ಸೌದಿಯಲ್ಲಿ 20,000 ಭಾರತೀಯರ ಕೆಲಸ ಹೋಯ್ತು

ಭಾರತೀಯ ರಾಯಭಾರಿ ಕಚೇರಿ ಪರವಾಗಿ ಹೇಳಿಕೆ ನೀಡಿರುವ ಸಿ.ಬಿ.ಜಾರ್ಜ್, ಸೌದಿ ಅರೇಬಿಯಾದಲ್ಲಿ ನಿತಾಖತ್ ನಿಯಮ ಘೋಷಣೆಯಾದ ನಂತರ 20,000 ಭಾರತೀಯರು ದೇಶವನ್ನು ತೊರೆದಿದ್ದಾರೆ ಎಂದು ಹೇಳಿದ್ದಾರೆ.
ಸೌದಿ ಅರೇಬಿಯಾ ತೆರದು ಭಾರತಕ್ಕೆ ಮರಳಿರುವ ಜನರಲ್ಲಿ 5,000 ಮಂದಿ ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಕ್ಕೆ ಸೇರಿದವರಾಗಿದ್ದಾರೆ ಎಂದು ಜಾರ್ಜ್ ಮಾಹಿತಿ ನೀಡಿದ್ದಾರೆ.
ಸೌದಿ ಅರೇಬಿಯಾದಲ್ಲಿರುವ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ತನ್ನ ವಲಸೆಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಸರಿಪಡಿಸಲು ಅವಕಾಶ ನೀಡಲಾಗಿದೆ. ಈ ಅವಕಾಶವನ್ನು ಉಪಯೋಗಿಸಿಕೊಂಡು ಅವರು ಹೊಸ ಉದ್ಯೋಗ ಹುಡುಕಿಕೊಳ್ಳಬಹುದು ಎಂದು ಹೇಳಿದ್ದಾರೆ.
ಭಾರತೀಯರು ಹೊಸ ಉದ್ಯೋಗ ಹುಡುಕಿಕೊಳ್ಳದಿದ್ದರೆ, ನವೆಂಬರ್ ವೊಳಗೆ ಸೌದಿ ಅರೇಬಿಯಾವನ್ನು ಯಾವುದೇ ದಂಡ ಪಾವತಿಸದೇ ತೊರೆಯಬಹುದಾಗಿದೆ ಎಂದು ವಿವರ ನೀಡಿದ್ದಾರೆ. (ಸೌದಿಯಲ್ಲಿನ ಭಾರತೀಯರಿಗೆ ಕೊಂಚ ನೆಮ್ಮದಿ!)
ನಿತಾಕತ್ ಎಂದರೇನು : ಸೌದಿ ಅರೇಬಿಯಾದ ಹೊಸ ಕಾರ್ಮಿಕ ನೀತಿಯನ್ನು ನಿತಾಕತ್ ಎನ್ನುತ್ತಾರೆ. ಇದರ ಪ್ರಕಾರ, ಕಂಪನಿಗಳು 10 ಮಂದಿ ಹೊರದೇಶದವರ ಜೊತೆ ಒಬ್ಬರು ಸ್ಥಳೀಯ ಕೆಲಸಗಾರನಿಗೆ ಉದ್ಯೋಗ ನೀಡಬೇಕು.
ಈ ನೀತಿ ಜಾರಿಗೆ ಬಂದ ನಂತರ ಸಹಸ್ರಾರು ವಿದೇಶಿಯರು ಸೌದಿಯಲ್ಲಿ ಕೆಲಸ ಕಳೆದುಕೊಳ್ಳಲಿದ್ದಾರೆ. ಇವರಲ್ಲಿ ಸುಮಾರು 27 ಸಾವಿರಕ್ಕೂ ಅಧಿಕ ಭಾರತೀಯರಿದ್ದಾರೆ ಎಂದು ಅಂದಾಜಿಸಲಾಗಿದೆ. (ಸೌದಿ ಅರೇಬಿಯಾದಿಂದ ಸಾವಿರಾರು ನೌಕರರು ಭಾರತಕ್ಕೆ)
ಸೌದಿ ಸರ್ಕಾರ ನೀಡಿದ ಅಂತಿಮ ಗಡುವಿನ ನಂತರವೂ ವಿದೇಶಿಯರು ದೇಶದಲ್ಲಿದ್ದರೆ, ಬಂಧಿಸುವುದಾಗಿ ಸೌದಿ ಸರ್ಕಾರ ಆದೇಶ ನೀಡಿದೆ. ಆದ್ದರಿಂದ ಉದ್ಯೋಗ ವಂಚಿತರು ಭಾರತಕ್ಕೆ ಮರಳುತ್ತಿದ್ದಾರೆ.












Click it and Unblock the Notifications