ಉಪ ಚುನಾವಣೆ : ಆರೋಪ ಪ್ರತ್ಯಾರೋಪಕ್ಕೆ ತೆರೆ

ಸೋಮವಾರ ಬಹಿರಂಗ ಪ್ರಚಾರದ ಕೊನೆಯ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು.
ಸಿದ್ದರಾಮಯ್ಯ ಮಂಡ್ಯ ಹಾಗೂ ಕೆ.ಆರ್.ನಗರದಲ್ಲಿ, ಪರಮೇಶ್ವರ್ ಮಾಗಡಿಯಲ್ಲಿ ಪ್ರಚಾರ ನಡೆಸಿದರು. ದೇವೇಗೌಡರು ಕೆ.ಆರ್.ನಗರದಲ್ಲಿ, ಎಚ್.ಡಿ.ಕುಮಾರಸ್ವಾಮಿ ಕೆ.ಆರ್.ಪೇಟೆಯಲ್ಲಿ ಬಿಡುವಿಲ್ಲದೆ ಪ್ರಚಾರ ಮಾಡಿದರು.
ಬಹಿರಂಗ ಪ್ರಚಾರ ಅಂತ್ಯಗೊಂಡ ನಂತರ ಹೊರಗಿನಿಂದ ಬಂದವರು ಕ್ಷೇತ್ರ ಬಿಟ್ಟು ತೆರಳುವಂತೆ ಚುನಾವಣಾ ಆಯೋಗ ಆದೇಶ ನೀಡಿರುವುದರಿಂದ, ನಾಯಕರು ಬೆಂಗಳೂರಿಗೆ ಮರಳಿದ್ದಾರೆ. ಮಂಗಳವಾರ ಅಭ್ಯರ್ಥಿಗಳು ಹಾಗೂ ಸ್ಥಳೀಯ ಮುಖಂಡರು ಮತದಾರರ ಮನೆಬಾಗಿಲಿಗೆ ತೆರಳಿ ಮತಯಾಚಿಸಲಿದ್ದಾರೆ.
ಮತದಾನಕ್ಕೆ ಸಕಲ ಸಿದ್ಧತೆ : ಉಭಯ ಕ್ಷೇತ್ರಗಳಲ್ಲಿ ಬುಧವಾರ ಬೆಳಗ್ಗೆ 8 ರಿಂದ 5 ಗಂಟೆವರೆಗೆ ಮತದಾನ ನಡೆಯಲಿದ್ದು, ಮತದಾನಕ್ಕಾಗಿ ಎರಡೂ ಕ್ಷೇತ್ರಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಚುನಾವಣಾ ಆಯೋಗ ಮಾಡಿಕೊಂಡಿದೆ.
ಮಂಡ್ಯ ಲೋಕಸಭೆ ಕ್ಷೇತ್ರದ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 16,18,142 ಮತದಾರರಿದ್ದು, 1364 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 380 ಸೂಕ್ಷ್ಮ, 230 ಅತಿ ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 20,23,891 ಮತದಾರರಿದ್ದು, 1285 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 655 ಸೂಕ್ಷ್ಮ ಮತ್ತು 445 ಅತಿ ಸೂಕ್ಷ್ಮ ಮತಗಟ್ಟೆಗಳಾಗಿವೆ.
ಆಯೋಗದ ಕಣ್ಗಾವಲು : ಎರಡೂ ಕ್ಷೇತ್ರಗಳ ಚುನಾವಣೆಯಲ್ಲಿ ಅಕ್ರಮವಾಗಿ ಹಣ ಮತ್ತು ಮದ್ಯ ಸಾಗಣೆ ತಡೆಯಲು ಪೊಲೀಸರು ಹಾಗೂ ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದೆ. ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ.
ಪ್ರತಿ ವಾಹನ ಪರಿಶೀಲನೆ ಮಾಡಲು ಸೂಚನೆ ನೀಡಲಾಗಿದೆ. ಚುನಾವಣಾ ಅಕ್ರಮಗಳ ತಡೆಗಾಗಿ ಪೊಲೀಸ್, ಅಬಕಾರಿ, ಆದಾಯ ತೆರಿಗೆ ಹಾಗೂ ಚುನಾವಣಾ ಆಯೋಗದ ಅಧಿಕಾರಿಗಳ ತಂಡ ರಚಿಸಲಾಗಿದೆ.












Click it and Unblock the Notifications