ವೇತನವಿಲ್ಲದೆ ಕಂಗಾಲಾದ ಕೆಎಸ್ಆರ್ ಟಿಸಿ ಸಿಬ್ಬಂದಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಆ.16ರ ಬಂದರೂ ಜುಲೈ ತಿಂಗಳ ಸಂಬಳ ಪಡೆದಿಲ್ಲ. ಜನರನ್ನು ಸುರಕ್ಷಿತವಾಗಿ ಅವರ ಊರಿಗೆ ಸೇರಿಸುತ್ತಿರುವ ಸಿಬ್ಬಂದು ಸಂಬಳ ತಡವಾಗಲು ಆಡಳಿತ ಮಂಡಳಿಯೇ ಕಾರಣ ಎಂದು ದೂರುತ್ತಿದ್ದಾರೆ.
ಆಷಾಢ ಮಾಸ, ಆಂಧ್ರಪ್ರದೇಶಕ್ಕೆ ಬಸ್ ಸ್ಥಗಿತ, ಮಳೆ ಮುಂತಾದ ಕಾರಣಗಳಿಂದಾಗಿ ಸಂಸ್ಥೆಗೆ ಆದಾಯ ಕಡಿಮೆ ಆಗಿದೆ. ಆದ್ದರಿಂದ ನೌಕರರಿಗೆ ಸಂಬಳ ನೀಡುವುದು ವಿಳಂಬವಾಗುತ್ತಿದೆ ಎಂದು ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.
ಮೈಸೂರು, ಹಾಸನ ಮತ್ತು ಚಿಕ್ಕಮಗಳೂರು ವಿಭಾಗದ ಸಂಸ್ಥೆಯ ನೌಕರರು ಆ.14ರ ವರೆಗೂ ತಮ್ಮ ಜುಲೈ ತಿಂಗಳ ಸಂಬಳ ಪಡೆದಿರಲಿಲ್ಲ. ಉಳಿದ ವಿಭಾಗಗಳ ನೌಕರರು ಆ.8ರಂದು ತಮ್ಮ ಸಂಬಳ ಪಡೆದಿದ್ದಾರೆ.
ಮಹಿಳೆಯರ ಅಸಮಾಧಾನ : ಕೆಎಸ್ಆರ್ ಟಿಯಲ್ಲಿ ಕಂಡೆಕ್ಟರ್ ಆಗಿ ಕೆಲಸ ಮಾಡುತ್ತಿರುವ ಮಹಿಳಾ ನೌಕರರು ಸಂಸ್ಥೆಯು ಸಂಬಳ ನೀಡಲು ವಿಳಂಬ ಮಾಡುತ್ತಿರುವುದನ್ನು ಖಂಡಿಸುತ್ತಿದ್ದಾರೆ. ಹಬ್ಬಗಳು, ಮನೆಯ ಖರ್ಚು ಮುಂತಾದವುಗಳಿಗೆ ನಾವು ಸಂಬಳವನ್ನು ಅವಲಂಬಿಸಿದ್ದೇವೆ. ಸಂಬಳವನ್ನು ಸಕಾಲದಲ್ಲಿ ನೀಡದಿದ್ದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಏಕೆ ವಿಳಂಬ : ನೌಕರರಿಗೆ ಸಂಬಳ ನೀಡುವುದು ಸ್ವಲ್ಪ ವಿಳಂಬವಾಗಿದೆ. ಕಳೆದ ತಿಂಗಳು ಸಂಬಳಕ್ಕಾಗಿಯೇ 45 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಸದ್ಯ ಎಲ್ಲಾ ವಿಭಾಗದ ನೌಕರಿಗೂ ವೇತನ ನೀಡಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್. ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಮಾನ್ಸೂನ್ ಋತುವಿನಿಂದಾಗಿ ಸಂಸ್ಥೆಯ ಆದಾಯ ಕಡಿಮೆ ಆಗಿದೆ. ಆಷಾಢ ಮಾಸ ಆರಂಭವಾದ ನಂತರ ಜನರ ಓಡಾಟ ಕಡಿಮೆ ಆಗಿ ಸಂಸ್ಥೆಗೆ ನಷ್ಟವಾಗುತ್ತಿತ್ತು. ತೆಲಂಗಾಣ ರಾಜ್ಯ ರಚನೆ ಪ್ರತಿಭಟನೆಯಿಂದಾಗಿ ಆಂಧ್ರಪ್ರದೇಶಕ್ಕೆ ಸಂಚರಿಸುವ ಬಸ್ ಗಳನ್ನು ನಿಲ್ಲಿಸಲಾಗಿದೆ. (ತೆಲಂಗಾಣ ಪ್ರತಿಭಟನೆ ಕೆಎಸ್ಆರ್ ಟಿಸಿಗೆ ನಷ್ಟ)
ಸಂಸ್ಥೆಗೆ ದಿನಕ್ಕೆ 60 ಲಕ್ಷ ನಷ್ಟ ಉಂಟಾಗಿದ್ದರಿಂದ ಆದಾಯ ಕಡಿಮೆ ಆಗಿ ವೇತನ ನೀಡಲು ವಿಳಂಬವಾಗಿತ್ತು ಎಂದು ಸಂಸ್ಥೆಯ ಹಿರಿಯ ಅಧಿಕಾರಿಗಳೊಬ್ಬರು ತಿಳಿಸಿದ್ದಾರೆ. ಖಾಸಗಿ ಪೆಟ್ರೋಲ್ ಬಂಕ್ ಗಳಿಂದ ಡೀಸೆಲ್ ಖರೀದಿ ಮಾಡುತ್ತಿರುವುದರಿಂದ ಸಂಸ್ಥೆಗೆ ನಷ್ಟ ಉಂಟಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications