ ಮೋದಿಯವರನ್ನು ಹೊಗಳಿದ್ದಕ್ಕೆ ಕಾಂಗ್ರೆಸ್ಸಿನಿಂದ ಸಾಧು ಯಾದವ್ ಉಚ್ಚಾಟನೆಗೊಂಡಿರುವ ತಾಜಾ ಉದಾಹರಣೆ ಮತ್ತು ಮೋದಿ ಬಗ್ಗೆ ತಲೆಗೊಂದರಂತೆ ಯಾರೂ ಮಾತನಾಡಬೇಡಿ ಎಂದು ಕಾಂಗ್ರೆಸ್ ಯುವನಾಯಕ ರಾಹುಲ್ ಗಾಂಧಿಯೇ ಫರ್ಮಾನು ಹೊರಡಿಸಿದ್ದರು.
ಹೀಗಿರುವಾಗ ಕಾಂಗ್ರೆಸ್ ಸಚಿವ ಅಂಬರೀಷ್ ಅವರು ಸಿದ್ದರಾಮಯ್ಯ ಅವರಲ್ಲಿ ಸಾಕ್ಷಾತ್ ಮೋದಿ ಅವರನ್ನು ಕಂಡು ಗುಣಗಾನ ಮಾಡಿರುವುದಕ್ಕೆ ಆ ಪಕ್ಷ ಏನು ಕ್ರಮ ಕೈಗೊಳ್ಳುತ್ತದೋ, ಏನೋ ಎಂದು ಮಂಡ್ಯದ ಜನತೆ ಆತಂಕದಿಂದ ಎದುರು ನೋಡುತ್ತಿರುವಾಗಲೇ ಸ್ವತಃ ಅಂಬರೀಷ್ ಅವರು ತಮ್ಮ ಹೋಲಿಕೆಯ ಮಾತಿಗೆ ಏನಂದಿದ್ದಾರೆ ಎಂಬುದು ಮುಖ್ಯವಾಗಿದೆ.

ಡೈಲಾಗ್ ಹೊಡೆದು ಕಟ್ ಕಟ್ ಎಂದ ಅಂಬಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದ ಮೋದಿ ಎಂದು ತಾವು ಹೇಳಿಕೆ ನೀಡಿಲ್ಲ ಎಂದು ವಸತಿ ಸಚಿವ ಅಂಬರೀಷ್ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ನರೇಂದ್ರ ಮೋದಿ ಗುಜರಾತ್‌ನ ಅಭಿವೃದ್ಧಿಯ ಹರಿಕಾರ ಎಂದು ಬಿಜೆಪಿಯವರು ಹೇಳಿಕೊಳ್ಳುತ್ತಾರೆ. ಸಿದ್ದರಾಮಯ್ಯ ಅವರೂ ಕರ್ನಾಟಕದ ಅಭಿವೃದ್ಧಿಯ ಹರಿಕಾರ ಆಗಲಿದ್ದಾರೆ ಎಂದು ತಾವು ಹೇಳಿದ್ದಾಗಿ ಸಚಿವ ಅಂಬರೀಷ್ ತಿಳಿಸಿದ್ದಾರೆ.

ವಾಜಪೇಯಿ ಅವರನ್ನೂ ಹೊಗಳುತ್ತಿದ್ದರು
ಸಚಿವ ಅಂಬರೀಷ್, ಮೋದಿ ಹೆಸರು ಪ್ರಸ್ತಾಪಿಸುವ ಮೂಲಕ ಜನರ ಹೃದಯ ಭಾವನೆ ಹೊರಹಾಕಿದ್ದಾರೆ. ನರೇಂದ್ರ ಮೋದಿ ಜನರ ಮುಂದಿರುವ ಮಾದರಿ ನಾಯಕ. ಹೀಗಾಗಿ ಸಿದ್ದರಾಮಯ್ಯ ಅವರನ್ನು ಮೋದಿಗೆ ಹೋಲಿಸಿದ್ದಾರೆ. ಇದಕ್ಕಾಗಿ ಅಂಬರೀಷ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಒಂದು ಕಾಲದಲ್ಲಿ ಕಾಂಗ್ರೆಸ್ಸಿಗರು ಮಾಜಿ ಪ್ರಧಾನಿ ವಾಜಪೇಯಿ ಅವರನ್ನೂ ಇದೇ ರೀತಿ ಹೊಗಳುತ್ತಿದ್ದರು ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

ಅಂಬಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳದಿದ್ದರೆ ಸಾಕು
ಸಿಎಂ ಸಿದ್ದರಾಮಯ್ಯ ಅವರನ್ನು ಕರ್ನಾಟಕದ ನರೇಂದ್ರ ಮೋದಿ ಎಂದು ಹೋಲಿಸಿರುವುದಕ್ಕೆ ಅಂಬರೀಷ್ ಅವರನ್ನು ಬಿಜೆಪಿ ಹಾರ್ದಿಕವಾಗಿ ಅಭಿನಂದಿಸುತ್ತದೆ. ಕರ್ನಾಟಕದ ಮಂತ್ರಿಗಳಿಗೂ ಮೋದಿ ಆದರ್ಶಪ್ರಾಯವಾಗಿರುವುದು ಅವರ ಜನಪ್ರಿಯತೆ ಮತ್ತು ಕಾರ್ಯಶೈಲಿಗೆ ದೊರೆತ ಮನ್ನಣೆ.
ನರೇಂದ್ರ ಮೋದಿ ಅವರ ಜನಪ್ರಿಯತೆ ಗುರುತಿಸಿ ಸಿದ್ದರಾಮಯ್ಯ ಅವರನ್ನು ನರೇಂದ್ರ ಮೋದಿಯಂತೆ ಮಾಡುತ್ತೇವೆ ಎಂದು ಹೇಳಿಕೆ ನೀಡಿದ ಅಂಬರೀಷ್ ಅವರನ್ನು ಬಿಜೆಪಿ ಅಭಿನಂದಿಸುತ್ತೇವೆ. ಈ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಂಬರೀಷ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಿಲ್ಲ ಎಂದು ಪಕ್ಷ ಆಶಿಸುತ್ತದೆ ಎಂದು ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಎಸ್ ಪ್ರಕಾಶ್ ತಿಳಿಸಿದ್ದಾರೆ.

ತದ್ವಿರುದ್ಧದ ಆಡಳಿತಕ್ಕೆ ಹೋಲಿಕೆಯಷ್ಟೇ- ಬಿಎಲ್ ಶಂಕರ್
ಗುಜರಾತ್ ಸಿಎಂ ನರೇಂದ್ರ ಮೋದಿ ಅವರದು ಸಮಾಜ ವಿಭಜಕ ಧೋರಣೆ. ಆದರೆ, ಸಿದ್ದರಾಮಯ್ಯನವರದು ಎಲ್ಲ ಸಮುದಾಯಗಳನ್ನು ಸಮಾನತೆಯಡಿ ಮುಂದೆ ತೆಗೆದುಕೊಂಡು ಹೋಗಬೇಕೆಂಬ ಧೋರಣೆ. ಹೀಗಾಗಿ, ಸೈದ್ಧಾಂತಿಕವಾಗಿ ಇಬ್ಬರ ವ್ಯಕ್ತಿತ್ವ ಮತ್ತು ಆಡಳಿತದ ಪರಿಕಲ್ಪನೆಯೇ ಭಿನ್ನ. ಸಾಮಾಜಿಕ ಒಡಕು ಸೃಷ್ಟಿಸದೆ ಜಾತ್ಯತೀತ ಧೋರಣೆಯಲ್ಲಿ ರಾಜ್ಯವನ್ನು ಸಿದ್ದರಾಮಯ್ಯ ತೆಗೆದುಕೊಂಡು ಹೋಗುತ್ತಿದ್ದಾರೆ. ಇದಕ್ಕೆ ತದ್ವಿರುದ್ಧ ಆಡಳಿತದ ಹೋಲಿಸುವುದಕ್ಕೆ ಅಂಬರೀಷ್, ಮೋದಿ ಹೋಲಿಕೆ ಮಾಡಿರಬೇಕು'.

ಹೈಕಮಾಂಡ್ ವಿರುದ್ಧ ಸಿದ್ದು ಬಂಡೇಳುವ ಸೂಚನೆ
ಸಚಿವ ಅಂಬರೀಷ್ ಅವರು ಸಿದ್ದರಾಮಯ್ಯ ಅವರನ್ನು ನರೇಂದ್ರ ಮೋದಿಗೆ ಹೋಲಿಕೆ ಮಾಡಿರುವುದು ಬರುವ ದಿನಗಳಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡಿಗೆ ವಿರುದ್ಧವಾಗಿ ಬಂಡೇಳುವ ಸೂಚನೆ ಇರಬಹುದು. ಸಿದ್ದರಾಮಯ್ಯನವರನ್ನು ದೇಶಾದ್ಯಂತ ಸುತ್ತಿಸುತ್ತೇವೆ ಎಂದು ಅಂಬರೀಷ್ ಹೇಳಿರುವುದು ರಾಜ್ಯ ಕಾಂಗ್ರೆಸ್ಸಿನಲ್ಲೂ ಗುಂಪುಗಾರಿಕೆ ಬೆಳೆಯುತ್ತಿದೆ ಎಂಬುದಕ್ಕೆ ಸಾಕ್ಷಿ ಎಂದು ಜೆಡಿಎಸ್ ವಕ್ತಾರರಮೇಶ್ ಬಾಬು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications