ಭಲೇ! ಬ್ರಿಟನ್ ಸಂಸತ್ತಿನಲ್ಲಿ ನರೇಂದ್ರ ಮೋದಿಗೆ ಮಣೆ
ಅಹಮದಾಬಾದ್, ಆಗಸ್ಟ್ 14: ನಮಗೆ ಸ್ವಾತಂತ್ರ್ಯವನ್ನು ವಾಪಸ್ ಕೊಟ್ಟ ಬ್ರಿಟೀಶರ ನಾಡಿನಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ವಿಶೇಷ ಮಣೆ ಹಾಕಲಾಗಿದೆ.
ಗೋಧ್ರೋತ್ತರ ಹಿಂಸಾಚಾರದಿಂದಾಗಿ ನರೇಂದ್ರ ಮೋದಿ ಅವರ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಬ್ರಿಟನ್ ಸರಕಾರ ತೆರವುಗೊಳಿಸಿದ 10 ತಿಂಗಳ ಬಳಿಕ, ಇದೀಗ ಅಲ್ಲಿನ ಆಡಳಿತಾರೂಢ ಮತ್ತು ಪ್ರಮುಖ ರಾಜಕೀಯ ಪಕ್ಷ ಭಾರತೀಯ ಗುಂಪುಗಳು ಬ್ರಿಟನ್ ಗೆ ಭೇಟಿ ನೀಡುವಂತೆ ಮೋದಿ ಅವರಿಗೆ ಆಹ್ವಾನ ನೀಡಿವೆ.

ಬ್ರಿಟನಿನ ಪ್ರತಿಪಕ್ಷವಾದ ಲೇಬರ್ ಪಾರ್ಟಿಯ ಭಾರತೀಯ ಗುಂಪಿನ ಅಧ್ಯಕ್ಷ ಮತ್ತು ಸಂಸದರೂ ಆದ ಬ್ಯಾರಿ ಗಾರ್ಡಿನರ್ ಕಳೆದ ವಾರ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು 'ಆಧುನಿಕ ಭಾರತದ ಭವಿಷ್ಯ' ಎಂಬ ವಿಷಯವಾಗಿ ಹೌಸ್ ಆಫ್ ಕಾಮನ್ಸ್ ನಲ್ಲಿ ಭಾಷಣ ಮಾಡುವಂತೆ ವಿನಂತಿಸಿದ್ದಾರೆ. 'ಆಧುನಿಕ ಭಾರತದ ಭವಿಷ್ಯ' ಮೋದಿ ಕೈಯಲ್ಲಿದೆ ಎಂದು ಬ್ರಿಟನ್ ಸಂಸದರಿಗೆ ಅನಿಸಿರುವುದು ಸ್ವಾಗತಾರ್ಹ.
'ಭಾರತದ ಸಂಭವನೀಯ ಪ್ರಧಾನಿ ಎಂದೇ ಪರಿಗಣಿತರಾಗಿರುವ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಮತ್ತು ಅವರ ಮಾತುಗಳನ್ನು ಆಲಿಸಲು ಬ್ರಿಟನ್ ಜನತೆ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಸಮುದಾಯವೂ ಆಸಕ್ತವಾಗಿದೆ. ಮೋದಿ ಒಬ್ಬ ವಿಶಿಷ್ಟ ರಾಜಕಾರಣಿಯಾಗಿದ್ದು, ಅವರನ್ನು ನಿರ್ಲ್ಯಕ್ಷಿಸಲಾಗದು. ಮೋದಿ ಭೇಟಿಯಲ್ಲಿ ಬ್ರಿಟನ್ ದೇಶದ ಹಿತಾಸಕ್ತಿಯೂ ಅಡಗಿದೆ' ಎಂದು ಲೇಬರ್ ಪಾರ್ಟಿಯ ಮತ್ತೊಬ್ಬ ಸಂಸದ ಬ್ರೆಂಟ್ ನಾರ್ತ್ ಹೇಳಿದ್ದಾರೆ.
ಇದರ ಬೆನ್ನಲ್ಲೇ ಆಗಸ್ಟ್ 9ರಂದು ಆಡಳಿತಾರೂಢ ಕನ್ಸರ್ವೇಟಿವ್ ಪಾರ್ಟಿಯ ಭಾರತೀಯ ಗುಂಪು ಕೂಡಾ ಮೋದಿ ಬ್ರಿಟನ್ ಭೇಟಿಗೆ ಆಹ್ವಾನವನ್ನು ನೀಡಿದೆ. ಗುಂಪಿನ ಸಹ ಅಧ್ಯಕ್ಷ ಮತ್ತು ಸಂಸದ ಶೈಲೇಶ್ ವರ ಅವರು ಈ ಸಂಬಂಧ ಮೋದಿಗೆ ಪತ್ರ ಬರೆದಿದ್ದಾರೆ.
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ












Click it and Unblock the Notifications