ಮೋದಿ ಪ್ರಧಾನಿ ಆದರೆ ದಾವೂದ್ ಗಲ್ಲಿಗೇರುತ್ತಾನೆ!
ಮುಂಬೈ, ಆ.18 : ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಮಂತ್ರಿಯಾದರೆ, ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಗಲ್ಲು ಶಿಕ್ಷೆಯಾಗುತ್ತದೆ. ವಿದೇಶದ ಕಪ್ಪುಹಣ ಭಾರತಕ್ಕೆ ಹಡಗಿನಲ್ಲಿ ಬರುತ್ತದೆ ಎಂದು ಶಿವಸೇನೆ ತನ್ನ ಸಾಮ್ನಾ ಪತ್ರಿಕೆಯಲ್ಲಿ ಮೋದಿ ಅವರನ್ನು ಟೀಕಿಸಿದೆ.
ಶಿವಸೇನೆ ಮುಖವಾಣಿ ಸಾಮ್ನಾ ಪತ್ರಿಕೆ ಶುಕ್ರವಾರದ ಸಂಪಾದಕೀಯದಲ್ಲಿ ನರೇಂದ್ರ ಮೋದಿ ಅವರನ್ನು ವ್ಯಂಗ್ಯಮಿಶ್ರಿತವಾಗಿ ಟೀಕಿಸಲಾಗಿದೆ. ಆ ಮೂಲಕ ಶಿವಸೇನೆ ಕಾರ್ಯಾಧ್ಯಕ್ಷ ಉದ್ಭವ್ ಠಾಕ್ರೆ ಮೋದಿ ಅವರ ವಿರುದ್ಧ ಗುಡುಗಿದ್ದಾರೆ.

ಪತ್ರಿಕೆಯ ಸಂಪಾದಕೀಯದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ತಕ್ಷಣ ಕರಾಚಿಯಿಂದ ದಾವೂದ್ ಇಬ್ರಾಹಿಂನನ್ನು ಎಳೆದುತಂದು ಗಲ್ಲಿಗೇರಿಸುತ್ತಾರೆ. ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪುಹಣವನ್ನು ಹಡಗಿನ ಮೂಲಕ ದೇಶಕ್ಕೆ ತರಿಸಿ, ರೈತರ ಸಾಲ ತೀರಿಸುತ್ತಾರೆ ಎಂದು ಟೀಕಿಸಲಾಗಿದೆ.
ನರೇಂದ್ರ ಮೋದಿ ಪ್ರಧಾನಿ ಆದ ತಕ್ಷಣ ದೇಶದ ಎಲ್ಲಾ ಸಮಸ್ಯೆಗಳು ಪರಿಹಾವಾಗುತ್ತದೆ. ಪಾಕಿಸ್ತಾನದಲ್ಲಿರುವ ಭಯೋತ್ಪಾದಕರಾದ ಟೈಗರ್ ಮೆಮೊನ್, ಹಫೀದ್ ಸಯೀದ್ ರನ್ನು ದೇಶಕ್ಕೆ ಎಳೆದು ತಂದು ಗಲ್ಲುಶಿಕ್ಷೆ ವಿಧಿಸುತ್ತಾರೆ ಎಂದು ಲೇವಡಿ ಮಾಡಲಾಗಿದೆ.
ಭ್ರಷ್ಟರೆಲ್ಲಾ ಜೈಲಿಗೆ : ಸರ್ದಾರ್ ಪಟೇಲರಂತೆ ಮೋದಿಯವರಿಗೆ ಅಧಿಕಾರ ಸಿಕ್ಕಿದರೆ ದೇಶವನ್ನು ಕೊಳ್ಳೆ ಹೊಡೆಯುವ ಭ್ರಷ್ಟಾಚಾರಿಗಳನ್ನು ಜೈಲಿಗೆ ತಳ್ಳುತ್ತಾರೆ. ಹಡಗಿನಲ್ಲಿ ವಿದೇಶದಲ್ಲಿರುವ ಕಪ್ಪು ಹಣ ಭಾರತಕ್ಕೆ ಬಂದು ಬೀಳುತ್ತದೆ. ರೈತರು ಸಾಲ ತೀರಿಸಿ, ಸಂತಸದ ಜೀವನ ನಡೆಸುತ್ತಾರೆ ಎಂದು ಬರೆಯಲಾಗಿದೆ.
ನಿದ್ದೆ ಮಾತ್ರೆಗೆ ಬೇಡಿಕೆ : ನರೇಂದ್ರ ಮೋದಿ ಭಾಷಣದಿಂದಾಗಿ ಕಾಂಗ್ರೆಸ್ ಪಕ್ಷದ ಕೆಲವು ಸಚಿವರಿಗೆ ನಿದ್ದೆ ಬರುತ್ತಿಲ್ಲ. ಆದ್ದರಿಂದ ಅವರು, ನಿದ್ದೆ ಮಾತ್ರೆ ಪೂರೈಸುವಂತೆ ತಮ್ಮ ಸಹಾಯಕರಿಗೆ ಸೂಚಿಸಿದ್ದಾರೆ ಎಂದು ಠಾಕ್ರೆ ವ್ಯಂಗ್ಯವಾಡಿದ್ದಾರೆ. (ಪಿಟಿಐ ಚಿತ್ರ)












Click it and Unblock the Notifications