ಸ್ವಾತಂತ್ರ್ಯ ದಿನಾಚರಣೆ, ಖೈದಿಗಳಿಗಿಲ್ಲ ಬಿಡುಗಡೆ

ರಾಜ್ಯದ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಖೈದಿಗಳು, ಉತ್ತಮ ನಡವಳಿಕೆ ತೋರಿದರೆ ಅವರನ್ನು ಸ್ವಾತ್ರಂತ್ರ್ಯ ದಿನಾಚರಣೆ, ಗಣ ರಾಜ್ಯೋತ್ಸವದಂದು ಬಿಡುಗಡೆ ಮಾಡುವುದು ಸಂಪ್ರದಾಯ. ಆದರೆ, ಕಳೆದ ಆರು ವರ್ಷಗಳಿಂದ ರಾಜ್ಯದಲ್ಲಿ ಯಾವ ಖೈದಿಗಳು ಬಿಡುಗಡೆಗೊಂಡಿಲ್ಲ.
ಹಿಂಡಲಗಾ ಜೈಲಿನಲ್ಲಿ ಸುಮಾರು 100 ಖೈದಿಗಳು ಬಿಡುಗಡೆಗಾಗಿ ಆರು ವರ್ಷದಿಂದ ಕಾದು ಕುಳಿತಿದ್ದಾರೆ. 2012ರಲ್ಲಿ ಈ ಖೈದಿಗಳು 10 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿ, ಸನ್ನಡೆತೆ ಆಧಾರದಲ್ಲಿ ತಮ್ಮನ್ನು ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದರು.
ಈ ಖೈದಿಗಳು 67ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಬಿಡುಗಡೆಗೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಬಿಡುಗಡೆಗೊಳ್ಳುವ ಖೈದಿಗಳ ಪಟ್ಟಿಯನ್ನು ಬಂಧಿಖಾನೆ ಇಲಾಖೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಆದರೆ, ಅದಕ್ಕೆ ಇದುವರೆಗೂ ಒಪ್ಪಿಗೆ ಸಿಕ್ಕಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸರ್ಕಾರದ ಸಚಿವರು ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪ ಚುನಾವಣೆ ಕಾರ್ಯದಲ್ಲಿ ಬ್ಯುಸಿಯಾಗಿದ್ದು, ಖೈದಿಗಳ ಪಟ್ಟಿಗೆ ಅಂತಿಮ ಒಪ್ಪಿಗೆ ನೀಡುವ ಕಾರ್ಯ ವಿಳಂಬವಾಗಿದೆ. ಸ್ವಾತಂತ್ರ್ಯ ದಿನಾಚರಣೆಗೆ ಎರಡು ದಿನ ಬಾಕಿ ಇದ್ದು, ಖೈದಿಗಳ ಪಟ್ಟಿ ಅಂತಿಮಗೊಂಡಿಲ್ಲ.
ಸನ್ನಡೆತೆ ಹೊಂದಿರುವ ಖೈದಿಗಳು ತಮ್ಮನ್ನು ಬಿಡುಗಡೆ ಮಾಡಿ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಆದರೆ, ಈ ಪತ್ರಕ್ಕೂ ಸರ್ಕಾರ ಯಾವುದೇ ಉತ್ತರ ನೀಡಿಲ್ಲ. ಆದ್ದರಿಂದ ಈ ಬಾರಿಯು ಖೈದಿಗಳು ಬಿಡುಗಡೆಗೊಳ್ಳುವುದಿಲ್ಲ ಎಂಬುದು ಸ್ಪಷ್ಟವಾಗಿದೆ.
ಸರ್ಕಾರ ರಾಜ್ಯಪಾಲರ ಅನುಮತಿ ಪಡೆದು ಉತ್ತಮ ನಡತೆ ಹೊಂದಿರುವ ಖೈದಿಗಳನ್ನು ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣ ರಾಜ್ಯೋತ್ಸವದಂದು ಬಿಡುಗಡೆ ಮಾಡುತ್ತದೆ. ಆದರೆ, ಕರ್ನಾಟಕದ ರಾಜ್ಯಪಾಲರಾಗಿ ಎಚ್.ಆರ್.ಭಾರದ್ವಾಜ್ ಅಧಿಕಾರವಹಿಸಿಕೊಂಡ ದಿನದಿಂದ ಈ ಸಂಪ್ರದಾಯವನ್ನು ನಿಲ್ಲಿಸಲಾಗಿದೆ.
(67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ)












Click it and Unblock the Notifications