ವಿಶ್ವ ಫೋಟೋಗ್ರಫಿ ದಿನಕ್ಕೊಂದಿಷ್ಟು ವಿಶಿಷ್ಟ ಚಿತ್ರಗಳು
ಒಂದು ಕ್ಷಣ ಯೋಚಿಸಿ, ಒಂದು ವೇಳೆ ಕ್ಯಾಮೆರಾವನ್ನು ಕಂಡುಹಿಡಿಯದೇ ಇದ್ದಿದ್ದರೆ, ಫೋಟೋಗ್ರಫಿ ಎನ್ನುವುದು ಇಲ್ಲದೇ ಇದ್ದಿದ್ದರೆ ನಮ್ಮ ಇಂದಿನ ಜೀವನ ಹೇಗಿರುತ್ತಿತ್ತು? ಆಧುನಿಕ ಜಗತ್ತು ಹೇಗಿರುತ್ತಿತ್ತು ಎಂಬುದರ ಕಲ್ಪನೆಯೇ ಜನರಿಗೆ ಇರುತ್ತಿರಲಿಲ್ಲ. ಪೋಟೋಗ್ರಫಿ ಎಂಬುದು ಜಗತ್ತಿನ ಸುಂದರ ಚಿತ್ರಣ ಕಟ್ಟಿಕೊಡುವ ಅದ್ಭುತ ಸಂವಹನ ಮಾಧ್ಯಮವಾಗಿ ಹೊರಹೊಮ್ಮಿದೆ.
ಸಾವಿರ ಪದಗಳನ್ನು ಒಂದು ಚಿತ್ರ ಹೇಳುತ್ತದೆ ಎಂಬ ಮಾತು ಸುಳ್ಳಲ್ಲ. ಹಾಗೆಯೆ, ಒಂದು ಅತ್ಯುತ್ತಮವಾದ ಚಿತ್ರ ತೆಗೆದರೆ, ಅದರ ಬಗ್ಗೆ ಒಂದೇ ಒಂದು ಪದವನ್ನು ಹೇಳುವ ಅಗತ್ಯವೂ ಇರುವುದಿಲ್ಲ. ಇದು ಛಾಯಾಚಿತ್ರಗಳ ಶಕ್ತಿ. ಫೇಸ್ ಬುಕ್ ನಂಥ ಸಾಮಾಜಿಕ ತಾಣದಲ್ಲಿ ಪ್ರತಿನಿತ್ಯ ತಮ್ಮ ಹೊಸ ಫೋಟೋ ಹಾಕಿಕೊಳ್ಳದಿದ್ದರೆ ಅಥವಾ ಇತರರೊಂದಿಗೆ ಹಂಚಿಕೊಳ್ಳದಿದ್ದರೆ ಅನೇಕರಿಗೆ ಸಮಾಧಾನವೇ ಇರುವುದಿಲ್ಲ.
ಅಂದ ಹಾಗೆ, ಆ. 19 ದಿನವನ್ನು 'ವಿಶ್ವ ಫೋಟೋಗ್ರಫಿ ದಿನ'ವನ್ನಾಗಿ ಆಚರಿಸಲಾಗುತ್ತಿದೆ. ಈ ದಿನವನ್ನು ಹುಟ್ಟುಹಾಕಿದ ಆಸ್ಟ್ರೇಲಿಯಾದ ಕೋರ್ಸ್ಕೆ ಆರ್ ಎಂಬುವವರ ಈ ಮಾತು ಎಷ್ಟು ಸತ್ಯ. ಅವರು ಹೇಳಿದ್ದು, "ಫೋಟೋಗ್ರಫಿಗೆ ಪ್ರಭಾವಶಾಲಿಯಾಗಿ ಕಥೆಯನ್ನು ಹೇಳುವ ಶಕ್ತಿಯಿದೆ ಎಂದು ನನ್ನ ಭಾವನೆ. ಒಂದು ಚಿತ್ರ ಸ್ಫೂರ್ತಿ ನೀಡಬಲ್ಲದು, ವಿಶ್ವದ ಬಲಾವಣೆಗೇ ನಾಂದಿ ಹಾಡಬಲ್ಲದು."
ಫೋಟೋಗ್ರಫಿ ಬಗ್ಗೆ ಇನ್ನು ಹೆಚ್ಚು ಹೇಳುವ ಅಗತ್ಯವಿಲ್ಲ. ಅವನ್ನು ನೋಡಿಯೇ ಸವಿಯಬೇಕು. ಇಲ್ಲಿ, ಒಂದೊಂದೂ ಒಂದೊಂದು ಕಥೆ ಹೇಳುವ ಕೆಲವೊಂದು ಚಿತ್ರಗಳನ್ನು ಆಯ್ದು ನೀಡಿದ್ದೇವೆ. ನಿಮ್ಮ ಬಳಿ ಇಂಥವೇ ಉತ್ತಮ ಚಿತ್ರಗಳಿದ್ದರೆ ನಮಗೆ ಕಳಿಸಿ. (ಇವು ಪಿಟಿಐ ಚಿತ್ರಗಳು)

ಅಮ್ಮನ ಎದೆಯಲ್ಲಿ ಹುದುಗಿದ ಮಗು
ದೆಹಿಲಿಯ ಬಿಸಿಲ ಬೇಗೆಗೆ ಕಂಗೆಟ್ಟ ಕೋತಿಯೊಂದು ತನ್ನ ಮಗುವನ್ನು ಎದೆಯಲ್ಲಿ ಹುದುಗಿಸಿಕೊಂಡು ರಕ್ಷಿಸುತ್ತಿರುವುದು. ಏನು ಹೇಳುತ್ತೀರಿ ಇದಕ್ಕೆ?

ಮಿಸಸ್ ಪರ್ಫೆಕ್ಷನಿಸ್ಟ್
ಆನೆಯ ಮುಖ, ಡೊಳ್ಳು ಹೊಟ್ಟೆ, ಕೈಯಲ್ಲಿ ಮೋದಕ ಹಿಡಿದ ಗಣಪನನ್ನು ಕಂಡರೆ ಏನೋ ಆನಂದ. ಗಣೇಶನ ಮೂರ್ತಿ ಕೂಡ ಅಷ್ಟೇ ಅಂದವಾಗಿರಬೇಕಲ್ಲವೆ? ಇಲ್ಲಿ ಮಹಿಳೆಯೊಬ್ಬರು ವಿನಾಯಕನ ಹುಬ್ಬನ್ನು ತಿದ್ದಿತೀಡಿ ಸುಂದರ ಮೂರ್ತಿಯನ್ನಾಗಿ ಮಾಡುತ್ತಿರುವುದು. ಸೆ.9ರಂದು ಬರುವ ಗಣೇಶ ಚತುರ್ಥಿಯಂದು ಗಣಪನ ಕೂಡಿಸ್ತೀರಲ್ವೆ?

ಯಾವತ್ತು ವಿಶ್ವ ತಂಬಾಕು (ರಹಿತ) ದಿನ?
ಫೋಟೋಗ್ರಫಿ ದಿನದಂತೆಯೇ ನಾನು ಅನೇಕಾನೇಕ ದಿನಗಳನ್ನು ಆಚರಿಸುತ್ತಿರುತ್ತೇವೆ. ಆದರೆ, ಇವುಗಳ ಬಗ್ಗೆ ಶ್ರೀಸಾಮಾನ್ಯರೇನರಿಗೆ ಎಷ್ಟು ಗೊತ್ತಿರುತ್ತದೆ. ಇಲ್ಲೊಬ್ಬ ಪಟ್ನಾದ ಮಹಿಳೆಯನ್ನು ನೋಡಿ, ವಿಶ್ವ ತಂಬಾಕು ರಹಿತ ದಿನದಂದು ಬುಸಬುಸನೆ ಹೊಗೆಯನ್ನು ಉಗುಳುತ್ತಿರುವುದು.

