ಮೋದಿ ಭಾಷಣ ಮಾಡೋದು ಬಿಟ್ಟು ಕೆಲಸ ಮಾಡ್ಲಿ!

ಬೆಂಗಳೂರಿನಲ್ಲಿ ಶುಕ್ರವಾರ ಪ್ರತಿಕಾಗೋಷ್ಠಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿ ಆಗುವ ಹಗಲು ಕನಸು ಕಾಣುತ್ತಿದ್ದಾರೆ. ಅವರ ಕನಸು ಎಂದಿಗೂ ನನಸಾಗುವುದಿಲ್ಲ ಎಂದು ಭವಿಷ್ಯ ನುಡಿದರು.
ಪ್ರಧಾನಿ ಮನಮೋಹನ್ ಸಿಂಗ್ ಅವರ ಭಾಷಣವನ್ನು ಟೀಕಿಸುವ ಮೂಲಕ ಮೋದಿ, ತಮ್ಮನ್ನು ಅವರೊಂದಿಗೆ ಹೋಲಿಕೆ ಮಾಡಿಕೊಂಡಿದ್ದಾರೆ. ಪ್ರಧಾನಿ ಅವರೊಂದಿಗೆ ಹೋಲಿಸಿಕೊಂಡರೆ ಮೋದಿ ಪ್ರಧಾನಿ ಆಗುವುದಿಲ್ಲ ಎಂದು ವ್ಯಂಗ್ಯವಾಡಿದರು.
ಸ್ವಾತಂತ್ರ್ಯ ದಿನದಂದು ಪ್ರಧಾನಿಯವರು ಮಾಡುವ ಭಾಷಣ ಐತಿಹಾಸಿಕವಾದುದು. ಯಾವುದೇ ರಾಜ್ಯದ ಮುಖ್ಯಮಂತ್ರಿಗಳು ಅದನ್ನು ಟೀಕಿಸಿದ ಉದಾಹರಣೆಗಳಿಲ್ಲ. ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರೇ ಪ್ರಧಾನಿ ಭಾಷಣಕ್ಕೆ ಪ್ರತಿಕ್ರಿಯೆ ನೀಡಬಾರದು ಎಂದು ಹೇಳಿದ್ದಾರೆ.
ಎಲ್.ಕೆ.ಅಡ್ವಾಣಿ ಅವರಿಗಿರುವ ಪ್ರಬುದ್ಧತೆ ನರೇಂದ್ರ ಮೋದಿ ಅವರಿಲ್ಲ. ಅಪ್ರಬುದ್ಧ ನಡವಳಿಕೆವುಳ್ಳ ಇಂತಹ ವ್ಯಕ್ತಿ ಪ್ರಧಾನಿ ಆಗಲು ಸಾಧ್ಯವಿಲ್ಲ. ಭಾಷಣ ಮಾಡುವುದು ಬಿಟ್ಟು ನರೇಂದ್ರ ಮೋದಿ ಅವರು ಗುಜರಾತ್ ರಾಜ್ಯದ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎಂದು ಖರ್ಗೆ ಸಲಹೆ ನೀಡಿದರು.
ಗುಜರಾತ್ ನಂ 1 ಹೇಗೆ : ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಗುಜರಾತ್ ನಂ1 ಸ್ಥಾನದಲ್ಲಿದೆ ಎಂದು ಭಾಷಣ ಮಾಡುತ್ತಾರೆ. ಯೋಜನಾ ಆಯೋಗದ ವರದಿಯನ್ನು ನೋಡಿ ಅಭಿವೃದ್ಧಿಯ ವಿಚಾರದಲ್ಲಿ ಗುಜರಾತ್ 10-12ನೇ ಸ್ಥಾನದಲ್ಲಿದೆ.
ಕೇರಳ, ಹರ್ಯಾಣ, ಮಹಾರಾಷ್ಟ್ರ ರಾಜ್ಯಗಳು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿವೆ. ಗುಜರಾತ್ ಅಭಿವೃದ್ಧಿ ವಿಚಾರದಲ್ಲಿ ಮೊದಲು ಬಂದಿದ್ದು ಯಾವಾಗ ಎಂದು ಖರ್ಗೆ ಪ್ರಶ್ನಿಸಿದರು. ಗುಜರಾತ್ ರಾಜ್ಯವನ್ನು ನಂ1 ಮಾಡಿ ನಂತರ ಮೋದಿ ಬೇರೆ ರಾಜ್ಯಗಳನ್ನು ಟೀಕಿಸಲಿ ಎಂದರು.
ಗೆಲುವು ಖಚಿತ : ಕರ್ನಾಟಕದಲ್ಲಿ ನಡೆಯುತ್ತಿರುವ 2 ಲೋಕಸಭೆ ಉಪ ಚುನಾವಣೆ ಮತ್ತು 3 ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಲಿದೆ. ಕಾಂಗ್ರೆಸ್ ಪಕ್ಷವನ್ನು ಜನರು ಬೆಂಬಲಿಸಿದ್ದಾರೆ.
ಪಕ್ಷದ ಆಡಳಿತ ಜನರಿಗೆ ತೃಪ್ತಿ ತಂದಿದೆ. ಆದ್ದರಿಂದ ಉಪ ಚುನಾವಣೆಯಲ್ಲಿಯೂ ಪಕ್ಷವನ್ನು ಜನರು ಬೆಂಬಲಿಸುತ್ತಾರೆ. ನಾವು ಜಯಗಳಿಸುತ್ತೇವೆ ಎಂದು ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಶನಿವಾರದಿಂದ ಎರಡು ದಿನಗಳ ಕಾಲ ಪ್ರಚಾರ ನಡೆಸುತ್ತೇನೆ ಎಂದು ಖರ್ಗೆ ಘೋಷಿಸಿದರು.












Click it and Unblock the Notifications