ಸಿಸ್ಕೋದಲ್ಲಿ 4000 ಉದ್ಯೋಗ ಕಡಿತ

ನೆಟ್ವರ್ಕಿಂಗ್ ಕ್ಷೇತ್ರದಲ್ಲಿ ಉಂಟಾಗಿರುವ ಏರಿಳಿತ ಹಾಗೂ ಹೆಚ್ಚಾದ ಉದ್ಯೋಗಿಗಳ ಸಂಖ್ಯೆ ಸಂಸ್ಥೆಗೆ ಸಮಸ್ಯೆಯಾಗಿದೆ. ಗುರುವಾರ ನಾಸ್ಡಾಕ್ ನಲ್ಲಿ ಸುಮಾರು ಶೇ 9 ರಷ್ಟು ಷೇರುಗಳನ್ನು ಕಳೆದುಕೊಂಡ ಸಿಸ್ಕೋ ತಕ್ಷಣವೇ ಈ ನಿರ್ಧಾರ ಕೈಗೊಂಡಿದೆ.
ಜುನಿಪರ್ ನೆಟ್ವರ್ಕ್ಸ್ ಹಾಗೂ ಪಾಲೊ ಆಲ್ಟೋ ನೆಟ್ವರ್ಕ್ಸ್ ಜತೆ ಪೈಪೋಟಿ ನಡೆಸಲು ಆಗದೆ ಕಷ್ಟ ಪಡುತ್ತಿರುವ ಸಿಸ್ಕೋ ಸಂಸ್ಥೆ ಗೃಹಪಯೋಗಿ ನೆಟ್ವರ್ಕಿಂಗ್ ಕ್ಷೇತ್ರಕ್ಕೂ ಕಾಲಿರಿಸಿ ಮುರ್ನಾಲ್ಕು ವರ್ಷವಾದರೂ ಏಳಿಗೆ ಕಂಡಿಲ್ಲ.
ಇತ್ತೀಚಿನ ತ್ರೈಮಾಸಿಕದಲ್ಲೂ ನಿರೀಕ್ಷಿತ ಮಟ್ಟದ ಫಲಿತಾಂಶ ಹೊರ ಹಾಕಲು ಆಗದಿರುವ ಕಾರಣ ಡಾಟಾ ಸೆಂಟರ್, ಕ್ಲೌಡ್ ನೆಟ್ವರ್ಕಿಂಗ್ ಕ್ಷೇತ್ರಕ್ಕೂ ಸಾಧಕಗಳನ್ನು ಒದಗಿಸಲು ಸಿಸ್ಕೋ ಮುಂದಾಗಿದೆ.
ಸಂಪನ್ಮೂಲಗಳ ವಿಕೇಂದ್ರಿಕರಣ ಮಾಡಬೇಕಿದೆ. ಒಂದಿಷ್ಟು ಮಾನವ ಸಂಪನ್ಮೂಲಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಜಾನ್ ಚೇಂಬರ್ಸ್ ಹೇಳಿದ್ದಾರೆ.
ಕಳೆದ ತಿಂಗಳು ಸೈಬರ್ ಸುರಕ್ಷತಾ ಸಂಸ್ಥೆ ಸೋರ್ಸ್ ಫೈರ್ ಖರೀದಿ ಮಾಡಲು 2.7 ಬಿಲಿಯನ್ ಡಾಲರ್ ಮುಂದಿಟ್ಟುಕೊಂಡು ಡೀಲ್ ಕುದುರಿಸಿತ್ತು. ಅದರೆ, ಈ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳಲಿಲ್ಲ.
2011ರಲ್ಲೂ ಕೂಡಾ ಇದೇ ಅವಧಿಯಲ್ಲಿ ಒಂದಷ್ಟು ಉದ್ಯೋಗಿಗಳನ್ನು ಮನೆಗೆ ಕಳಿಸಲಾಗಿತ್ತು. ನೆಟ್ವರ್ಕಿಂಗ್ ಕ್ಷೇತ್ರದಲ್ಲಿ ಕಿಂಗ್ ಸಿಸ್ಕೋ ಕಂಪನಿಯಲ್ಲಿ ಶೇ.7ರಷ್ಟು ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿ 5,000 ನೌಕರರು ಬೆಚ್ಚಗೆ ಮನೆ ಕಳಿಸಿತ್ತು. ಈಗ ಸುಮಾರು 4000 ಉದ್ಯೋಗಿಗಳು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಉದ್ಯೋಗ ಕಡಿತ ಮಾಡುವುದರಿಂದ ವಾರ್ಷಿಕ 1 ಬಿಲಿಯನ್ ಡಾಲರ್ ಉಳಿತಾಯವಾಗಲಿದೆ. ಒಂದು ಸಾವಿರದಷ್ಟು ನೌಕರರು ತಾವಾಗಿಯೇ ಅವಧಿಪೂರ್ವ ನಿವೃತ್ತಿ ತೆಗೆದುಕೊಳ್ಳಲು ಬಯಸಿದ್ದಾರೆ, ನಾಲ್ಕು ಸಾವಿರ ಜನರನ್ನು ಸಿಸ್ಕೋ ಮನೆಗೆ ಕಳಿಸಲಿದೆ ಎಂದು ತಿಳಿದು ಬಂದಿದೆ.












Click it and Unblock the Notifications