ಆಕಾಶಬುಟ್ಟಿಯು ನೀನು ನಿನ್ನ ಕಂಡಾಗ ಸಂತೋಷವೇನು
2013ರ ಏಪ್ರಿಲ್ 22ರಂದು ವಿಶ್ವದಾದ್ಯಂತ ಅರ್ಥ ಡೇ ಆಚರಿಸಲಾಯಿತು. ವಿದ್ಯುತ್ ಉಳಿಸುವ ಬಗ್ಗೆ ಮತ್ತು ಪರಿಸರವನ್ನು ರಕ್ಷಿಸುವ ಕುರಿತು ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ನವದೆಹಲಿಯಲ್ಲಿ ಪೇಪರಿನಿಂದ ತಯಾರಿಸಲಾದ ಕಂದೀಲುಗಳನ್ನು ಆಕಾಶಕ್ಕೆ ಹಾರಿಬಿಟ್ಟ ವಿಹಂಗಮ ದೃಶ್ಯ. (ಫೋಟೋ : ವಿಜಯ್ ವರ್ಮಾ)

ಎಲೆಲೆ ಮುದ್ದಿನ ಮಕಾವ್
ಗಿಣಿ ಜಾತಿಗೆ ಸೇರಿದ ಬೃಹತ್ ಗಾತ್ರದ ಮಕಾವ್ ಎಂಬ ಹಕ್ಕಿಯನ್ನು ಕೋಲ್ಕತಾದ ಮಹಿಳೊಬ್ಬರು ಮುದ್ದಿಸುತ್ತಿರುವುದು. ದುರ್ದೈವವೆಂದರೆ ಇಂಥ ಪಕ್ಷಿಗಳು ಝೂನಲ್ಲಿ ಮಾತ್ರ ಇಂದು ನೋಡಲು ಸಿಗುತ್ತಿವೆ. ಬನ್ನೇರುಘಟ್ಟ ಪ್ರಾಣಿಸಂಗ್ರಹಾಲಯದಲ್ಲಿಯೂ ಕಿರ್ ಕಿರ್ ಕಿರುಚುವ ಇಂಥ ಮಕಾವ್ ಪಕ್ಷಿಗಳಿವೆ.

ಗತಕಾಲದ ಪಳಿಯುಳಿಕೆ
ಈ ವರ್ಷ ಅತೀ ಹೆಚ್ಚು ಚಿತ್ರೀಕರಣಗೊಂಡಿದ್ದು ಉತ್ತರಾಖಂಡದ ವಾರಣಾಸಿಯಲ್ಲಿರುವ ಈ ಪುರಾತನ ದೇಗುಲ. ಎಂದೂ ಕಂಡರಿಯದ ವರ್ಷಧಾರೆ ಮತ್ತು ಮಂದಾಕಿನಿ ನದಿ ಉಕ್ಕೇರಿದ್ದರಿಂದ ಶಿವನ ಗುಡಿ ಮಾತ್ರವಲ್ಲದೆ ಸತ್ತಲಿನ ಪ್ರದೇಶವೆಲ್ಲವೂ ಧ್ವಂಸವಾಯಿತು. ಗತಕಾಲದ ಪಳಿಯುಳಿಕೆಯಂತೆ ಈ ದೇಗುಲ ಇಂದು ಉಳಿದಿದೆ.

ಸೂರ್ಯನ ರೌದ್ರಾವತಾರ ನೋಡಿದೆಯಾ?
ಆಹಾ ಸೌರ ಜ್ವಾಲೆ! ನಾಸಾದ ಸೋಲಾರ್ ಡೈನಾಮಿಕ್ ಆಬ್ಸರ್ವೇಟರಿ ಮೇ 12, 2013ರಂದು ಸೂರ್ಯ ಉಗುಳುತ್ತಿರುವ ಜ್ವಾಲೆಯ ಚಿತ್ರವನ್ನು ಸೆರೆಹಿಡಿದಿದೆ. ಸೂರ್ಯನ ರೌದ್ರಾವತಾರವನ್ನು ಫೋಟೋದಲ್ಲಿ ಅಲ್ಲದೆ ಇನ್ನೆಲ್ಲಿ ನೋಡಲು ಸಾಧ್ಯ?

ಬಿಸಿಲಾದರೇನು, ಮಳೆಯಾದರೇನು?
ಪ್ರತಿದಿನದ ಕೂಳಿಗಾಗಿ ಸತತವಾಗಿ ದುಡಿಯುವ ಅನಿವಾರ್ಯತೆ ಇರುವ ಅಮ್ಮಂದಿರಿಗೆ ಬಿಸಿಲಾದರೇನು, ಮಳೆಯಾದರೇನು, ಚಳಿಯಾದರೇನು. ತನ್ನ ಪುಟ್ಟಪುಟಾಣಿ ಮಗುವನ್ನು ಟವೆಲ್ಲಿನಿಂದ ಹೆಗಲಿಗೆ ಕಟ್ಟಿಕೊಂಡು, ಬಿಸಿಲು ಬೀಳದಿರಲೆಂದು ಕೊಡೆ ಸಿಕ್ಕಿಸಿಕೊಂಡು, ಸೈಕಲ್ ತುಳಿಯುತ್ತಿರುವ ಈ ಅಮ್ಮನಿಗೊಂದು ಸಾಷ್ಟಾಂಗ ನಮಸ್ಕಾರ.

ಅದ್ಭುತ ಬ್ಲಾಕ್ ಅಂಡ್ ವೈಟ್ ಫೋಟೋ
ಚಿತ್ರ ಎಷ್ಟು ಬಣ್ಣಗಳನ್ನು ಹೊಂದಿದೆ ಎಂಬುದರ ಮೇಲೆ ಅದರ ಗುಣಮಟ್ಟ ನಿರ್ಧಾರವಾಗುವುದಿಲ್ಲ. ಎಷ್ಟು ಅರ್ಥಗರ್ಭಿತವಾಗಿದೆ ಎಂಬುದು ಮುಖ್ಯ. ಭುವನೇಶ್ವರದ ಬಿಂದು ಸಾಗರ ಕೆರೆಯಲ್ಲಿ ಕಮಲಪುಷ್ಪವನ್ನು ಆಯುತ್ತಿರುವ ಯುವಕನ ಬ್ಲಾಕ್ ಅಂಡ್ ವೈಟ್ ಚಿತ್ರ ಅದ್ಭುತವಾಗಿ ಮೂಡಿಬಂದಿದೆ.

ಆಶೀರ್ವಾದ ಮಾಡಿ ಬಾಬಾ
ಇದೇ ವರ್ಷ ಆರಂಭದಲ್ಲಿ ಅಲಹಾಬಾದ್‌ನ ತ್ರಿವೇಣಿ ಸಂಗಮದಲ್ಲಿ ನಡೆದ ಮಹಾಕುಂಭ ಮೇಳದ ಸಂದರ್ಭದಲ್ಲಿ, ನಿರ್ವಾಣ ಸ್ಥಿತಿಯಲ್ಲಿರುವ ನಾಗಾ ಸಾಧುವೊಬ್ಬರಿಗೆ ಮಹಿಳೆಯೊಬ್ಬರು ಭಕ್ತಿಭಾವದಿಂದ ನಮಸ್ಕರಿಸುತ್ತಿರುವುದು.

ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು...
ಬಿಹಾರದ ಹಲ್ದಿಚಪ್ರಾ ಗ್ರಾಮದಲ್ಲಿ ನೆರೆಯನ್ನು ಲೆಕ್ಕಿಸದೆ ಹಾಲು ಮಾರಲು ಹೋಗುತ್ತಿರುವ ಗೌಳಿ. ನದಿ ದಾಟಿದ ಮೇಲೆ ಕ್ಯಾನಿನಲ್ಲಿದ್ದ ಹಾಲು ಚಹಾ ಬಣ್ಣಕ್ಕೆ ತಿರುದಿದ್ದರೂ ಆಶ್ಚರ್ಯವಿಲ್ಲ.

ಹೆಣ್ಣು ಹೂವ ಮುಡಿದು...
ಹೂವು ಚೆಲುವೆಲ್ಲ ತಂದೆಂದಿತು... ಹೆಣ್ಣು ಹೂವ ಮುಡಿದು ಚೆಲುವೆ ತಾನೆಂದಳು... ಸೂರ್ಯಕಾಂತಿ ಹೂಗಳ ನಡುವೆ ಸೂರ್ಯಕಾಂತಿಯಂಥ ಚೆಲುವೆ.

ಡೋಂಟ್ ಲಾಫ್, ಸ್ಮೈಲ್ ಪ್ಲೀಸ್
ಫೋಟೋದಲ್ಲಿ ಕೆಲವೊಬ್ಬರು ನಕ್ಕರೆ ಚೆನ್ನಾಗಿ ಕಾಣ್ತಾರೆ, ಕೆಲವೊಬ್ಬರು ಸ್ಮೈಲ್ ಮಾಡಿದ್ರೆ ಮಾತ್ರ ಸೂಪರಾಗಿ ಕಾಣ್ತಾರೆ, ಇನ್ನು ಕೆಲವೊಬ್ಬರು ಸುಮ್ಮನಿದ್ದರೆ ಮಾತ್ರ ಫೋಟೋಜೆನಿಕ್ ಆಗಿ ಕಾಣ್ತಾರೆ. ಇಲ್ಲಿ ಸಿದ್ಧಾರ್ಥ ಮಲ್ಯ ಮತ್ತು ಪ್ರೀತಿ ಜಿಂಟಾ ಜೋಡಿ ಹೇಗೆ ಕಾಣಿಸುತ್ತಿದೆ?

ಆಸ್ಟ್ರೋ ಮೋಹನ್ ಅವರು ತೆಗೆದ ಅದ್ಭುತ ಚಿತ್ರ
ಉದಯವಾಣಿ ದಿನಪತ್ರಿಕೆಯ ಹಿರಿಯ ನ್ಯೂಸ್ ಫೋಟೋಗ್ರಫರ್ ಆಗಿರುವ ಆಸ್ಟ್ರೋ ಮೋಹನ್ ಅವರ ಮೂರು ಚಿತ್ರಗಳು, ಹಂಗರಿಯ ಬುಡಾಪೆಸ್ಟ್ 4ನೇ ಏಜೆನ್ಸ್ ಅಂತಾರಾಷ್ಟ್ರೀಯ ಫೋಟೋಗ್ರಫಿ ಡಿಜಿಟಲ್ ಸಲಾನ್‌ಗೆ ಸ್ವೀಕೃತವಾಗಿವೆ. (ಚಿತ್ರ-ಲೇಖನ)

ಚೆಲುವಿನ ಸಾಗರದ ನಡುವೆ ಹೂಮಹಿಳೆಯರು
ಹೂಗಳ ತುಂಬಿ ತುಳುಕುವ ಬಣ್ಣ, ಅವುಗಳ ಅಂದ ಏನೋ ಚೆಂದ. ಆದರೆ, ಈ ಮಹಿಳೆಯರ ಬಾಳು ಈ ಹೂವುಗಳಷ್ಟೇ ಚೆಂದವಾಗಿರುತ್ತದಾ?

ಸಾಟಿ ಇಲ್ಲದ ಸೌಂದರ್ಯ
ಶ್ರೀನಗರದಲ್ಲಿರುವ ಏಷ್ಯಾದ ಅತಿ ದೊಡ್ಡ ಟ್ಯೂಲಿಪ್ ಗಾರ್ಡನ್ ನಲ್ಲಿ ಸೌಂದರ್ಯ ಸೂಸುತ್ತಿರುವ ಟ್ಯೂಲಿಪ್ ಹೂವುಗಳು.

ಹೂಗಳೊಂದಿಗೆ ಅಂತಿಮ ಪಯಣ
ಶಿವಸೇನೆಯ ಬಾಳಾ ಠಾಕ್ರೆ ಅಂತಿಮ ಯಾತ್ರೆ.












Click it and Unblock the Notifications